ಶಹಾಪುರ: ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪದಿಂದ ನದಿ ತೀರದ ಜನರು ಸಂಕಷ್ಟದಲ್ಲಿ ಸಿಲುಕಿರುವಾಗ ನಾವೆಲ್ಲರೂ ಮಾನವೀಯ ಸ್ಪಂದನೆ ಮುಲಾಮು ನೀಡುವುದು ಅಗತ್ಯವಿದೆ. ಸಂಕಷ್ಟದಲ್ಲಿ ಇರುವ ಜನರಿಗೆ ನೆರವಿನ ಅಭಯ ನೀಡಬೇಕು. ಸಂತ್ರಸ್ತರ ಬದುಕು ಪುನರ್ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಭಾಮಿನಿ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕಾನೂನು ನೆರವು ಕಾರ್ಯಕ್ರಮದಲ್ಲಿ ಸಂತ್ರಸ್ತರಿಗೆ ಪರಿಹಾರ ಯೋಜನೆ ಬಗ್ಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಕೆಲವೊಂದು ಬಾರಿ ನಮ್ಮದಲ್ಲ ತಪ್ಪಿನಿಂದಾಗಿ ಸಂಕಷ್ಟಕ್ಕೆ ಸಿಲುಕುವುದರ ಜತೆಗೆ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಮಾನವೀಯತೆಯಿಂದ ಸಹಕಾರ ನೀಡುವುದು ಅಗತ್ಯವಿದೆ ಎಂದು ಹೇಳಿದರು. ಪ್ರತಿಯೊಬ್ಬರು ಕಾನೂನು ಜ್ಞಾನ ಪಡೆದುಕೊಳ್ಳಬೇಕು. ಯಾರು ಕಾನೂನು ಗೌರವಿಸುತ್ತಾರೆ ಅವರಿಗೆ ಕಾನೂನು ಸದಾ ರಕ್ಷಣೆ ನೀಡುತ್ತದೆ ಎಂದು ಹೇಳಿದರು.
ಹಿರಿಯ ವಕೀಲ ಆರ್.ಎಂ. ಹೊನ್ನಾರಡ್ಡಿ ಮಾತನಾಡಿ, ಈಚೆಗೆ ಪ್ರವಾಹದಿಂದ ಸಾಕಷ್ಟು ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಹತಾಶೆ ಭಾವನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಅಂತವರಿಗೆ ಧೈರ್ಯ ತುಂಬುವ ಕೆಲಸ ಮಾಡುವ ಜತೆಯಲ್ಲಿ ಕೈಲಾದಮಟ್ಟಿಗೆ ಸಹಾಯ ನೀಡಬೇಕು. ಪ್ರವಾಹ ಬಂದ ಸಂದರ್ಭದಲ್ಲಿ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಅದೆಷ್ಟು ಜನರು ಆಹಾರ, ಅಗತ್ಯ ವಸ್ತು ನೀಡುವುದರ ಜತೆಯಲ್ಲಿ ನೋವಿಗೆ ಸ್ಪಂದಿಸಿದರು. ಇದು ಜನರ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಜೆಂಎಂಎಫ್‌ಸಿ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್. ಕುಲಕರ್ಣಿ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ವಕೀಲರ ಸಂಘದ ಅಧ್ಯಕ್ಷ ಮಲ್ಲಪ್ಪ ರಾಂಪುರೆ, ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ, ವಕೀಲರಾದ ಮಲ್ಲಿಕಾರ್ಜುನ ಬುಕ್ಕಲ, ಗುರುರಾಜ ದೇಶಪಾಂಡೆ, ಆಯಿಷ್ ಫರ್ವಿನ್ ಜಮಖಂಡಿ, ಸತ್ಯಮ್ಮ ಹೊಸ್ಮನಿ ಇದ್ದರು