ಶಹಾಪುರ: ನಗರದ ಗಂಜ್ ಏರಿಯಾದ ಖಾಸಗಿ ಕಟ್ಟಡವೊಂದರಲ್ಲಿ ಕಳೆದ 20 ವರ್ಷದಿಂದ ಬಾಡಿಗೆಗೆ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಕಟ್ಟಡ ಶಿಥಿಲಗೊಂಡಿದ್ದರೂ ಇನ್ನೂ ಅಧಿಕಾರಿಗಳು ತಮ್ಮ ಕಚೇರಿ ಬದಲಾವಣೆ ಮಾಡಲು ಮನಸ್ಸು ಮಾಡುತ್ತಿಲ್ಲ.
ಕಚೇರಿ ಪ್ರವೇಶದಲ್ಲಿಯೇ ಕೋಣೆ ಛಾವಣಿ ಸಿಮೆಂಟ್ ಪೂರ್ಣ ಬಿದ್ದಿದ್ದು, ಕಬ್ಬಿಣದ ಸಲಾಕೆಗಳು ಎದ್ದು ಕಾಣುತ್ತಿವೆ. ತುಂಬಾ ಹಳೆಯದಾದ ಕಟ್ಟಡ ಇದಾಗಿದ್ದು, ಎರಡನೇ ಮಹಡಿ ಮೇಲಿದೆ. ಅದು ತೀರಾ ಇಕ್ಕಟ್ಟಿನಿಂದ ಕೂಡಿದ ಮೆಟ್ಟಿಲುಗಳ ಮೇಲಿಂದ ಏರಬೇಕಾದರೆ ಕಷ್ಟಕರ ಕೆಲಸವಾಗಿದೆ.
ಅಧಿಕಾರಿಗಳು ಕಟ್ಟಡ ಬಾಡಿಗೆ ವಿಷಯದಲ್ಲಿ ಯಾವ ಲೆಕ್ಕಾಚಾರ ಹಾಕಿದ್ದಾರೋ ಗೊತ್ತಿಲ್ಲ. ಈ ಕಚೇರಿ ಮಾತ್ರ ಬಿಟ್ಟು ಬರುವ ಮನಸ್ಸು ಮಾಡುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ. ಕಳೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಖಾನಾಪುರ ತಾಪಂ ಸದಸ್ಯರೊಬ್ಬರು ಈ ಕಚೇರಿ ಬೇರಡೆಗೆ ಸ್ಥಳಾಂತರಿಸಬೇಕು. ಕಚೇರಿ ಇರುವ ಪ್ರದೇಶ ಸರಿಯಿಲ್ಲಿ ಎಂದು ಒತ್ತಾಯಿಸಿದ್ದರು.
ಇಷ್ಟಾದರೂ ಇಲ್ಲಿನ ಸಿಡಿಪಿಒ ಮಾತ್ರ ತಮ್ಮ ಕಚೇರಿ ಸ್ಥಳಾಂತರಕ್ಕೆ ಮನಸ್ಸು ಮಾಡದಿರುವುವದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಬೀಳುವ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವುದು ಕಷ್ಟಕರ. ಕಚೇರಿ ಒಳಗೆ ಬರುವಾಗ ಜನ ಜೀವಭಯದಿಂದ ಇಲ್ಲಿಗೆ ಬರುತ್ತಿದ್ದಾರೆ ಎಂದು ಚಲುವಾದಿ ಸಭಾ ತಾಲೂಕು ಅಧ್ಯಕ್ಷ ದೇವಿಂದ್ರ ಗೌಡೂರ ಆರೋಪಿಸಿದ್ದಾರೆ.
ಕಳೆದ ತಾಪಂ ಸಭೆಯಲ್ಲಿ ಸಿಡಿಪಿಒ ಕಚೇರಿ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದೇನೆ. ಮಹಿಳೆಯರು ಮತ್ತು ವೃದ್ಧರು ಮಕ್ಕಳು ಬಾರದಂತ ಕಟ್ಟಡದಲ್ಲಿ ಕಚೇರಿ ಇದೆ. ತಾಪಂ ಮತ್ತು ಜಿಪಂ ಮತ್ತು ಪಿಡಬ್ಲೂಡಿ ಇಲಾಖೆಗೆ ಸಂಬಂಧಿಸಿದ ಕಟ್ಟಡಗಳು ಸಾಕಷ್ಟಿವೆ. ಅದರಲ್ಲಿ ಉತ್ತಮ ಕಟ್ಟಡ ಆರಿಸಿಕೊಂಡು ಜನರಿಗೆ ಅನುಕೂಲ ಕಲ್ಪಿಸಬೇಕು.•ಪರಶುರಾಮ
ಕುರಕುಂದಾ, ತಾಪಂ ಸದಸ್ಯ
ಈ ಹಿಂದೆ ತಾಲೂಕು ಪಂಚಾಯಿತಿಯಲ್ಲಿನ ಹಳೆ ಕಟ್ಟಡವೊಂದಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ವಿನಾಕಾರಣ ಮತ್ತೆ ಕಚೇರಿ ವಾಪಸ್ ಇದೇ ಸ್ಥಳಕ್ಕೆ ವರ್ಗಾಯಿಸಲಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಈಗಲೂ ಈ ಬಗ್ಗೆ ಮೇಲಧಿಕಾರಿಗಳ ಜೊತೆ ಮಾತನಾಡಿ ಉತ್ತಮ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಕೋರುತ್ತೇನೆ.
•
ಟಿ.ಪಿ. ದೊಡ್ಮನಿ. ಸಿಡಿಪಿಒ ಶಹಾಪುರ