ಶಹಾಪುರ: ಚಳಿಗಾಲ ಮುಗಿಯುತ್ತಿದ್ದಂತೆ ಬೇಸಿಗೆ ಆರಂಭದಲ್ಲಿ ಸಗರ ಗ್ರಾಮದ ಶಂಕರರಾಯನ ಕೆರೆಗೆ ಆಗಮಿಸಿ ವಿಹರಿಸುತ್ತಿದ್ದ ವಿವಿಧ ಪಕ್ಷಿಗಳಿಗೆ ಈಗ ಬರದ ಬಿಸಿ ತಟ್ಟಿದೆ.
ಪ್ರತಿ ವರ್ಷ ವಿವಿಧ ತಳಿಯ ರಂಗು ರಂಗಿನ ಪಕ್ಷಿಗಳು ಸಾಲು ಸಾಲಾಗಿ ಆಗಮಿಸುತ್ತಿದ್ದವು. ಕೆರೆ ದಡದಲ್ಲಿ ಪಕ್ಷಿಗಳ ಕಲರವ, ಅವುಗಳ ಸ್ವಚ್ಛಂದ ಹಾರಾಟ ನೋಡಲು ಎರಡು ಕಣ್ಣು ಸಾಲದಾಗುತ್ತಿತ್ತು. ಆದರೆ ಈಗ ಅಂತಹ ಸುಂದರ ದೃಶ್ಯ ಕಾಣಸಿಗುತ್ತಿಲ್ಲ.
ಬಿಸಿಲ ಬೇಗೆಗೆ ಇಡೀ ಕೆರೆ ಬಾಯ್ತೆರೆದು ನಿಂತಿದೆ. ಹನಿ ನೀರಿಲ್ಲದೆ ಜೀವ ಸಂಕುಲ ಪರದಾಡುವಂತಾಗಿದೆ.
ಜಲಚರ ಪ್ರಾಣಿಗಳು, ಕೀಟಗಳು ನೀರಿಲ್ಲದೆ ಬಿಸಿಲಿಗೆ ಸಾವನ್ನಪ್ಪಿವೆ. ಪಕ್ಷಿ ಸಂಕುಲ ಕಣ್ಮರೆಯಾಗಿದೆ. ಕೆಲವು ಪಕ್ಷಿಗಳು ಸಹ ನೀರು ಆಹಾರವಿಲ್ಲದೆ ಸತ್ವ ಕಳೆದುಕೊಂಡು ಮೃತಪಟ್ಟಿವೆ ಎನ್ನುತ್ತಾರೆ ಗ್ರಾಮಸ್ಥರು. ಇದೇ ಪ್ರಥಮ ಬಾರಿಗೆ ಇಂತಹ ಬರ ಆವರಿಸಿದೆ. ಇದಕ್ಕೂ ಮೊದಲು ಶಂಕರರಾಯನ ಕೆರೆಯಲ್ಲಿ ನೀರು ಇರುತ್ತಿತ್ತು. ಜಲಚರಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ಇದು ರಮಣೀಯ ತಾಣವಾಗಿದೆ. ಬೇರಡೆಯಿಂದ ಬರುವ ವಿವಿಧ ತಳಿಯ ಸಾವಿರಾರು ಪಕ್ಷಿಗಳಿಗೆ ಬೇಸಿಗೆ ಮುಗಿಯವವರಿಗೆ ವಾಸಿಸುವ ಮತ್ತು ಸಂತಾನೋತ್ಪತ್ತಿಗೆ ಶಂಕರರಾಯನ ಕೆರೆ ಉತ್ತಮ ವಾತಾವರಣ ಹೊಂದಿದ ತಾಣವಾಗಿತ್ತು. ಸುರಪುರ ತಾಲೂಕಿನಲ್ಲಿರುವ ಬೋನಾಳ ಪಕ್ಷಿಧಾಮಕ್ಕಿಂತಲೂ ಇಲ್ಲಿ ಹೆಚ್ಚಿನ ವಿವಿಧ ತಳಿಯ ಸುಂದರ ಪಕ್ಷಗಳು ವಾಸವಿದ್ದವು. ಪಕ್ಷಧಾಮವಾಗಿ ಇದನ್ನು ರೂಪಿಸಬೇಕು ಎಂದು ಹಲವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಸದ್ಯ ಕೆರೆ ಸಂಪೂರ್ಣ ಬತ್ತಿದ್ದು, ಹನಿ ನೀರು ಇಲ್ಲದೆ ಜೀವ ಸಂಕುಲ ಕಂಗಲಾಗಿದೆ. ಜಿಲ್ಲಾಡಳಿತ ಕೆರೆ ಹೂಳು ತೆಗೆಸಬೇಕು. ನಂತರ ಕೃಷ್ಣಾ ಕಾಲುವೆ ಮೂಲಕ ಕೆರೆಗೆ ನೀರು ತುಂಬುವ ಯೋಜನೆ ರೂಪಿಸುವ ಮೂಲಕ ಜೀವ ಸಂಕುಲ ಉಳಿವಿಗೆ ಅನುಕೂಲ ಕಲ್ಪಿಸಬೇಕು. ಪ್ರತಿ ವರ್ಷ ವಲಸೆ ಬರುವ ಪಕ್ಷಿಗಳು ವಾಸಿಸಲು ನೀರು ತುಂಬುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮದ ಮಂಜುನಾಥ ಬಿರಾದಾರ ಮನವಿ ಮಾಡಿದ್ದಾರೆ.
