Advertisement

51 ಕೆರೆ ಹೂಳೆತ್ತುವ ಕಾರ್ಯ ಸ್ಥಗಿತ

10:35 AM Apr 08, 2019 | Naveen |

ಶಹಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕೆರೆ ಹೂಳೆತ್ತುವ ಯೋಜನೆಗೆ ತಾಲೂಕಿನಲ್ಲಿ ಹಿನ್ನಡೆಯಾಗಿದೆ. ಕೆರೆ ಹೂಳು ಒಯ್ಯಲು ರೈತರು ಮುಂದೆ ಬರುತ್ತಿಲ್ಲ ಎಂಬ ಕಾರಣವೇ ಹೆಚ್ಚು
ಕೇಳಿ ಬರುತ್ತಿದೆ. ಕಾಮಗಾರಿ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ.

Advertisement

ಅಂದಾಜು 51 ಕೆರೆಗಳ ಹೂಳೆತ್ತುವ ಯೋಜನೆಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾ.4ರಂದು ಚಾಲನೆ
ನೀಡಿದ್ದರು. ನಂತರ ಒಂದು ವಾರ ಹೂಳೆತ್ತುವ ಕಾರ್ಯ ಭರದಿಂದಲೇ ಸಾಗಿತು. ಬಳಿಕ ಕೇಲವೇ ದಿನಗಳಲ್ಲಿ ಕೆಲಸ ಸ್ಥಗಿತಗೊಂಡಿದೆ. ನಗರದ ಮಾವಿನ ಕೆರೆ ಹೂಳೆತ್ತುವ ಕಾಮಗಾರಿಗೂ ಶಾಸಕರು ಪೂಜೆ ಮಾಡಿದ್ದರು. ಒಂದು ವಾರ
ಕಾಲ ಕಾರ್ಯಚಟುವಟಿಕೆ ನಡೆದಿದ್ದು, ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದೆ.

ರೈತರು ಮಣ್ಣು ತೆಗೆದುಕೊಂಡು ಹೋಗುವಲ್ಲಿ ನಿರಾಸಕ್ತಿ ತೋರಿದ್ದಾರೆ ಎಂಬ ಕಾರಣಕ್ಕೆ ಹೂಳೆತ್ತುವ ಕಾರ್ಯ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ಜೈನ್‌ ಸಂಘಟನೆ ಸಹಕಾರದಿಂದ ಕೇಂದ್ರ ಸರ್ಕಾರ ರಾಷ್ಟ್ರ ವ್ಯಾಪ್ತಿ ನಮ್ಮ ಊರು ನಮ್ಮ ಕೆರೆ ಯೋಜನೆ ಜಾರಿಗೆ ತಂದಿದೆ. ಈ ಕೆಲಸಕ್ಕೆ ಜೆಸಿಬಿ ಯಂತ್ರಗಳನ್ನು ಜೈನ್‌ ಸಂಘಟನೆ
ಉಚಿತವಾಗಿ ಒದಗಿಸುತ್ತದೆ. ಆಯಾ ಜಿಲ್ಲಾಧಿಕಾರಿಗೆ ಯಂತ್ರಗಳಿಗೆ ಡೀಸೆಲ್‌ ಖರ್ಚು ಒಪ್ಪಿಸಲಾಗಿದೆ. ಇದಕ್ಕೆ ಬೇಕಾದ ಸಮರ್ಪಕ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಕೆರೆ ಹೂಳನ್ನು ಆಯಾ ಗ್ರಾಮದ ರೈತರು ಉಚಿತವಾಗಿ ತಮ್ಮ ಜಮೀನಿಗೆ ತೆಗೆದುಕೊಂಡು ಹೋಗಬೇಕು ಎಂಬ ನಿಯಮದಡಿ ಯೋಜನೆ ರೂಪಿಸಲಾಗಿತ್ತು. ಅದರಂತೆ ಕೆರೆ ಹೂಳೆತ್ತುವ ಕಾರ್ಯ ಒಂದು ವಾರ ತಕ್ಕ ಮಟ್ಟಿಗೆ ಸಾಗಿತ್ತು. ಆದರೆ ಸದ್ಯಕ್ಕೆ ಸಂಪೂರ್ಣ ಗ್ರಹಣ ಹಿಡಿರುವ ಸಂಗತಿ ಬೆಳಕಿಗೆ ಬಂದಿದೆ. ಬರದ ಹಿನ್ನೆಲೆಯಲ್ಲಿ ಕೆರೆ ಮಣ್ಣನ್ನು ಒಯ್ಯಲು ರೈತರಿಗೆ ಸಾಧ್ಯವಾಗುತ್ತಿಲ. ಕನಿಷ್ಠ ಒಂದು ಟ್ರ್ಯಾಕ್ಟರ್‌ ಮಣ್ಣು ಜಮೀನಿಗೆ ಒಯ್ಯಲು 1000 ರೂ. ಖರ್ಚಾಗುತ್ತದೆ. ಮೊದಲೇ ಬರದಿಂದ ತತ್ತರಿಸಿದ ರೈತರು ಮಣ್ಣು ತೆಗೆದುಕೊಂಡು ಹೋಗಲು ಆಸಕ್ತಿ ತೋರುತ್ತಿಲ್ಲ ಎಂದು ತಿಳಿದು ಬಂದಿದೆ.

