ಶಹಾಪುರ: ಮಹಿಳೆಯೋರ್ವಳ ಹೆರಿಗೆಗೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಶಹಾಪುರ ತಾಲೂಕಿನ ಸಾದ್ಯಾಪುರ ಗ್ರಾಮದ ಹತ್ತಿರ ಆರೋಗ್ಯ ಇಲಾಖೆಯ 108 ವಾಹನದಲ್ಲಿಯೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಘಟನೆ ಈಚೆಗೆ ನಡೆದಿದೆ.
ಸುರಪುರ ತಾಲೂಕಿನ ಆಲ್ದಾಳ ಗ್ರಾಮದ ಮಹಿಳೆ ಕವಿತಾ ದಂಡಪ್ಪ ಎಂಬುವರು ಅವಳಿ ಮಕ್ಕಳಿಗೆ ಜನ್ಮ ನೀಡಿ ತಾಯಿ ಎಂದು ತಿಳಿದಿದೆ.
ಆಲ್ದಾಳ ಗ್ರಾಮದಿಂದ ಸುರಪುರ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕಳುಹಿಸಿದ್ದರು ಎನ್ನಲಾಗಿದೆ.
ಆಗ ಮಾರ್ಗ ಮಧ್ಯದಲ್ಲಿ 108 ವಾಹನದಲ್ಲಿ ತೆರಳುತ್ತಿರುವಾಗ ಶಹಾಪುರ ತಾಲೂಕಿನ ಸೈದಾಪುರ ಕಲಬುರಗಿ ರಸ್ತೆ ಮಾರ್ಗದಲ್ಲಿ ವಾಹನದಲ್ಲಿಯೇ ಕವಿತಾ ಹೆರಿಗೆ ನೋವು ತಾಳಲಾರದೆ ಕೂಗಲು ಆರಂಭಿಸಿದ್ದಾಳೆ. ಆಗ ವಾಹನದಲ್ಲಿದ್ದ ಸ್ಟಾಫ್ ನರ್ಸ್ ಸುರೇಶ ಮತ್ತು ಲಾಲಸಾಬ ಕೂಡಲೇ ಕರ್ತವ್ಯ ನಿರತರಾಗಿ ಸುಗಮವಾಗಿ ಹೆರಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಕವಿತಾ ಮತ್ತು ಆಕೆಯ ಜೊತೆಯಲ್ಲಿದ್ದ ಪಾಲಕರು ನಿಟ್ಟುಸಿರು ಬಿಟ್ಟಿದ್ದಾರೆ. ತಾಯಿ ಮತ್ತು ಅವಳಿ ಮಕ್ಕಳಿಬ್ಬರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಇಎಂಪಿ ಸುರೇಶ ತಿಳಿಸಿದ್ದಾರೆ.