ಗೋವಿಂದರಾಜು ಕಳವಳ: ಸಗರ ಶಂಕರರಾಯನ ಕೆರೆಗೆ ಪ್ರತಿ ವರ್ಷ ಬಣ್ಣ ಬಣ್ಣದ ಪಕ್ಷಿಗಳು ಬರುತ್ತವೆ ಎಂಬ ಮಾಹಿತಿ ಪಡೆದು ಎರಡು ವರ್ಷದಿಂದ ಹಿಂದೆ ಇಲ್ಲಿಗೆ ಆಗಮಿಸಿ ಸುಂದರ ಚಿತ್ರಗಳನ್ನು ಸೆರೆ ಹಿಡಿದಿದ್ದ ಮತ್ತು ಕರ್ನಾಟಕದ ಪ್ರಸಿದ್ಧ ಛಾಯಾಚಿತ್ರಗಾರರಲ್ಲಿ ಒಬ್ಬರಾದ ಚಿತ್ರದುರ್ಗದ ನಿಸರ್ಗ ಗೋವಿಂದರಾಜು ಸಗರ ಶಂಕರರಾಯನ ಕೆರೆ ಬತ್ತಿರುವ ಸುದ್ದಿ ಕೇಳಿ ಪಕ್ಷಿಗಳ ಕಣ್ಮರೆ ವಿಷಯ ತಿಳಿದು ಕಳವಳ ವ್ಯಕ್ತಪಡಿಸಿದರು. ಎಲ್ಲೂ ಸಿಗದ ಪಕ್ಷಿಗಳ ಛಾಯಚಿತ್ರಗಳನ್ನು ತೆಗೆದುಕೊಂಡು ಬಂದಿದ್ದೆ. ನನ್ನ ಕ್ಯಾಮೆರಾದಲ್ಲಿ ಹಲವು ಪಕ್ಷಿಗಳು ಸೆರೆಯಾಗಿವೆ. ಪಕ್ಷಿಗಳ ಕಲರವ ಅಲ್ಲಿತ್ತು. ಈಗ ಕೆರೆ ಸಂಪೂರ್ಣ ಬತ್ತಿರುವ ಸುದ್ದಿ ಕೇಳಿ ಮನಸ್ಸು ತಳಮಳಗೊಂಡಿದೆ. ಅಲ್ಲಿದ್ದ ಸುಂದರ ರೂಪದ ಪಕ್ಷಿ ಸಂಕುಲ ಎಲ್ಲಿಗೆ ತೆರಳಿತು. ಬದುಕಿದವೋ ಏನಾದವು ಎಂಬ ಯೋಚನೆ ತಲೆಯಲ್ಲಿ ಗಿರಿಕಿ ಹೊಡೆಯುತ್ತಿದೆ. ಬತ್ತಿದ ಕೆರೆ ಚಿತ್ರ ನೋಡಿ ದಂಗಾದೆ ಎಂದು ಕಳವಳ ವ್ಯಕ್ತಪಡಿಸಿದರು.