Advertisement

ಮಹಾಂತೇಶ್ವರ ಜಾತ್ರೆ: ಎತ್ತುಗಳ ಬೆಲೆ ಗಗನಕ್ಕೆ

04:13 PM Feb 27, 2020 | Naveen |

ಶಹಾಪುರ: ಕಳೆದ ಎರಡು ದಿನಗಳಿಂದ ತಾಲೂಕಿನ ದೋರನಹಳ್ಳಿ ಬೆಟ್ಟದ ಮಹಾಂತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜಾನುವಾರು ಜಾತ್ರೆ ನಡೆಯುತ್ತಿದೆ.

Advertisement

ಜಾನುವಾರು ಜಾತ್ರೆಯಲ್ಲಿ ವಿವಿಧ ತಳಿಗಳ ಎತ್ತುಗಳು ಮಾರಾಟಕ್ಕೆ ಬಂದಿವೆ. ಖರೀದಿದಾರರು ಯಾವ ತಳಿ ಎತ್ತುಗಳನ್ನು ಖರೀದಿಸಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾವ ತಳಿ ನೋಡಿದರೂ ತೆಗೆದುಕೊಳ್ಳಬೇಕು ಎಂನಿಸುತ್ತಿದೆ. ಆದರೆ ಕೃಷಿಗೆ ಯಾವ ಜಾತಿ ಎತ್ತುಗಳು ಚೆನ್ನಾಗಿವೆ ಎಂಬುದನ್ನು ಲೆಕ್ಕಾಚಾರ ಹಾಕಿ ರೈತರು ಖರೀದಿಗೆ ಮುಂದಾಗುತ್ತಿದ್ದಾರೆ. ಹತ್ತಾರು ತಳಿ ಎತ್ತುಗಳು ಜಾತ್ರೆಯಲ್ಲಿ ದೊರೆಯುತ್ತಿವೆ. ನಿಮಗಿಷ್ಟದ ತಳಿ ಎತ್ತುಗಳು ಇಲ್ಲಿವೆ. ಆಯಾ ತಳಿ ಎತ್ತುಗಳ ಬಲಿಷ್ಠತೆಗೆ ತಕ್ಕಂತೆ ದರಗಳು ಕಾಣಬಹುದು. ಕಿಲಾರಿ, ದಾವಣಿ, ಜವಾರಿ ಮತ್ತು ಕುಂಬಿ ಸೇರಿದಂತೆ ಇತರೆ ತಳಿಗಳ ಎತ್ತುಗಳು ಮಾರಾಟಕ್ಕೆ ಲಭ್ಯವಿದ್ದು, ರೈತರು ತಮ್ಮ ಕೃಷಿ ಆಧಾರಿತ ಅನುಕೂಲಕ್ಕೆ ತಕ್ಕಂತೆ ಎತ್ತುಗಳನ್ನು ಖರೀದಿಸುತ್ತಿದ್ದಾರೆ. ಕಿಲಾರಿ ತಳಿ ಜೋಡೆತ್ತುಗಳಿಗೆ 2 ಲಕ್ಷ ರೂ.
ದಾವಣಿ ಜೋಡೆತ್ತಿಗೆ 1.50 ಲಕ್ಷ ರೂ. ಮತ್ತು ಮೈಸೂರು ಭಾಗದ ಜೋಡೆತ್ತಿಗೆ 1.50 ಲಕ್ಷ ರೂ. ದರ ಹೇಳುತ್ತಿದ್ದಾರೆ. ಇನ್ನೂ ಐದು ದಿನಗಳ ವರೆಗೆ ಜಾತ್ರೆಯಲ್ಲಿ ಜಾನುವಾರು ವಹಿವಾಟು ನಡೆಯಲಿದ್ದು, ದರ ಏರುಪೇರಾಗುವ ನಿರೀಕ್ಷೆಯಲ್ಲಿದ್ದಾರೆ. ಕೃಷಿಗೆ ಯಾವುದೇ ಯಂತ್ರೋಪಕರಣ ಬಳಸಿದರೂ ಎತ್ತುಗಳು ಬೇಕಾಗುತ್ತವೆ. ಎತ್ತುಗಳು ರೈತನ ಮಿತ್ರರಿದ್ದಂತೆ ಎನ್ನುತ್ತಾರೆ ರೈತ ಬಸಪ್ಪ.

ಕೃಷಿ ಪರಿಕರ ಭರ್ಜರಿ ವ್ಯಾಪಾರ: ಕೃಷಿಗೆ ಬೇಕಾಗುವ ಪರಿಕರಗಳ ಮಾರಾಟವು ಭರ್ಜರಿಯಾಗಿ ನಡೆದಿದೆ. ರೈತರು ಕೃಷಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ರೈತರ ಕೃಷಿಗೆ ಬೇಕಾಗುವ ಹಗ್ಗ, ಎತ್ತುಗಳಿಗೆ ಕಟ್ಟುವ ಬಣ್ಣ ಬಣ್ಣದ ಗೊಂಡೆಗಳು, ಬಾರಕೋಲು ಸೇರಿದಂತೆ ಬಿದಿರು ಬುಟ್ಟಿಗಳು, ಸದೆ ತೆಗೆಯುವ ಕಬ್ಬಿಣದ ಪರಿಕರಗಳು ಇತರೆ ವಸ್ತುಗಳು ಜಾತ್ರೆಯಲ್ಲಿ ದೊರೆಯುತ್ತಿವೆ.

ಸುಮಾರು 35 ವರ್ಷದಿಂದ ಜಾನುವಾರು ಜಾತ್ರೆ ನಡೆಯುತ್ತಿದೆ. ರೈತರಿಗೆ ಅನುಕೂಲಕರ ಜಾತ್ರೆ ಇದಾಗಿದೆ. ಸುತ್ತಲಿನ ಗ್ರಾಮಗಳ ರೈತರು ಜಾತ್ರೆಗೆ ಆಗಮಿಸುತ್ತಾರೆ. ಕೃಷಿ ಪ್ರಧಾನ ಈ ಪ್ರದೇಶದಲ್ಲಿ ರೈತರ ಅನುಕೂಲಕ್ಕಾಗಿ ಜಾನುವಾರು ಜಾತ್ರೆ ನಡೆಸುತ್ತ ಬರಲಾಗಿದೆ. ಜಾತ್ರೆಯಲ್ಲಿ ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲಾಗಿದೆ.
ವೀರಮಹಾಂತ ಶಿವಾಚಾರ್ಯರು,
ಮಹಾಂತೇಶ್ವರ ದೇವಸ್ಥಾನ ಹಿರೇಮಠ

ಜಾನುವಾರು ವಹಿವಾಟು ಚೆನ್ನಾಗಿದೆ. ಜಾತ್ರೆಯಲ್ಲಿ ವಿವಿಧ ತಳಿ ಎತ್ತುಗಳು ಬಂದಿವೆ. ಈ ಬಾರಿ ಜೋಡು ಎತ್ತುಗಳ ಖರೀದಿಗೆ ಲಕ್ಷಾಂತರ ರೂ. ಹಾಕಬೇಕಿದೆ. ಕೃಷಿ ಕಾಯಕಕ್ಕೂ ಬಂಡವಾಳ ಹಾಕಲೇಬೇಕಾದ ಸ್ಥಿತಿ ಬಂದಿದೆ. ಬಂಡವಾಳ ಹಾಕುವುದು ಅನಿವಾರ್ಯವಾಗಿದೆ.
 ಬಸವರಾಜ ಚೌದ್ರಿ,
 ಯುವ ರೈತ

Advertisement

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next