Advertisement

ಸಂಪೂರ್ಣ ಹದಗೆಟ್ಟ ಕೊಳ್ಳೂರ ಸೇತುವೆ ರಸ್ತೆ

03:21 PM Aug 19, 2019 | Team Udayavani |

ಶಹಾಪುರ: ಕೃಷ್ಣಾ ನದಿ ಪ್ರವಾಹದಿಂದಾಗಿ ತಾಲೂಕಿನ ಕೊಳ್ಳೂರ (ಎಂ) ಸೇತುವೆ ಕಳೆದ ಹದಿನೈದು ದಿನದಿಂದ ಸಂಪೂರ್ಣ ಮುಳುಗಡೆಯಾಗಿ, ಸಂಚಾರ ಸ್ಥಗಿತಗೊಂಡಿತ್ತು. ಆದರೆ ಮೂರು ದಿನಗಳಿಂದ ಪ್ರವಾಹ ಇಳಿಕೆಯಾಗಿದ್ದು, ಪ್ರಸ್ತುತ ಸೇತುವೆ ಗೋಚರವಾಗುತ್ತಿದೆ. ಆದರೆ ಸೇತುವೆಯಿಂದ ಕೊಳ್ಳೂರ ಗ್ರಾಮಕ್ಕೆ ಬರುವ ರಾಜ್ಯ ಹೆದ್ದಾರಿ ಸುಮಾರು ಒಂದು ಕೀ.ಮೀಟರ್‌ವರೆಗೆ ಸಂಪೂರ್ಣ ಕಿತ್ತು ಹೋಗಿದೆ.

Advertisement

ಅಲ್ಲದೇ ಕೃಷ್ಣಾ ನದಿಗೆ ಅಪಾರ ಪ್ರಮಾಣ ಮರಳು ಸಂಗ್ರಹಗೊಂಡಿದ್ದು, ನದಿ ಪಾತ್ರದ ಹೊಲ ಗದ್ದೆಗಳು ಸಹ ಮರುಳಿನಿಂದ ತುಂಬಿಕೊಂಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಅತೀವ ತೇವಾಂಶದಿಂದ ಕೊಳೆತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ನೀರಲ್ಲಿ ಮುಳುಗಿದ್ದ ಹೆದ್ದಾರಿ ಮಾತ್ರ ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಯಾಗುವವರೆಗೂ ವಾಹನ ಸಂಚಾರ ಸಾಧ್ಯವಿಲ್ಲ. ಜಿಲ್ಲಾಡಳಿತ ಈಗಲೇ ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರವಾಹದಲ್ಲಿ ನೂರಾರು ಕುಟುಂಬಗಳ ಬದುಕು ಮೂರಾಬಟ್ಟೆಯಾಗಿದ್ದು, ಕೂಡಲೇ ಅವರಿಗೆ ಬದುಕು ಕಟ್ಟಿಕೊಡಲು ಜಿಲ್ಲಾಡಳಿತ ನೆರವಿಗೆ ಬರಬೇಕು. ಹೊಲ, ಗದ್ದೆಗಳಲ್ಲಿ ನಾಶವಾದ ಬೆಳೆಗಳಿಗೆ ಸೂಕ್ತ ಮತ್ತು ಶೀಘ್ರದಲ್ಲಿ ಪರಿಹಾರ ನೀಡಬೇಕು. ಮನೆ ಕಳೆದುಕೊಂಡು ಬೀದಿಗೆ ಬಂದಿದ್ದ, ಗಂಜಿ ಕೇಂದ್ರದಲ್ಲಿ ವಾಸವಿದ್ದವರಿಗೆ, ಸೂಕ್ತ ಮನೆ ವ್ಯವಸ್ಥೆ ಕಲ್ಪಿಸಲು ಧನ ಸಹಾಯದ ಅಗತ್ಯವಿದೆ. ಜಿಲ್ಲಾಡಳಿತ ಕೂಡಲೇ ನೆರೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಬೇಕೆಂದು ಕೊಳ್ಳೂರ ಗ್ರಾಮದ ಯುವ ಮುಖಂಡ ಶಿವರಡ್ಡಿ ಕೊಳ್ಳೂರ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next