ಶಹಾಪುರ: ಪ್ರಸ್ತುತ ಒತ್ತಡದ ಜೀವನದಲ್ಲಿ ಸಂಸಾರ ಎಂಬುದು ಜಡವಾಗಿ ಮನಸ್ಸು ಹತೋಟಿ ತಪ್ಪಿ ಮಾನಸಿಕವಾಗಿ ಕುಗ್ಗಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಜಾಸ್ತಿ ಇವೆ. ಮಾನಸಿಕ ಒತ್ತಡ ಜೀವನದಿಂದ ಪಾರಾಗಲು ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದು ಫಕ್ಕೀರೇಶ್ವರ ಮಠದ ಶ್ರೀ ಗುರುಪಾದ ಸ್ವಾಮೀಜಿ ಹೇಳಿದರು.
ನಗರದ ಫಕ್ಕೀರೇಶ್ವರ ಮಠದಲ್ಲಿ ಜ್ಞಾನ ಯೋಗ ಆಧ್ಯಾತ್ಮಿಕ ಸೇವಾ ಸಮಿತಿಯಿಂದ ಹುಣ್ಣಿಮೆ ಹೊಳಪು ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಸತ್ಸಂಗದಲ್ಲಿ ಭಕ್ತಿಯಿಂದ ಭಾಗವಹಿಸಿ ಒಂದಿಷ್ಟು ದೇವರ ಸ್ಮರಣೆಯಲ್ಲಿ ಭಜನೆ, ಕೀರ್ತನ ಗೀತೆಗಳಲ್ಲಿ ತಲ್ಲೀನನಾಗುವ ಮೂಲಕ ಮಾನಸಿಕವಾಗಿ ಸಮತೋಲನಕ್ಕೆ ಬಂದು ಒತ್ತಡ ಬದುಕಿನಿಂದ ಪಾರಾಗಿ ನೆಮ್ಮದಿ ಕಾಣಬಹುದು ಎಂದು ಹೇಳಿದರು.
ಅದ್ವೈತ ಸಿದ್ಧಾಂತದ ಸಾರ್ವಭೌಮ ಚಕ್ರವರ್ತಿಯಾಗಿರುವ ಶಂಕರಾಚಾರ್ಯರು ಹೇಳಿರುವ ಹಾಗೆ ಸತ್ಸಂಗದಿಂದ ಬದುಕಿಗೆ ಮುಕ್ತಿ ಸಿಗುವುದರ ಜತೆಗೆ ನಮ್ಮ ಜೀವನ ಪರಮ ಪಾವನವಾಗಲಿದೆ ಎಂದು ಹೇಳಿದರು.
ಹಣ, ಸಂಪತ್ತು ಗಳಿಸುವ ಭರಾಟೆಯಲ್ಲಿ ನಾವು ಕುಟುಂಬದ ನೆಮ್ಮದಿ, ಸಂತೋಷ, ಸಂತೃಪ್ತಿ ಕಳೆದುಕೊಂಡು ದ್ವೇಷ, ರೋಷ ವ್ಯಾಮೋಹ ಎಂಬ ಭ್ರಾಂತಿಯಲ್ಲಿ ಮುಳುಗುತ್ತಿದ್ದೇವೆ. ಇದರಿಂದ ಅರ್ಥ ಬದ್ಧ ಜೀವನ ವ್ಯರ್ಥವಾಗಿಸುತ್ತಿದ್ದೇವೆ. ಇದರಿಂದ ಹೊರಬರಲು ಉತ್ತಮ ಬದುಕು ಕಟ್ಟಿಕೊಳ್ಳಲು ಸುಸಂಸ್ಕಾರ ಅಗತ್ಯವಿದೆ. ಗುರುವಿನ ಸಮ್ಮುಖದಲ್ಲಿ ಸತ್ಸಂಗದಲ್ಲಿ ಭಾಗವಹಿಸುವ ಮೂಲಕ ಉತ್ತಮ ಬದುಕು ರೂಢಿಸಿಕೊಳ್ಳಲು ಸಾಧ್ಯವಿದೆ. ಕಾರಣ ನಿತ್ಯ ಒಂದಿಷ್ಟು ಸಮಯ ಯೋಗ, ಧ್ಯಾನ ಆಧ್ಯಾತ್ಮಿಕತೆಗೆ ಸಮಯ ತೆಗೆದಲ್ಲಿ ನಿಜವಾದ ಸುಖ, ನೆಮ್ಮದಿ ಕಂಡುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೂರಾರು ಜನ ಭಕ್ತರು ಭಾಗವಹಿಸಿ ಶ್ರೀಗಳ ಸಂದೇಶ ಕೇಳಿದರು. ಭಜನೆ, ಕೀರ್ತನೆಯಲ್ಲಿ ಭಾಗವಹಿಸಿದರು. ನಂತರ ಧ್ಯಾನ ಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಗುರುಪಾದ ಶ್ರೀಗಳು, ಚುಟುಕು ಸಾಹಿತ್ಯ ಪರಿಚತ್‌ನ ನೂತನ ತಾಲೂಕು ಅಧ್ಯಕ್ಷ ಮಹೇಶ ಪತ್ತಾರ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.