Advertisement

ಅಂಧನ ಕೈಹಿಡಿದು ಮಾದರಿಯಾದ ಮಧುಶ್ರೀ

05:43 PM Apr 29, 2019 | Naveen |

ಶಹಾಪುರ: ತಾಲೂಕಿನ ಭೀಮರಾಯನಗುಡಿ ವಸಾಹತು ಪ್ರದೇಶದಲ್ಲಿ ರವಿವಾರ ನಡೆದ ಸಾಮೂಹಿಕ ವಿವಾಹದ ಸಮಾರಂಭದಲ್ಲಿ ಯುವತಿಯೊಬ್ಬಳು ದೇವದುರ್ಗ ತಾಲೂಕಿನ ಅಂಧ ಯುವಕನ ಕೈ ಹಿಡಿದು ಮಾದರಿಯಾಗಿದ್ದಾಳೆ.

Advertisement

ಭೀಮರಾಯನ ಗುಡಿ ಕೆಬಿಜೆಎನ್‌ಎಲ್ ವಸಾಹತುವಿನ ಪ್ರದೇಶದಲ್ಲಿ ಡಾ| ಅಂಬೇಡ್ಕರ್‌ ಪೀಪಲ್ಸ್ ಪಾರ್ಟಿ, ಡಾ| ಅಂಬೇಡ್ಕರ್‌ ಸಂಘ ಮತ್ತು ಕರ್ನಾಟಕ ಪ್ರದೇಶ ಚಲುವಾದಿ ಸಂಘ, ಕಪ್ರ ಮಾದಿಗರ ಸಂಘದ ಆಶ್ರಯದಲ್ಲಿ ರವಿವಾರ ಡಾ| ಅಂಬೇಡ್ಕರ್‌ 128ನೇ ಜಯಂತಿ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಜಿಲ್ಲಾ ಮಟ್ಟದ ಅಸ್ಪೃಶ್ಯರ ರಾಜಕೀಯ ಸಂಕಲ್ಪ ದಿನದ ಬೃಹತ್‌ ಸಮಾವೇಶ ನಡೆಯಿತು.

ಸಾಮೂಹಿಕ ವಿವಾಹದಲ್ಲಿ 29 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು. ಇದರಲ್ಲಿ ದೇವದುರ್ಗ ತಾಲೂಕಿನ ಅಂಧ ಯುವಕ ರಮೇಶ ಅವರನ್ನು ಶಹಾಪುರ ತಾಲೂಕಿನ ಧೋರನಹಳ್ಳಿ ಯುವತಿ ಮಧುಶ್ರೀ ಮದುವೆಯಾಗಿ ಮಾದರಿ ಎನಿಸಿದರು.

ಅಂಧ ಯುವಕ ರಮೇಶ ಅವರಿಗೊಂದು ಬಾಳು ನೀಡಬೇಕು ಎಂಬ ಆಸೆಯಿಂದಲೇ ಮದುವೆ ಮಾಡಿಕೊಂಡಿದ್ದೇನೆ. ಇದರಲ್ಲಿ ಯಾವುದೇ ಅನ್ಯತಾ ಭಾವ ಇಲ್ಲ ಎಂದು ಯುವತಿ ಮಧುಶ್ರೀ ಸಂತಸದಿಂದಲೇ ಅನಿಸಿಕೆ ಹಂಚಿಕೊಂಡರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಛಲವಾದಿ ಗುರುಪೀಠದ ಹರಳಯ್ಯ ಮಹಾಸ್ವಾಮಿಗಳು ಮಾತನಾಡಿ, ನವ ದಂಪತಿಗಳ ಬದುಕು ಪಾವನವಾಗಲಿ. ಸಾಮೂಹಿಕ ವಿವಾಹದಡಿ ಮದುವೆಯಾದ ನವ ಜೋಡಿಗಳ ಮುಂದಿನ ಜೀವನ ಉತ್ತಮವಾಗಿರಲಿ. ಸತಿಪತಿಗಳು ಪರಸ್ಪರ ಒಂದಾಗಿ ಜೀವನದ ಬಂಡಿ ಸಾಗಿಸಬೇಕು. ಸಂಸಾರದಲ್ಲಿ ಹೆಚ್ಚು ಕಡಿಮೆ ಆಗುವುದು ಸಹಜ. ನಿರಮ್ಮಳಾಗಿ ಸಮಾಧಾನದಿಂದ ಯಾವುದೇ ಸಮಸ್ಯೆಗೆ ಉತ್ತರ ಕಂಡುಕೊಂಡು ಮುಂದೆ ಸಾಗಬೇಕು. ಇಬ್ಬರು ನಿರಂತರ ಶ್ರಮವಹಿಸಿ ದುಡಿದು ಸ್ವಾಲಂಬಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

Advertisement

ಹೈಕೋರ್ಟ್‌ ವಕೀಲ, ಡಾ| ಅಂಬೇಡ್ಕರ್‌ ಪೀಪಲ್ಸ್ ಪಾರ್ಟಿ ಸಂಸ್ಥಾಪಕ ದೇವಮಿತ್ರ, ಅಂಬೇಡ್ಕರ್‌ ಪೀಪಲ್ಸ್ ಪಾರ್ಟಿ ಸಂಸ್ಥಾಪಕ ಮಾರುತಿ ಜಂಬಗಾ ಮಾತನಾಡಿದರು. ಚಲವಾದಿ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜು ಸೈದಾಪುರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಶಕುಂತಲಾ ಹಡಗಲಿ, ಗುತ್ತಪ್ಪ ಅರಿಕೇರಿ, ಶರಣಪ್ಪ ಹೊಸ್ಮನಿ, ಜಗನ್ನಾಥ ಕಳಸಕರ್‌, ರಾಜಶ್ರೀ ಬಾವಿಮನಿ, ಶಾಂತಪ್ಪ ಸಾಲಿಮನಿ ಇದ್ದರು. ಮತ್ತು ವಧು-ವರರ ಕುಟುಂಬ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next