Advertisement

ಅಲ್ಲದೆ ದಿನ ಬೆಳಗಾದರೆ ಜನ-ಜಾನುವಾರುಗಳಿಗೆ ನೀರು, ಮೇವಿನ ಚಿಂತೆಯಲ್ಲಿರುವ ರೈತರಿಗೆ ಜಮೀನಿಗೆ ಮಣ್ಣು ಒಯ್ಯಲು ದುಡ್ಡು ಎಲ್ಲಿಂದ ತರಬೇಕು ಎನ್ನುವ ಚಿಂತೆ ಆವರಿಸಿದೆ. ಕಳೆದ ಮೂರ್‍ನಾಲ್ಕು ವರ್ಷದಿಂದ ಸಮರ್ಪಕ ಮಳೆಯಾಗದೇ ಬೆಳೆ ನಷ್ಟದಿಂದ ಕಷ್ಟದಲ್ಲಿರುವ ರೈತರ ಬದುಕು ದುಸ್ಥರವಾಗಿದೆ. ಇಂತಹ ಸ್ಥಿತಿಯಲ್ಲಿ ಹೂಳು ಒಯ್ಯಲು ದುಡ್ಡು ಎಲ್ಲಿಂದ ತರಬೇಕು ಎನ್ನುತ್ತಾರೆ ರೈತ ಅಯ್ಯಪ್ಪ.

ವಿಭೂತಿಹಳ್ಳಿ, ನಡಿಹಾಳ, ಉಕ್ಕಿನಾಳ, ಹೊಸಕೇರಾ ಮತ್ತು ರಸ್ತಾಪುರ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಬೇಕು ಎಂದು ಶಾಸಕರು ನಿರೀಕ್ಷೆಯಲ್ಲಿದ್ದರು. ಆದರೆ ಈ ಕೆರೆಗಳ ಹೂಳು ಸವಳಾಗಿದ್ದು, ಇದನ್ನು ಯಾರೊಬ್ಬ ರೈತರು ತೆಗೆದುಕೊಂಡು ಹೋಗಲು ಮುಂದಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಹೂಳೆತ್ತಿದ್ದಲ್ಲಿ ಕೆರೆ ತುಂಬಿಸುವ ಯೋಜನೆಗೆ ಕೃಷ್ಣಾ ಭಾಗ್ಯ ಜಲ ನಿಗಮದಿಂದ 3 ಕೋಟಿ ರೂ. ಅನುದಾನ ಬಂದಿದ್ದು, ಹೂಳು ತೆಗೆಯುವ ಕಾರ್ಯ ಮುಕ್ತಾಯವಾಗಿದ್ದರೆ ಕೆರೆ ತುಂಬಿಸಲು ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಇಲ್ಲಿನ ಶಾಸಕರು ಮತ್ತು ಅಧಿಕಾರಿಗಳದ್ದಾಗಿತ್ತು. ಆದರೆ ಹೂಳು ಸವಳಾಗಿರುವುದರಿಂದ ಕೆರೆ ತುಂಬುವ ಯೋಜನೆಗೂ ಇದು ಮುಂದೆ ಪರಿಣಾಮ ಬೀರುವ ಸಾಧ್ಯತೆ ಇದೆ.

ವಿಜಯಪುರ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ ಯೋಜನೆ ಯಶಸ್ವಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ರೈತರ ನಿರಾಸಕ್ತಿಯಿಂದ ಹೂಳೆತ್ತುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಆದರೆ ಇದಕ್ಕೆ ಸಮರ್ಪಕ ಕಾರಣ ತಿಳಿಯಬೇಕಿದೆ. ಅಲ್ಲದೆ ಯೋಜನೆ ಕುರಿತು ಮೊದಲು ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಈ ಕುರಿತು ರೈತರೊಂದಿಗೆ ಚರ್ಚಿಸಿ ಯೋಜನೆಗೆ ಚಾಲನೆ ನೀಡಬೇಕಿತ್ತು.
.ವಸಂತಕುಮಾರ ಸುರಪುರಕರ್‌,
ಬಿಜೆಪಿ ಮುಖಂಡ

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next