Advertisement

ಕುರಿ ಸಾಕಾಣಿಕೆಗೆ ಹಿಂಜರಿಕೆ ಬೇಡ

05:18 PM Jan 31, 2020 | Naveen |

ಶಹಾಬಾದ: ಲಾಭದಾಯಕ ಕಸುಬಾದ ಕುರಿ ಸಾಕಾಣಿಕೆ ಕೈಗೊಳ್ಳಲು ರೈತರು ಯಾವುದೇ ಹಿಂಜರಿಕೆಯಿಲ್ಲದೇ ಉತ್ತಮ ರೀತಿಯ ತಾಂತ್ರಿಕ ಜ್ಞಾನ ಪಡೆದು ವೈಜ್ಞಾನಿಕ ಕುರಿ ಸಾಕಾಣಿಕೆ ಮಾಡಿದಲ್ಲಿ ರೈತರ ಅಭ್ಯುದಯ ಸಾಧ್ಯ ಎಂದು ಕಲಬುರಗಿಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಡಾ| ಶಿವಕುಮಾರ ಜಂಬಲದಿನ್ನಿ ಹೇಳಿದರು.

Advertisement

ಭಂಕೂರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ವೈಜ್ಞಾನಿಕ ಪದ್ಧತಿಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ರೈತರು ಪ್ರತಿವರ್ಷ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕೃಷಿಯಲ್ಲಿ ನಿರಂತರ ನಷ್ಟ ಅನುಭವಿಸಿ ಸಾಲಭಾದೆ ತಾಳದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಬೇಕಾದರೆ ರೈತರು ಕೃಷಿ ಜತೆಗೆ ಕುರಿ, ಆಡು, ಗೋವು ಸಾಕಾಣಿಕೆ, ಹೈನುಗಾರಿಕೆಯಂತಹ ಉಪಕಸುಬನ್ನು ಮಾಡಿದಾಗ ಲಾಭ ಗಳಿಸಿ ಸಾಮಾಜಿಕವಾಗಿ,ಆರ್ಥಿಕವಾಗಿ ಸದೃಢನಾಗುತ್ತಾರೆ ಎಂದರು.

ವಿದ್ಯಾವಂತ ಯುವಕರು ನೌಕರಿಗಾಗಿ ಅಲೆದಾಡಿ ಸಮಯ ಕಳೆಯುವುದರ ಬದಲು ಹಳ್ಳಿಯಲ್ಲೇ ಸ್ವಯಂ ಉದ್ಯೋಗ ಸೃಷ್ಟಿಸಿ ಮಾಲೀಕರಾಗಿ ಉತ್ತಮ ಆದಾಯ ಪಡೆದುಕೊಳ್ಳಬಹುದು. ಅಲ್ಲದೇ ಕುರಿ ಸಾಕಾಣಿಕೆ ತರಬೇತಿಯಿಂದ ಮಾಹಿತಿ ತಿಳಿಯಬಹುದು ಎಂದು ಹೇಳಿದರು.

ಪಶು ವೈದ್ಯೆ ದೀಪ್ತಿ ಅಲಧರ್ತಿ ಮಾತನಾಡಿ, ದಿನೇ ದಿನೇ ಕುರಿಗಳ ಬೇಡಿಕೆ ಹೆಚ್ಚಾಗುತ್ತಿದೆ.
ರೈತರು ಹಳೆಯ ಪದ್ಧತಿಯಂತೆ ಕುರಿ ಸಾಕಾಣಿಕೆ ಮಾಡದೇ ವೈಜ್ಞಾನಿಕವಾಗಿ ಮಾಡಿದರೆ 2ರಿಂದ 3 ತಿಂಗಳ 3000ರೂ ಬೆಲೆಯ ಗಂಡು ಕುರಿ ತಂದು ಐದಾರು ತಿಂಗಳು ಸಲುಹಿ ಒಂಭತ್ತು ತಿಂಗಳಿಗೆ ಮಾರಾಟ ಮಾಡಿದರೆ ಒಂದು ಗಂಡು ಕುರಿ ಸುಮಾರು 12ರಿಂದ 15 ಸಾವಿರ ರೂ. ಗೆ ಮಾರಾಟವಾಗುತ್ತದೆ. ಈ ಮಾದರಿಯಲ್ಲಿ ಎರಡ್ಮರೂರು ಗುಂಪುಗಳನ್ನು ರಚಿಸಿ ಅವುಗಳಿಗೆ ಸಮಯಕ್ಕೆ ಸರಿಯಾಗಿ ಜಂತು ನಾಶಕ, ಕರಳು ಬೇನೆ ಸೇರಿದಂತೆ ಇತರ ರೋಗಗಳ ವಿರುದ್ಧ ಲಸಿಕೆ ಹಾಕಿಸಿ ಲಾಲನೆ ಪೋಷಣೆ ಮಾಡಿದರೆ ಲಕ್ಷಗಳಲ್ಲಿ ಆದಾಯ ಪಡೆಯಬಹುದು ಎಂದು ಹೇಳಿದರು.

ದೇವೆಂದ್ರಪ್ಪ ಬೆಳಗುಂಪಿ ಅಧ್ಯಕ್ಷತೆ ವಹಿಸಿದ್ದರು. ಭಂಕೂರ ತಾ.ಪಂ ಸದಸ್ಯೆ ವಿಜಯಲಕ್ಷ್ಮೀ ಸುರೇಶ ಚವ್ಹಾಣ, ಕೆಎಂಎಫ್‌ ಅ ಧಿಕಾರಿ ಸಿದ್ಧಲಿಂಗ ಸಿರಗೊಂಡ, ಸುರೇಶ ಚವ್ಹಾಣ, ಗ್ರಾ.ಪಂ ಮಾಜಿ ಸದಸ್ಯ ರಾಯಪ್ಪ ಹೂಗೊಂಡ, ಚಂದ್ರಕಾಂತ ಧರಿ, ಶರಣು ಮುಡ್ಲಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next