ನವದೆಹಲಿ: ಸಾರ್ವಜನಿಕ ಸ್ಥಳ ಅಥವಾ ರಸ್ತೆಗಳನ್ನು ಪ್ರತಿಭಟನಾಕಾರರು ಅನಿರ್ದಿಷ್ಟಾವಧಿವರೆಗೆ ಆಕ್ರಮಿಸಿಕೊಳ್ಳುವಂತಿಲ್ಲ. ಹೀಗೆ ಪ್ರತಿಭಟನೆ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅಲ್ಲದೇ ಅವರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ…ಇದು ಶಾಹೀನ್ ಬಾಗ್ ನಲ್ಲಿ ನಿರಂತರವಾಗಿ ರಸ್ತೆಯಲ್ಲೇ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದವರಿಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದ್ದು ಹೀಗೆ.
“ಶಾಹೀನ್ ಬಾಗ್ ಆಗಲಿ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳವಾಗಲಿ ಅನಿರ್ದಿಷ್ಟಾವಧಿವರೆಗೆ ಆಕ್ರಮಿಸಿಕೊಂಡು ಪ್ರತಿಭಟನೆ ನಡೆಸುವಂತಿಲ್ಲ. ಇಂತಹ ಘಟನೆಗಳು ನಡೆದಾಗ ಆಡಳಿತ ವರ್ಗ ತಕ್ಷಣವೇ ಕ್ರಮ ಕೈಗೊಂಡು ಮುಕ್ತವಾಗಿ ಓಡಾಡಲು ಅವಕಾಶ ಮಾಡಿಕೊಡಬೇಕು. ಹೀಗಾಗಿ ಕೋರ್ಟ್ ಭುಜದ ಮೂಲಕ ಗುಂಡು ಹಾರಿಸಲು ಕಾಯಬೇಡಿ” ಎಂದು ತೀಕ್ಷ್ಣವಾಗಿ ಹೇಳಿದೆ.
ವರ್ಷದ ಆರಂಭದಲ್ಲಿ ದೆಹಲಿಯ ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ್ದ ಪ್ರತಿಭಟನೆ ವಿರುದ್ಧ ದಾಖಲಾಗಿದ್ದ ಹಲವು ದೂರುಗಳ ಅರ್ಜಿಯ ವಿಚಾರಣೆ ನಡೆಸಿದ ವೇಳೆ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.
ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಅದನ್ನು ಬಿಟ್ಟು ನ್ಯಾಯಾಲಯಗಳ ಹಿಂಬದಿ ಅಡಗಿಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಶಾಹೀನ್ ಬಾಗ್ ಪ್ರದೇಶದಲ್ಲಿ ನಡೆಯುತ್ತಿದ್ದ ಸಿಎಎ ವಿರೋಧಿ ಹೋರಾಟಗಾರರನ್ನು ತೆರವುಗೊಳಿಸಲು ದೆಹಲಿ ಪೊಲೀಸರು ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಪ್ರತಿಭಟನೆ ನಡೆಸಲು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಆದರೆ ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿವರೆಗೆ ಬಂದ್ ಮಾಡಿ ಪ್ರತಿಭಟನೆ ನಡೆಸಬಾರದು. ಅದಕ್ಕೆ ಬೇರೆ ಸ್ಥಳಗಳನ್ನು ನಿಗದಿಮಾಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಸಂಜಯ್ ಕಿಶನ್ ಕೌಲ್ ನೇತೃತ್ವದ ತ್ರಿಸದಸ್ಯ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.
ಇದನ್ನೂ ಓದಿ:ಡ್ರಗ್ಸ್ ಕೇಸ್; ಒಂದು ತಿಂಗಳ ಬಳಿಕ ರಿಯಾಗೆ ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನು ಮಂಜೂರು
ಸುಮಾರು ಮೂರು ತಿಂಗಳ ಕಾಲ ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆದಿದ್ದು, ಮಹಿಳೆಯರು, ಮಕ್ಕಳು ಭಾರೀ ಪ್ರಮಾಣದಲ್ಲಿ ಸೇರಿದ್ದರಿಂದ ಶಾಹೀನ್ ಬಾಗ್ ಸಿಎಎ ವಿರೋಧಿ ಹೋರಾಟದ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿತ್ತು. ಕೋವಿಡ್ 19 ಸೋಂಕು ಹರಡಲು ಆರಂಭವಾದ ನಂತರ ಮಾರ್ಚ್ ತಿಂಗಳಿನಲ್ಲಿ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ಅಂತ್ಯಗೊಳಿಸಿದ್ದರು.