ಶಹಾಪುರ: ಇತ್ತೀಚೆಗೆ ನಗರದ ವಾರ್ಡ್ ನಂ.22ರ ಕುಂಚಿಕೊರವರ ಓಣಿಯಲ್ಲಿ ಡೆಂಘೀ ಪ್ರಕರಣದಿಂದ ಓರ್ವ ಬಾಲಕ ಮೃತಪಟ್ಟಿದ್ದಲ್ಲದೆ ಮೃತ ಬಾಲಕನ ಕುಟುಂಬದಲ್ಲಿಯೇ ಮತ್ತೆರಡು ಡೆಂಘೀ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಅಪರ ನಿರ್ದೇಶಕ ಓಂಪ್ರಕಾಶ ಪಾಟೀಲ್ ಶನಿವಾರ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಡೆಂಘೀಯಿಂದ ಮೃತಪಟ್ಟಿದ್ದ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕುಟಂಬಸ್ಥರ ಇನ್ನಿಬ್ಬರ ಬಾಲಕರಿಗೆ ಡೆಂಘೀ ಪತ್ತೆಯಾದ ಕುರಿತು ಮಾಹಿತಿ ಪಡೆದ ಅವರು, ಅದೇ ರೀತಿ ಇನ್ನುಳಿದ ಕುಟುಂಬದ ಎಲ್ಲರ ರಕ್ತ ಪರೀಕ್ಷೆ ಮಾಡಿಸುವಂತೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಸುತ್ತಮುತ್ತ ವಾಸಿಸುವ ಕುಟುಂಬಗಳ ರಕ್ತ ತಪಾಸಣೆಗೆ ಕ್ರಮ ಕೈಗೊಂಡಿದ್ದು, ಮೃತ ಬಾಲಕನ ಮನೆಯವರೆಲ್ಲರ ರಕ್ತ ಪರೀಕ್ಷೆ ನಡೆಸುವಂತೆ ಸೂಚಿಸಿರುವೆ ಎಂದರು.
ಬಡಾವಣೆಯಲ್ಲಿ ಚರಂಡಿ ಹೊಲಸು ನೀರು ಸಂಗ್ರಹ, ವಿಲೇವಾರಿಯಾಗದ ತ್ಯಾಜ್ಯ, ಕೊಳಚೆ ನೀರು ಸಂಗ್ರಹ, ಹಂದಿಗಳ ವಾಸ ಹೀಗೆ ಅಸುರಕ್ಷತಾ ಪರಿಸರದಿಂದ ಡೆಂಘಿಯಂತಹ ಮಾರಕ ರೋಗಗಳು ಹರಡುತ್ತಿವೆ. ಮಾರಕ ರೋಗಗಳ ತಡೆಗೆ ಕ್ರಮ ಕೈಗೊಳ್ಳಲು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕುರಿತು ಇಲಾಖೆ ಸಿಬ್ಬಂದಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಡಾವಣೆ ಸಂಪೂರ್ಣ ಮಾಹಿತಿ ಪಡೆದಿರುವೆ. ಕೂಡಲೇ ಮಾರಕ ರೋಗಗಳ ತಡೆಗೆ ಕ್ರಮಕ್ಕೆ ಸೂಚಿಸಿರುವೆ. ನಗರಸಭೆ ನಾಗರಿಕರು ಇದಕ್ಕೆ ಕೈಜೋಡಿಸಬೇಕು. ಆಗ ಆರೋಗ್ಯಯುತ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಭಗವಂತ ಅನುವಾರ, ಆರ್.ಸಿ.ಎಚ್. ಅಧಿಕಾರಿ ಲಕ್ಷ್ಮೀ ಕಾಂತ, ಟಿಎಚ್‌ಒ
ಡಾ| ರಮೇಶ ಗುತ್ತೇದಾರ, ತಾಲೂಕು ಆಸ್ಪತ್ರೆ ಮುಖ್ಯಾಧಿಕಾರಿ ಡಾ| ಮಲ್ಲಪ್ಪ ಕಣಜಿಗಿಕರ್, ಆರೋಗ್ಯ ಶಿಕ್ಷಣಾಧಿ ಕಾರಿ ಶಿವರಾಜ ಜಾನೆ, ಹಿರಿಯ ಆರೋಗ್ಯ ಸಹಾಯಕ ಸಂತೋಷ ಮುಳಜೆ, ಮಲ್ಲಪ್ಪ ಕಾಂಬಳೆ, ಸಂಗಣ್ಣ ನುಚ್ಚಿನ, ಪ್ರಮೀಳಾ ಇದ್ದರು.