ಶಹಾಪುರ: ಹಿಂದೆ ವಿದ್ಯಾರ್ಥಿಗಳ ಜೀವನ ಎಂದರೆ ಬಂಗಾರದ ಜೀವನ ಎನ್ನಲಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಜೀವನ ಕೇವಲ ಮೊಬೈಲ್ ಜೀವನ ಆಗಿದೆ ಎಂದರೆ ತಪ್ಪಿಲ್ಲ ಎಂದು ರಾಜ್ಯ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ. ನೀಲಾ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ನೆಸ್ಸೆಸ್, ರೆಡ್ ಕ್ರಾಸ್, ರೋವರ ಮತ್ತು ರೇಂಜರ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇವತ್ತಿನ ದಿನ ಎಲ್ಲರ ಕೈಗಳಲ್ಲಿ ಮೊಬೈಲ್ ಹಿಡಿದು ಅದರಿಂದ ಏನಾದರೂ ಸದ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದರೆ ಅದಕ್ಕೆಲ್ಲ ಡಾ|ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ಕಾರಣ. ಅವರನ್ನು ಈ ಕ್ಷಣದಲ್ಲಿ ಸ್ಮರಿಸುವ ಅಗತ್ಯವಿದೆ ಎಂದರು.
ಗ್ರಾಮೀಣ ಭಾಗದ ಮಕ್ಕಳು ಪಟ್ಟಣಕ್ಕೆ ಬಂದು ಸ್ನಾತಕ ಸ್ನಾತಕೋತ್ತರ ಪದವಿ ಅಭ್ಯಸಿಸುವಂತಾಗಿದೆ. ನಿಮ್ಮೆಲ್ಲ ಕೈಗಳಲ್ಲಿ ಮೊಬೈಲ್ ಬಂದಿದೆ. ನೀವೆಲ್ಲ ಉತ್ತಮ ಶಿಕ್ಷಣ ಪಡೆಯುವಂತಾಗಿದೆ ಎಂದರೆ ಡಾ| ಅಂಬೇಡ್ಕರ್ ಅವರು ಎಲ್ಲಾ ಜಾತಿ ಸಮುದಾಯಗಳಿಗೆ ಸಮರ್ಪಕವಾಗಿ ಮೀಸಲಾತಿ ಒದಗಿಸವು ಮೂಲಕ ಎಲ್ಲರಿಗೂ ಸಮಾನತೆ ಎಲ್ಲರೂ ಸುಶಿಕ್ಷಿತರಾಗಲಿ, ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯಲಿ ಎಂಬುದಕ್ಕೆ ಅವರು ರಚಿಸಿದ ಸಂವಿಧಾನದಿಂದಲೇ ಇಂದು ನಾವೆಲ್ಲ ಸುಶಿಕ್ಷತರಾಗಿ ಗೌರವದಿಂದ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿದರು. ಸಂವಿಧಾನ ನಮ್ಮ ದೇಶದ ದೊಡ್ಡ ಗ್ರಂಥ. ನಾವೆಲ್ಲ ಇತಿಹಾಸ ಓದಬೇಕು. ದೇಶದ ಚರಿತ್ರೆ ಅರಿಯಬೇಕು. ಓದು ನಿರಂತರ ಅರಿಯುವ ಪ್ರಕ್ರಿಯೆ, ನಾವೆಲ್ಲ ನಿತ್ಯ ಕನಿಷ್ಠ 8 ಗಂಟೆಯಾದರೂ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿವಿಧ ಕೃತಿಗಳನ್ನು ಓದುವ ಮೂಲಕ ಜ್ಞಾನ ಸಂಪಾದನೆ ಮಾಡಬೇಕು ಎಂದು ತಿಳಿಸಿದರು.
ಸಿಪಿಐ ಹನುಮರಡ್ಡೆಪ್ಪ ಮಾತನಾಡಿ, ವಿದ್ಯಾರ್ಥಿಗಳು ಓದುವ ಕಡೆ ನಿಮ್ಮ ಗಮನವಿರಲಿ. ಕೆಟ್ಟ ಚಟಕ್ಕೆ ಬಲಿಯಾಗದೆ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಪರಸ್ಪರರು ಸಹೋದರ, ಸಹೋದರಿ ಭಾವನೆಯೊಂದಿಗೆ ಅಭ್ಯಾಸ ಮಾಡಿ ಎಂದು ಆಶಿಸಿದರು.
ಪ್ರಾಂಶುಪಾಲ ಪ್ರೊ.ವಿ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕಿ ಡಾ| ಮೇದಾವಿನಿ ರಮೇಶ ಪೋತೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಸಿಪಿಐ ಹನುಮರಡ್ಡೆಪ್ಪ, ನಗರಸಭೆ ಸದಸ್ಯ ಶಿವಕುಮಾರ ತಳವಾರ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿದರು. ಸುರಪುರ ಪ್ರಭು ಕಾಲೇಜಿನ ಪ್ರಾಂಶುಪಾಲ ಸಂಗಪ್ಪ ಹೊಸಮನಿ, ಕಾಲೇಜಿನ ಸಾಂಸ್ಕೃತಿಕ ವಿಭಾಗ ಸಹಾಯಕ ಪ್ರಾಧ್ಯಾಪಕ ಸೂರ್ಯಕಾಂತ ಬಿ.ಉಮ್ಮಾಪುರೆ, ಕ್ರೀಡಾ ವಿಭಾಗದ ಡಾ| ಬಸಂತ ಎನ್. ಸಾಗರ, ರೆಡ್ ಕ್ರಾಸ್ ವಿಭಾಗದ ಡಾ| ಹಯ್ನಾಳಪ್ಪ ಸುರಪುರಕರ್, ಡಾ| ರಾಜು ಶಾಮರಾವ ಮತ್ತು ರೋವರ ಆಂಡ್ ರೇಂಜರ್ನ ಡಾ| ಸಂತೋಷ ಹುಗ್ಗಿ ಮತ್ತು ಕಾಳಮ್ಮ ಎಚ್.ಎಸ್. ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.