ಶಹಾಪುರ: ತಾಲೂಕಿಗೆ ಜೆಸ್ಕಾಂ ವಿಭಾಗೀಯ ಕಚೇರಿ ಮಂಜೂರಾದರೂ ಕಾರ್ಯಾರಂಭಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಹಾಗೂ ರೈತರ ಪಂಪ್ ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜೆಸ್ಕಾಂ ಕಚೇರಿ ಎದುರು ಕರ್ನಾಟಕ ಕೃಷಿ ಕೂಲಿಕಾರರ ಸಂಘ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ರೈತ ಮುಖಂಡ ಚನ್ನಪ್ಪ ಆನೇಗುಂದಿ ಮಾತನಾಡಿ, ತಾಲೂಕಿನ ಸಗರ, ಹತ್ತಿಗೂಡೂರ, ಶಹಾಪುರ, ಗೋಗಿ ಸೇರಿದಂತೆ ಹಲವಾರು ಹೋಬಳಿ ವ್ಯಾಪ್ತಿಗಳಲ್ಲಿ ವಿದ್ಯುತ್ ಸಮಪರ್ಕವಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಧರಣಿ ನಿರತರು, ಸಂಬಂಧಿಸಿದ ಲೈನ್ ಮ್ಯಾನ್‌ಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಮುಖ್ಯವಾಗಿ ವಿಭಾಗೀಯ ಕಚೇರಿ ಆರಂಭಗೊಳ್ಳದೆ ನನೆ ಗುದಿಗೆ ಬಿದ್ದಿರುವ ಕಾರಣವೇನು ಎಂಬುದನ್ನು ಅಧಿಕಾರಿಗಳು ಸ್ಪಷ್ಟ ಪಡಿಸಬೇಕು. ಕಳೆದ 2018 ಸೆ. 22ರಂದು ಸರ್ಕಾರ ವಿಭಾಗೀಯ ಕಚೇರಿ ಆರಂಭಕ್ಕೆ ಆದೇಶ ಹೊರಡಿಸಿದ್ದು, ಪ್ರಾರಂಭ ಮಾಡುವುದಕ್ಕೆ ಈ ಭಾಗದ ಅಧಿಕಾರಿಗಳು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಕಾರ್ಯ ಪ್ರವೃತ್ತವಾಗಿ ವಿಭಾಗೀಯ ಕಚೇರಿ ಆರಂಭಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಸಾಗರ, ಸಿದ್ಧಯ್ಯ ಹಿರೇಮಠ, ಮಲ್ಲಯ್ಯ ಪೋಲಂಪಲ್ಲಿ, ದಾವಲಸಾಬ್ ನದಾಫ್, ನಿಂಗಣ್ಣ ನಾಟೇಕಾರ, ಜೈಲಾಲ ತೋಟದಮನಿ, ಸೈಯ್ಯದ್ ಖಾಲಿದ, ಮಲ್ಲಣ್ಣ ಶಿರಡ್ಡಿ, ಬಾಬುರಾವ್ ಪೂಜಾರಿ, ಹೊನ್ನಪ್ಪ ಪೀರಾ, ಹಣಮಂತ ಟೊಕಾಪುರ, ಭೀಮಣ್ಣ ಯಳವಾರ ಇದ್ದರು.