Advertisement

ಧಾರ್ಮಿಕ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ

04:26 PM Apr 27, 2019 | Naveen |

ಶಹಾಪುರ: ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕರ್ನಾಟಕದ 9 ಜನರು ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಭಾರತೀಯರು ಹತರಾಗಿದ್ದು, ಇಂತಹ ಘಟನೆಗಳು ಭಾರತದಲ್ಲಿ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಪಿಐ ನಾಗರಾಜ ಜೆ. ಹೇಳಿದರು.

Advertisement

ನಗರದ ಪೊಲೀಸ್‌ ಠಾಣೆಯಲ್ಲಿ ನಡೆದ ನಗರದ ವಿವಿಧ ಬಡಾವಣೆಯಲ್ಲಿನ ಮಂದಿರ, ಮಸೀದಿ ಮತ್ತು ಚರ್ಚ್‌ಗಳ ಮುಖ್ಯಸ್ಥರು, ಅಂಗಡಿ ಮುಂಗಟ್ಟುಗಳ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಮಸೀದಿ, ಮಂದಿರ, ಚರ್ಚ್‌ ಹೋಟೆಲ್, ಅಂಗಡಿ ಮುಂಗಟ್ಟುಗಳ ಮುಂಭಾಗಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಮೂಲಕ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಲು ಸಾರ್ವತ್ರಿಕ ಸಹಕಾರ ಅಗತ್ಯವಿದೆ. ಹಾಗಾಗಿ ಸರ್ವರೂ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಅಲ್ಲದೆ ಅಪರಿಚಿತ ವ್ಯಕ್ತಿಗಳ ಸಂಚಾರ ಅನುಮಾನ ಕಂಡು ಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಆದಷ್ಟು ಬೇಗ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡಲ್ಲಿ ಅಪರಾಧ ಕೃತ್ಯಗಳನ್ನು ಶೀಘ್ರ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಸುತ್ತಮುತ್ತಲಿನ ಪರಿಸರದ ದೈನಂದಿನ‌ ಚಟುವಟಿಕೆಗಳ ಚಿತ್ರಣ ಕಾಣಬಹುದಾಗಿದೆ. ಇವುಗಳು ಇಂದಿನ ವ್ಯವಸ್ಥೆಗೆ ಅವಶ್ಯಕವಾಗಿವೆ ಎಂದು ಹೇಳಿದರು.

ನಗರದ ಪ್ರತಿಷ್ಠಿತ ಸ್ಥಳಗಳಾದ ಡಿಸಿಸಿ ಬ್ಯಾಂಕ್‌ ಸೇರಿದಂತೆ ಇತರೆ ಬ್ಯಾಂಕ್‌ಗಳಲ್ಲಿ ಸಿಸಿ ಕ್ಯಾಮೆರಾಗಳು ಸ್ಥಗಿತಗೊಂಡಿವೆ. ಇವುಗಳಿಂದ ಕಳ್ಳತನ, ದರೋಡೆ ಪ್ರಕರಣ ಪತ್ತೆಗೆ ಅಡ್ಡಿ ಉಂಟಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

Advertisement

ಇತ್ತೀಚಿನ ದಿನಮಾನಗಳಲ್ಲಿ ರೈತರ ಹಣವನ್ನು ಬ್ಯಾಂಕ್‌ಗಳಲ್ಲೆ ಕಸಿದಕೊಂಡು ಪರಾರಿಯಾದರೂ ದರೋಡೆಕೋರರ ಗುರುತು ಸಿಗದ ಸ್ಥಿತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಅವ್ಯವಸ್ಥೆಗಳಿಂದ ಅಪರಾಧ‌ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿವೆ. ಕಾರಣ ಸಂಬಂಧಪಟ್ಟ ಬ್ಯಾಂಕ್‌, ಹೋಟೆಲ್, ಅಂಗಡಿ ಮನೆಗಳ ಮಾಲೀಕರು ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಇದರಿಂದ ಅವ್ಯವಹಾರಗಳು ಕೊಲೆ ದರೋಡೆಗಳು ಕಡಮೆಯಾಗುತ್ತವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡರಾದ ಸಣ್ಣ ನಿಂಗಣ್ಣ ನಾಯ್ಕೋಡಿ, ನಾಗಪ್ಪ ತಹಶೀಲ್ದಾರ್‌, ಶಿವಪುತ್ರ ಜವಳಿ, ಸಯ್ಯದ್‌ ಖಾಲೀದ್‌, ಜಮೀರಸಾಬ್‌ ಸೇರಿದಂತೆ ಮಸೀದಿ, ಮಂದಿರ ಮತ್ತು ಚರ್ಚ್‌ ಅರ್ಚಕರು, ಮುಖ್ಯಸ್ಥರು ನಗರದ ವಿವಿಧ ಬಡಾವಣೆಗಳ ಗಣ್ಯರು ಭಾಗವಹಿಸಿದ್ದರು.
ನಗರಸಭೆ ಅನುದಾನದಲ್ಲಿ 13 ಲಕ್ಷ.ರೂ. ವೆಚ್ಚದಲ್ಲಿ ನಗರದ ಬಸವೇಶ್ವರ ವೃತ್ತ ಹಾಗೂ ಹೊಸ ಬಸ್‌ ನಿಲ್ದಾಣ, ಹಳೆ ನಿಲ್ದಾಣ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಮೂಲಭೂತ ಸೌಕರ್ಯಗಳ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೂ ಇದುವರೆಗೂ ಸಮರ್ಪಕವಾಗಿ ಅಳವಡಿಕೆಯಾಗಿಲ್ಲ. ಕೆಲವಡೆ ಆಗಿದ್ದರೂ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕುರಿತು ನಗರಸಭೆಗೆ ಸಾಕಷ್ಟು ಪತ್ರ ಬರೆದು ತಿಳಿಸಲಾಗಿದೆ. ಸೂಕ್ತ ಸ್ಪಂದನೆ ದೊರೆತಿಲ್ಲ. ಹೆಲ್ಮೆಟ್ ಧರಿಸದ ಕಾರಣ ನಗರದಲ್ಲಿ 15ಕ್ಕೂ ಹೆಚ್ಚು ದುರ್ಮರಣ ಸಂಭವಿಸಿವೆ. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. •ನಾಗರಾಜ ಜೆ., ಸಿಪಿಐ ಶಹಾಪುರ

Advertisement

Udayavani is now on Telegram. Click here to join our channel and stay updated with the latest news.

Next