Advertisement

ಬಿಸಿಲಿನ ಹೊಡೆತಕ್ಕೆ ಕಾಗಿಣಾ ಒಡಲು ಬರಿದು

09:50 AM May 15, 2019 | Naveen |

ಶಹಾಬಾದ: ನಗರದಿಂದ ಕೇವಲ ಎರಡು ಕಿಮೀ ದೂರದಲ್ಲಿರುವ ಭಂಕೂರ ಗ್ರಾಮದಲ್ಲಿ ಕಾಗಿಣಾ ನದಿಯಿದ್ದರೂ, ನೀರಿಗಾಗಿ ಹಾಹಾಕಾರ ಭುಗಿಲೆದ್ದಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ಬಂದೊದಗಿದೆ.

Advertisement

ಸುಮಾರು ಹದಿನೈದು ಸಾವಿರ ಜನಸಂಖ್ಯೆ ಹೊಂದಿರುವ ಭಂಕೂರ ಗ್ರಾಪಂ ಕೇಂದ್ರ ಸ್ಥಾನ ಹೊಂದಿದೆ. ಕಳೆದ ಒಂದು ತಿಂಗಳಿನಿಂದ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ ಗ್ರಾಮಸ್ಥರು ನೀರಿಗಾಗಿ ಪ್ರತಿನಿತ್ಯ ಅಲೆಯುವಂತಾಗಿದೆ. ಗ್ರಾಪಂ ಪಕ್ಕದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಗ್ರಾಮದ ಜನರಿಗೆ ವರದಾನವಾಗಿತ್ತು. ಆದರೆ ಬೇಸಿಗೆ ಪ್ರಭಾವಕ್ಕೆ ಒಳಗಾಗಿ ಕೊಳವೆ ಬಾವಿ ಬತ್ತಿ ಹೋಗಿದೆ. ಗ್ರಾಮದ ಪಂಚಾಯಿತಿ ಬಳಿಯಿರುವ ಬೆಳಗ್ಗೆ ಹಾಗೂ ಸಂಜೆ ಶುದ್ಧೀಕರಣ ಘಟಕದಿಂದ ಬರುವ ನೀರಿಗಾಗಿ ಹತ್ತಾರು ಕೊಡಗಳನ್ನು ಹಿಡಿದು ನಸುಕಿನ ಜಾವದಿಂದಲೇ ಸರದಿಯಲ್ಲಿ ಕಾಯುವಂಥ ಪರಿಸ್ಥಿತಿ ಗ್ರಾಮಸ್ಥರಿಗಾಗಿದೆ.

ಗ್ರಾಮದ ಹಣಮಂತ ದೇವರ ದೇವಸ್ಥಾನದ ಹಿಂದೆ ಒಂದು ಬಾವಿಯಿದೆ. ಅದು ಬಳಸಲು ಯೋಗ್ಯವಾ ಗಿಲ್ಲ. ಇರುವ ಒಂದೆರಡು ಕೊಳವೆ ಬಾವಿಗಳಲ್ಲಿ ನೀರು ಪಾತಾಳಕ್ಕೆ ಇಳಿದಿವೆ. ಇದರಿಂದ ಹನಿ ನೀರಿಗಾಗಿಯೂ ಪರದಾಡುವ ಪರಿಸ್ಥಿತಿ ಇದೆ. ಪ್ರತಿ ಬೇಸಿಗೆಯಲ್ಲಿ ಒಂದೆರಡು ಬಾರಿಯಾದರೂ ಮಳೆಯಾಗುತ್ತಿತ್ತು. ಇದರಿಂದ ಧರೆ ತಂಪಾಗುತ್ತಿತ್ತು. ಆದರೆ ಈ ಬಾರಿ ಒಂದು ಬಾರಿಯೂ ಮಳೆಯಾಗದಿರುವುದರಿಂದ ಭೂಮಿ ಕಾದ ಬಾಣಲೆಯಂತಾಗಿದೆ. ಎಲ್ಲಿಲ್ಲದ ಸಂಕಷ್ಟ ಎದುರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ದುಬಾರಿ ಬೆಲೆಗೆ ಕ್ಯಾನ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಅನಿವಾರ್ಯವಾಗಿ ತೆಗೆದ ಕೊಳ್ಳಬೇಕಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವವರು ಯಾರು ಇಲ್ಲದಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಬಿಸಿಲಿನ ಪ್ರಖರತೆಗೆ ಮನೆಯಿಂದ ಹೊರ ಬರುವಂತಿಲ್ಲ. ಮದುವೆ, ಗೃಹ ಪ್ರವೇಶ ಇತರ ಕಾರ್ಯಕ್ರಮಗಳಿಗೆ ಅನಿವಾರ್ಯವಾಗಿ ಹೋಗು ವಂತಾಗಿದೆ. ಇತ್ತ ಕಾಗಿಣಾ ಒಡಲು ಬರಿದಾಗಿದೆ. ಸುತ್ತಮುತ್ತಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಗಿಡ, ಮರಗಳು ಒಣಗಿವೆ. ದನ-ಕರುಗಳಿಗೆ ಮೇವಿಲ್ಲ. ಹಸಿರು ಹುಡುಕಿಕೊಂಡು ಅಲೆದಾಡುವ ಪರಿಸ್ಥಿತಿ ಬಂದೊಗಿದೆ. ಈ ಬೇಸಿಗೆಯಲ್ಲಿ ನದಿಯೂ ಸಂಪೂರ್ಣ ಬತ್ತಿ ಹೋಗಿದ್ದರಿಂದ ನೀರಿನ ಸರಬರಾಜು ಮಾಡುವುದು ಗ್ರಾಪಂಗೆ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ಜನಗಳಿಗೆ ನೀರಿಲ್ಲ, ಇನ್ನು ಜಾನುವಾರುಗಳ ಗತಿ ಏನು ಎನ್ನುವಂತಾಗಿದೆ.

ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಹಿಂದೆ ನದಿಯಲ್ಲಿ ಜಾಕವೆಲ್ ನಿರ್ಮಿಸಲಾಗಿದೆ. ಅದರ ಮೇಲೆ ಯಾವುದೇ ಮುಚ್ಚಳಕವಿಲ್ಲದೇ ಇರುವುದರಿಂದ ಮಳೆಗಾಲದಲ್ಲಿ ನದಿ ತುಂಬಿ ಬಂದಾಗ ಜಾಕವೆಲ್ ನೀರಿನಲ್ಲಿ ಮುಳುಗುತ್ತದೆ. ಅಲ್ಲದೇ ಹರಿದು ಬಂದ ಎಲ್ಲ ಪದಾರ್ಥಗಳು ಜಾಕವೆಲ್ನಲ್ಲಿ ಸೇರಿ ಗಬ್ಬು ವಾಸನೆ ಹರಡಲು ಶುರುವಾಗುತ್ತದೆ. ಅಲ್ಲದೇ ಈಗಾಗಲೇ ಜಾಕವೆಲ್ನಿಂದ ಸರಬರಾಜು ಮಾಡುವ ನೀರನ್ನು ಬಳಸಿದ್ದಕ್ಕೆ ಜನರಿಗೆ ತುರಿಕೆ ಕಂಡುಬರುತ್ತಿದೆ. ಗ್ರಾಪಂ ನೀರನ್ನು ಪರೀಕ್ಷೆಗೆ ಕಳಿಸಿದ್ದು, ಈ ನೀರು ಕುಡಿಯಬೇಡಿ ಹಾಗೂ ಬಳಸಬೇಡಿ ಎಂದು ಡಂಗೂರ ಸಾರಿದ್ದಾರೆ. ಈಗಾಗಲೇ ಗ್ರಾಪಂನಿಂದ ಕಾಗಿಣಾ ನದಿ ದಡದಲ್ಲಿ ಕೊಳವೆ ಬಾವಿ ತೋಡಿಸಲಾಗಿದೆ. ಜನರು ಅಲ್ಲಿಂದಲೇ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

Advertisement

ಎರಡು ದಿನಗಳ ಹಿಂದಷ್ಟೇ ಬೆಣ್ಣೆ ತೋರಾ ಅಣೆಕಟ್ಟಿನಿಂದ ಬಿಟ್ಟ ನೀರು ನದಿಗೆ ಬಂದಿದೆ. ಅದು ತಿಳಿ ಹಳದಿ ಬಣ್ಣದಿಂದ ಕೂಡಿದ್ದು, ವಾಸನೆ ಬರುತ್ತಿದ್ದು, ಬಳಸಲು ಮಾತ್ರ ಉಪಯೋಗ ಮಾಡುವಂತಿವೆ. ಒಂದೊಮ್ಮೆ ಕುಡಿದರೆ ರೋಗಗಳು ಹರಡುವುದು ನಿಶ್ಚಿತ. ಜನತೆ ಯಾವಾಗ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಕಾಯ್ದು ಕುಳಿತಿದ್ದಾರೆ.

ಅಕ್ರಮ ಮರಳುಗಾರಿಕೆಯಿಂದ ಕಾಗಿಣಾ ಒಡಲು ಬರಿದಾಗಿದೆ. ಈ ಅಕ್ರಮ ತಡೆಗಟ್ಟಿದ್ದರೆ ಕೊಳಚೆ ನೀರು ಕುಡಿಯುತ್ತಿರಲಿಲ್ಲ. ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಜನರು ಕುಡಿಯುವ ನೀರಿಗಾಗಿ ಐದಾರು ಕಿ.ಮೀ ವರೆಗೆ ಅಲೆದಾಡುವಂತೆ ಆಗಿದೆ. ಹಗಲು-ರಾತ್ರಿ ನೀರು ತರುವುದೇ ಕಾಯಕವಾಗಿದೆ. ಗ್ರಾ.ಪಂ.ನವರು ನದಿಯಿಂದ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ನೀರು ಗಬ್ಬು ವಾಸನೆ ಹರಡುತ್ತಿದೆ. ಈ ನೀರು ಬಳಸಲು ಯೋಗ್ಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಪ್ರಿಯಾಂಕ್‌ ಖರ್ಗೆ ಅವರು ಚುನಾವಣೆಯಿಂದ ಸ್ವಲ್ಪ ಬಿಡುವು ಮಾಡಿಕೊಂಡು ಗ್ರಾಮದ ಕಡೆಗೆ ಗಮನಹರಿಸಲಿ.
•ಪ್ರಕಾಶ ಪಾಟೀಲ
ಕರವೇ ಘಟಕದ ಅಧ್ಯಕ್ಷರು

ಅಂತರ್ಜಲ ಮಟ್ಟ ಕುಸಿದಿದೆ. ಜಾಕವೆಲ್ನಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕಲುಷಿತ ನೀರನ್ನೇ ಕುಡಿಯಬೇಕಾಗಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಮುಂಬರುವ ದಿನಗಳಲ್ಲಾದರೂ ಮುಂಜಾಗೃತೆ ವಹಿಸಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು.
ಸಂತೋಷ ಕಲಶೆಟ್ಟಿ ,
ಗ್ರಾಮಸ್ಥ

ಮಲ್ಲಿನಾಥ ಜಿ.ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next