ಶಹಾಪುರ: ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಆಯಾ ಪಕ್ಷದ ಕಾರ್ಯಕರ್ತರು ತಮ್ಮ ವಿಜೇತ ಅಭ್ಯರ್ಥಿಗಳನ್ನು ಹೊತ್ತು ಕುಣಿದರು. ಪ್ರಮುಖ ಬೀದಿಗಳ ಮೂಲಕ ವಿಜೇತ ಅಭ್ಯರ್ಥಿಗಳ ಮನೆವರೆಗೂ ಮೆರವಣಿಗೆ ಮಾಡಲಾಯಿತು. ಮತ ಎಣಿಕೆ ಕೇಂದ್ರದ ಎದುರು ಜನಸ್ತೋಮ ಸೇರಿತ್ತು. ವಿಜೇತ ಅಭ್ಯರ್ಥಿಗಳ ಪರವಾಗಿ ಘೋಷಣೆಗಳು ಮೊಳಗಿದವು.
ವಾರ್ಡ್ ನಂ 1ರ ಪಕ್ಷೇತರ ಅಭ್ಯರ್ಥಿ ಅಮಲಪ್ಪ ದ್ಯಾವಪುರ ಅವರಿಗೆ ಬಡಾವಣೆಯಲ್ಲಿ ಅದ್ಧೂರಿ ಸ್ವಾಗತ ಕೋರಿದರು. ಅಲ್ಲದೆ ಅವರ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿ ಗೌರವಿಸಿದರು.
ಅದೇ ರೀತಿ ವಾರ್ಡ್ ನಂ 12ರ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಆರಬೋಳ ಪುನಾರಾಯ್ಕೆಯಾಗಿದ್ದು, ಸಂಗೀತ ವಾದ್ಯಗಳೊಂದಿಗೆ ಯುವಕರು ಕುಣಿದು ಕುಪ್ಪಳಿಸಿದರು. ಆರಬೋಳ ಅವರನ್ನು ಮನೆವರೆಗೂ ಮೆರವಣಿಗೆ ಮೂಲಕ ಕರೆದೊಯ್ದರು. ಬಡಾವಣೆಯಲ್ಲಿ ಅವರಿಗೂ ಹಾಲಿನ ಅಭಿಷೇಕ ಮಾಡಲಾಯಿತು.
ವಾರ್ಡ್ ನಂ.18ರಿಂದ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಗಂಗಾಧರಮಠ ಅವರನ್ನು ಬೈಕ್ ರ್ಯಾಲಿ ಮೂಲಕ ಬಡಾವಣೆವರೆಗೂ ಮೆರವಣಿಗೆ ನಡೆಸಲಾಯಿತು. ಅಲ್ಲಿಂದ ಬಡಾವಣೆ ವಿವಿಧ ಮಂದಿರ, ದರ್ಗಾಗಳಿಗೆ ಭೇಟಿ ನೀಡಿ ಕಾಯಿ ಕರ್ಪೂರದೊಂದಿಗೆ ಪ್ರಾರ್ಥನೆ ಸಲ್ಲಿಸಿ ವಿಜೇತ
ಅಭ್ಯರ್ಥಿಯನ್ನು ಮನೆವರೆಗೂ ಮೆರವಣಿಗೆ ಮೂಲಕ ಕರೆ ತಂದರು.
ಬೆಳಗ್ಗೆಯಿಂದಲೇ ಮತ ಎಣಿಕೆ ಕೇಂದ್ರ ಎದುರು ಜನರು ತಮ್ಮ ಅಭ್ಯರ್ಥಿ ಗೆಲುವು ತಿಳಿಯುತ್ತಿದ್ದಂತೆ ಕುಣಿದು ಕುಪ್ಪಳಿಸುತ್ತಿರುವುದು, ಜಯಕಾರ ಘೋಷಣೆ ಮೊಳಗಿಸುತ್ತಿರುವುದು ಕಂಡು ಬಂತು.