ಶಹಾಪುರ: ಪ್ರತಿಯೊಬ್ಬರ ಶ್ರೇಯೋಭಿವೃದ್ಧಿಗಾಗಿ ಕಾನೂನು ಸಹಕಾರ ನೀಡಲಿದ್ದು, ಸಂದರ್ಭಾನುಸಾರವಾಗಿ ಕಾನೂನಿನ ತಿಳಿವಳಿಕೆ ಪಡೆದುಕೊಂಡು ಅದರ ಅಗತ್ಯ ನೆರವು ತೆಗೆದುಕೊಳ್ಳಬೇಕು ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ಹೇಳಿದರು.
ನಗರದ ಹಳೇಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ, ತಾಲೂಕು ಕಾನೂನು ಸೇವಾ ಸಮಿತಿ ಶಹಾಪುರ, ತಾಲೂಕು ವಕೀಲರ ಸಂಘ ಶಹಾಪುರ, ಶಿಶು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ತಾಪಂ, ಪೋಲಿಸ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಗೌರವಯುತ ಬದುಕು ಸಾಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಆಶಯವಾಗಿದೆ. ಕಾನೂನು ಸಾಕ್ಷರತಾ ರಥ ಮೂಲಕ ಸಾರ್ವಜನಿಕರಲ್ಲಿ ಕಾನೂನು ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ನಾಗರಿಕರಿಗೆ ಯಾವುದೇ ರೀತಿಯ ಅನ್ಯಾಯವಾದರೂ ಸಹಿಸಿಕೊಂಡು ಇರಬೇಕಿಲ್ಲ. ಸಮರ್ಪಕ ಕಾನೂನಿನ ನೆರವು ಇದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾನೂನು ಸೇವೆಗಳ ಉಪಯೋಗ ಪ್ರತಿಯೊಬ್ಬರು ಪಡೆಯಬೇಕು ಎಂಬುದೇ ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ, ವಕೀಲ ಅಮರೇಶ ದೇಸಾಯಿ ಮಾತನಾಡಿ, ಶಿಕ್ಷಣದ ಹಕ್ಕುಗಳನ್ವಯ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮೌಲ್ಯಯುತ ಶಿಕ್ಷಣ ಸಿಗಬೇಕು. ಸರ್ಕಾರದ ಪ್ರತಿಯೊಂದು ಯೋಜನೆಗಳು ಸರ್ವರಿಗೂ ತಲುಪಬೇಕು. ಇದು ಎಲ್ಲರ ಜವಾಬ್ದಾರಿಯಾಗಿದೆ, ವಿಶೇಷವಾಗಿ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಶಾಲೆಯಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿರುವುದು, ಅಪೌಷ್ಟಿಕತೆಯಿಂದ ಮಕ್ಕಳು ಬಳಲುತ್ತಿರುವುದನ್ನು ಗಮನಿಸಿ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಿಪಿಐ ಹನುಮರೆಡ್ಡಿ ಮಾತನಾಡಿ, ಪ್ರತಿಯೊಬ್ಬರು ಕಾನೂನು ಸೇವೆಗಳ ಪ್ರಯೋಜನ ಪಡೆಯಬೇಕು. ಅನ್ಯಾಯ ಕಂಡುಬಂದಲ್ಲಿ ಅದನ್ನು ಸಹಿಸಿಕೊಂಡು ಇರುವುದು ತಪ್ಪು. ಕಾನೂನಿನ ನೆರವು ಪಡೆದು ಪ್ರತಿಯೊಬ್ಬರು ಜಾಗೃತರಾಗಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಅರಿಯಬೇಕು. ಅವರನ್ನು ಪ್ರೀತಿ ವಿಶ್ವಾಸದಿಂದ ಕಂಡು ಉತ್ತಮ ಶಿಕ್ಷಣ ನೀಡಿ ಸ್ಪರ್ಧಾತ್ಮಕ ದಿನಗಳಲ್ಲಿ ಮುಂದೆ ಬರುವಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ವಕೀಲರಾದ ಪರ್ವೀನ್ ಜಮಖಂಡಿ ಮುಸ್ಲಿಂ ಕಾನೂನುಗಳ ಕುರಿತು ಮಾತನಾಡಿ, ಕಾನೂನು ಸರ್ವರಿಗೂ ಒಳ್ಳೆಯ ಅವಕಾಶ ನೀಡಿದೆ. ಅವುಗಳನ್ನು ಅರ್ಥೈಸಿಕೊಂಡು ಉತ್ತಮ ಬಾಳು ನಡೆಸಬೇಕು ಎಂದು ಹೇಳಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಹನುಮಂತರಾವ ಕುಲಕರ್ಣಿ, ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಮಸಳಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ರಾಂಪುರೆ, ತಹಶೀಲ್ದಾರ್ ಜಗನ್ನಾಥರೆಡ್ಡಿ ,ವಕೀಲರಾದ ರಮೇಶ ದೇಶಪಾಂಡೆ, ಪ್ರಮುಖರಾದ ಸಿದ್ಲಿಂಗರಾವ ದೇಶಮುಖ, ಮುಖ್ಯ ಶಿಕ್ಷಕಿ ಗೋವಿಂದಮ್ಮ, ಶಿಕ್ಷಕ ಶಿವಾನಂದ, ನಿಂಗಯ್ಯ ಗುರುವಿನ, ವಿನಯ, ವಿಶ್ವನಾಥ, ಸುಬ್ಬಣ್ಣ, ಅಯ್ಯಪ್ಪ ಜಂಗಳಿ, ಮಹಿಬೂಬಪಾಶಾ, ವಕೀಲರಾದ ಶಾಂತಗೌಡ, ನಿಂಗಣ್ಣ ಬೇವಿನಹಳ್ಳಿ, ಶರಬಣ್ಣ ರಸ್ತಾಪುರ, ಯುಸೂಫ್ ಸಿದ್ಧಕಿ, ವಿನೋದ ಕುಮಾರ, ವೇಣುಗೋಪಾಲ ಇದ್ದರು. ವಕೀಲರಾದ ಬಸ್ಸಮ್ಮ ಎಂ. ರಾಂಪುರೆ ನಿರೂಪಿಸಿ ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ವಂದಿಸಿದರು.