Advertisement

ಮೌಡ್ಯದಿಂದ ಬದುಕು ದುಸ್ತರ

04:36 PM Feb 12, 2020 | Naveen |

ಶಹಾಪುರ: ಮೌಡ್ಯದ ಜಾಡಿನಲ್ಲಿ ಅಂಧಕಾರದ ಕರಿನೆರಳಿನಲ್ಲಿ ಜೀವಿಸುವವ ಬದುಕು ದುಸ್ಥರ ಮತ್ತು ಶೂನ್ಯವಾಗಿರುತ್ತದೆ. ಹೀಗಾಗಿ ಪ್ರಗತಿಪರ ಚಿಂತಕರು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ವಚನ ಸಾಹಿತ್ಯ ತಿರಳನ್ನು ಅರ್ಥೈಸುವ ಮೂಲಕ ಜನರನ್ನು ಸರಿದಾರಿಗೆ ತರುವ ಕೆಲಸ ಮಾಡಬೇಕಿದೆ. ಸಾರ್ಥಕ ಜೀವನ ನಡೆಸಲು ಅನವು ಮಾಡಿಕೊಡಬೇಕಿದೆ ಎಂದು ಸಾಹಿತಿ, ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.

Advertisement

ತಾಲೂಕಿನ ಶಿರವಾಳ ಗ್ರಾಮದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ವ್ಯಕ್ತಿತ್ವ ವಿಕಾಸಕ್ಕೆ ವಚನಗಳು ಎನ್ನುವ ಶಿಬಿರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಎಲ್ಲರೂ ವಚನ ಸಾಹಿತ್ಯ ಓದಬೇಕಿದೆ. ಅದರೊಳಗಿರುವ ಸಾಹಿತ್ಯದ ಸಾರ ಅರ್ಥೈಸಿಕೊಂಡು ಬದುಕು ಸಾಗಿಸಬೇಕಿದೆ. ಮೂಢತ್ವದಲ್ಲಿ ನಡೆದರೆ ಬದುಕು ನಶ್ವರವಾಗಲಿದೆ. ಶರಣರು, ಸಂತರು ಹೇಳಿದ, ಬರೆದ ವಚನ ಸಾಹಿತ್ಯದಂತೆ ನಾವೆಲ್ಲ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ವಚನ ಸಾಹಿತ್ಯದಿಂದ ಬದುಕು ರೂಪುಗೊಳ್ಳಲಿದೆ. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ವಚನ ಸಾಹಿತ್ಯ, ಶರಣ ಕುರಿತು ತಿಳಿಸಬೇಕಿದೆ. ಅಣ್ಣ ಬಸವಣ್ಣ ನೀಡಿದ ಸಂದೇಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಶರಣರ ವಚನದಂತೆ ಜೀವನ ಕಂಡುಕೊಂಡಲ್ಲಿ ದೇಶದಲ್ಲಿ ಸಾಮರಸ್ಯ ಮೂಡಲಿದೆ. ಸರಳತೆ ಸಮಾನತೆ ಮೇಳು ಕೀಳು ಎನ್ನದೆ ಎಲ್ಲರೂ ಸಮಾನರಾಗಿ ಬದುಕು ಕಟ್ಟಿಕೊಳ್ಳಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ, ವಚನಗಳು ಸಾಮಾಜಿಕ ಪರಿವರ್ತನೆಗೆ ಶಕ್ತಿವರ್ಧಕವಾಗಿವೆ. ವಚನಗಳನ್ನು ಬರಿ ಓದಿದರೆ ಸಾಲದು ಅದನ್ನು ಅರ್ಥೈಸಿಕೊಂಡು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಆಗ ಜೀವನ ಪಾವನವಾಗಲಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆಯಾದ ಸ್ಥಳೀಯ ಶಾಲೆ ವಿದ್ಯಾರ್ಥಿಗಳಾದ ಮುದ್ದಮ್ಮ, ಕೃಷ್ಣಪ್ಪ, ಯಮನಪ್ಪ, ರಾಜಪ್ಪ ಅವರನ್ನು ಸನ್ಮಾನಿಸಲಾಯಿತು.

ವಲಯ ಕಸಾಪ ಅಧ್ಯಕ್ಷ ಮಲ್ಲಣ್ಣ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಸಾಯಬಣ್ಣ ಶೀರನೆಟ್ಟಿ, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ, ಶಂಕ್ರಣ್ಣ ದೇಸಾಯಿ, ಮರೆಪ್ಪ ಭಂಡಾರಿ, ಭೀಮವ್ವ ಕಂಬದ, ರುದ್ರಗೌಡ ತಳಬಿಡಿ, ಮುಖ್ಯ ಶಿಕ್ಷಕ ಭೀಮಣ್ಣ ಬೇವಿನಹಳ್ಳಿ, ಬಸವರಾಜ ರೋಜಾ, ದೇವಣ್ಣ ಹಯ್ನಾಳ ಇದ್ದರು. ಮಾರ್ಥಡಪ್ಪ ಶಿರವಾಳ ಸ್ವಾಗತಿಸಿದರು. ಶಿಕ್ಷಕ ರೇವಣಸಿದ್ದಪ್ಪ ನಿರೂಪಿಸಿದರು. ಶಿಕ್ಷಕ ರಮೇಶ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next