ಶಹಾಪುರ: ಶಾಂತತೆಯಿಂದ ಯಜ್ಞ ಯಾಗಾದಿಗಳ ಮೂಲಕ ಜಪ ತಪ ಕೈಗೊಂಡಲ್ಲಿ ಋಣ ಮುಕ್ತರಾಗಲು ಸಾಧ್ಯವಾಗಲಿದೆ ಎಂದು ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ತಿಳಿಸಿದರು.
ತಾಲೂಕಿನ ಐಕೂರ ಗ್ರಾಮದಲ್ಲಿ ಐಕೂರ ಆಚಾರ್ಯರ ಆರಾಧನಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಮೂರು ದಿನಗಳ ಕಾಲ ಜ್ಞಾನಸತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಋಣಶೇಷಗಳಿಂದ ಮಾನವನಿಗೆ ಜ್ಞಾನದ ಅರಿವು ವೃದ್ಧಿಸುತ್ತದೆ. ಅಜ್ಞಾನ ಜೀವನ ಸ್ವರೂಪವನ್ನು ಜ್ಞಾನ ಬದಲಾಯಿಸಲಿದೆ. ಜ್ಞಾನ, ಧ್ಯಾನ, ಯೋಗಗಳಿಂದ ಭಗವಂತನನ್ನು ಕಾಣಬಹುದು. ಮನಸ್ಸಿನ ನೆಮ್ಮದಿಗೆ ಸಂತರ, ಜ್ಞಾನಿಗಳ ಆರಾಧನೆ ಅಗತ್ಯ. ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿನ ಮೇಲೆ ಬೀಳುವ ಒತ್ತಡವನ್ನು ನಿವಾರಿಸಿ ಆರೋಗ್ಯ ಸೀಮಿತ ಸ್ಥಿತಿಗೆ ತರಲಿವೆ. ಯಾವುದೇ ಸಮಸ್ಯೆಗಳಿಂದ ನರಳುತ್ತಿದ್ದರೆ, ಬಗೆಹರಿಯದ ಸಮಸ್ಯೆಯಿಂದ ಕೊರಗು ವುದಕ್ಕಿಂದ ಭಗವಂತನ ಆರಾಧನೆ ಮಾಡಿದ್ದಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದರು.
ಬಂದ ಆಪತ್ತು ಬರಲಿರುವ ಮುಪ್ಪು ನೆನಸಿಕೊಂಡು ಸೊರಗುವುದಕ್ಕಿಂತ ಧಾರ್ಮಿಕ ಕಾರ್ಯ ಕೈಗೊಳ್ಳುವ ಮೂಲಕ ಉತ್ತಮ ಫಲಗಳನ್ನು ಪಡೆಯಬಹುದು. ನಿತ್ಯ ದೇವ ಸ್ಮರಣೆಯಿಂದ ಬದುಕು ರೂಢಿಸಿಕೊಂಡಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೇ ಜೀವನ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀಗಳಿಗೆ ತುಲಾಭಾರ ನೆರವೇರಿಸಲಾಯಿತು. ಮುಂಚಿತವಾಗಿ ಸುಬುಧೇಂದ್ರ ತೀರ್ಥರನ್ನು ವಾಹನವೊಂದರಲ್ಲಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಭವ್ಯ ಮೆರವಣಿಗೆ ನಡೆಸಲಾಯಿತು. ಸಹಸ್ರಾರು ಭಕ್ತರು ಶ್ರೀಗಳೊಂದಿಗೆ ಪುರ ಪ್ರವೇಶ ಮಾಡಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು.