ಶಹಾಬಾದ: ಮಳೆ ಕೊರತೆ, ವಿಪರೀತ ಬಿಸಿಲು, ಬತ್ತಿದ ಹಳ್ಳ, ಕೆರೆಗಳು, ಬರಿದಾದ ಕೊಳವೆ ಬಾವಿ ನೀರಿಗಾಗಿ ನಿತ್ಯ ಪರದಾಡುವ ದುಸ್ಥಿತಿ ತಾಲೂಕಿನಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿರುವ ತೊನಸಿನಹಳ್ಳಿ (ಎಸ್) ಗ್ರಾಮದಲ್ಲಿದೆ.
ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಭುಗಿಲೆದ್ದಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಅಂತರ್ಜಲ ಕುಸಿದ ಪರಿಣಾಮ ಕೊಳವೆ ಬಾವಿಯಲ್ಲಿ ಒಂದು ಕೊಡ ನೀರು ಸಿಗಬೇಕು ಅಂದರೆ ಸುಮಾರು ನಾಲ್ಕು ತಾಸು ಕಾಯುವಂತಾಗಿದೆ. ಇಷ್ಟಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಸುಮಾರು ದಶಕಗಳಿಂದ ಪರದಾಟ: ತೊನಸಿನಹಳ್ಳಿ (ಎಸ್) ಗ್ರಾಪಂ ಕೇಂದ್ರ ಸ್ಥಾನ ಹೊಂದಿದೆ. ಆದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಬೇಸಿಗೆ ಬಂದರೆ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತದೆ. ಆದರೂ ಇಲ್ಲಿಯವರೆಗೂ ಯಾರೂ ಕಮ್ರಕೈಗೊಂಡಿಲ್ಲ. ಹೀಗಾಗಿ ಗ್ರಾಮಸ್ಥರು ನೀರಿಗಾಗಿ ಪ್ರತಿನಿತ್ಯ ಅಲೆಯುವುದು ಸಾಮನ್ಯವಾಗಿದೆ. ಗ್ರಾಮದಲ್ಲಿರುವ ಹಾರ ಬಾವಿ, ಊರಾನ ಬಾವಿ, ಮಠದ ಬಾವಿ ಸೇರಿದಂತೆ ಎಲ್ಲ ಬಾವಿಗಳಲ್ಲಿಯೂ ನೀರು ಬತ್ತಿ ಹೋಗಿದೆ. ಇರುವ ಒಂದೆರಡು ಕೊಳವೆ ಬಾವಿಗಳಲ್ಲಿ ನೀರು ಪಾತಾಳಕ್ಕೆ ಇಳಿದಿವೆ. ಇದರಿಂದ ಹನಿ ನೀರಿಗಾಗಿ ತೀವ್ರ ಸಂಕಷ್ಟ ಎದುರಾಗಿದೆ.
ಕೆಲಸ ಬಿಟ್ಟು ಅಲೆದಾಟ: ಇಲ್ಲಿನ ಗ್ರಾಮಸ್ಥರು ನಿತ್ಯ ದುಡಿಮೆ ಮಾಡಿಯೇ ಜೀವ ಸಾಗಿಸಬೇಕು. ಆದರೆ ಬೇಸಿಗೆ ಬಂದಾಗ ಕೆಲಸ ಬಿಟ್ಟು ನೀರು ತರಲು ಅಲೆದಾಡುವಂತೆ ಆಗಿದೆ. ಇದಕ್ಕೂ ಮುನ್ನ ಗ್ರಾ.ಪಂ.ದಿಂದ 12 ಕಿ.ಮೀ ದೂರವಿರುವ ತೆಗನೂರ ಗ್ರಾಮದ ಹಳ್ಳದಲ್ಲಿ ಕೊಳವೆ ಬಾವಿ ತೋಡಿಸಿ ಅಲ್ಲಿಂದ ಬಾವಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಅಲ್ಲಿಂದ ನಾವು ಕೊಡಗಳ ಮೂಲಕ ನೀರು ಪಡೆದುಕೊಳ್ಳುತ್ತಿದ್ದೆವು. ಆದರೆ ಅಂತರ್ಜಲ ಕಡಿಮೆಯಾಗಿದ್ದರಿಂದ ನೀರು ಪೂರೈಕೆ ಸರಿಯಾದ ಪ್ರಮಾಣದಲ್ಲಿ ಆಗದಿರುವುದರಿಂದ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ದನಕರುಗಳು ನೀರು ಮತ್ತು ಮೇವಿಗಾಗಿ ಅಲೆದಾಡುತ್ತಿವೆ. ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕುಡಿಯಲು ನೀರು ಸಿಗದ ಪರಿಣಾಮ ದನಕರುಗಳನ್ನು ಸಾಕುವುದಕ್ಕೆ ಆಗುತ್ತಿಲ್ಲ. ಆದ್ದರಿಂದ ಅವುಗಳು ಕಸಾಯಿ ಖಾನೆಗೆ ಹೋಗುವಂತಾಗಿದೆ ಎಂದು ನೊಂದ ರೈತ ವರ್ಗದವರು ಹೇಳುತ್ತಾರೆ.
ಈಡೇರುವುದೇ ಭರವಸೆ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಗೋಳಾ (ಕೆ) ಗ್ರಾಮದ ಕಾಗಿಣಾ ನದಿಯಿಂದ ತೊನಸನಹಳ್ಳಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಾಗಿ ಎಚ್ಕೆಆರ್‌ಡಿಬಿಯಿಂದ ಎರಡು ಕೋಟಿ ರೂ. ಅನುದಾನ ಮಂಜೂರಾತಿಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ. ಸದ್ಯದಲ್ಲೇ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತದೆ. ಗ್ರಾಮಸ್ಥರಲ್ಲಿ ಈ ಕುರಿತು ಯಾವುದೇ ಅನುಮಾನ ಬೇಡ ಎಂದು ಹೇಳಿದ್ದರು. ಅವರು ಭರವಸೆ ನೀಡಿ ಎರಡು ತಿಂಗಳಾದರೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಹಿಂದೆ ಭೀಮಾ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ ಎಂದು ಸುಳ್ಳು ಹೇಳುತ್ತ ಗ್ರಾಮಸ್ಥರಿಗೆ ಯಾಮಾರಿಸಿದ ಹಾಗೆ ಈ ಯೋಜನೆಗೂ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆಯೇ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ. ಕಾರಣ ಜನಪ್ರತಿನಿಧಿಗಳು ಹಲವು ದಶಕಗಳಿಂದ ಭರವಸೆ ನೀಡುತ್ತ ಬರುತ್ತಿದ್ದಾರೆಯೇ ಹೊರತು ಇಲ್ಲಿಯವರೆಗೆ ಶಾಶ್ವತ ವ್ಯವಸ್ಥೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ.
ಎಚ್ಕೆಆರ್‌ಡಿಬಿಯ 2 ಕೋಟಿ ರೂ. ಅನುದಾನದಲ್ಲಿ ಶಾಶ್ವತ ಕುಡಿಯುವ ನೀರಿನ ಕಾಮಗಾರಿ ಯಾವಾಗ ಪ್ರಾರಂಭವಾಗುತ್ತದೆ. ಯಾವಾಗ ನೀರು ನಮ್ಮೂರಿಗೆ ಬರುತ್ತದೆ ಎಂದು ಸಾರ್ವಜನಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಲೋಕಸಭೆ ಚುನಾವಣೆ ನಿಮಿತ್ತ ನೀತಿಸಂಹಿತೆ ಎದುರಾದ ಪರಿಣಾಮ ಕಾಮಗಾರಿ ಪ್ರಾರಂಭವಾಗಿಲ್ಲ. ಅಲ್ಲದೇ ಎಚ್ಕೆಆರ್‌ಡಿಬಿಯ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಗೆ ಇನ್ನೂ 50ಲಕ್ಷ ರೂ. ಕೊರತೆ ಆಗಿರುವುದರಿಂದ ಜಿಲ್ಲಾಧಿಕಾರಿಗಳ ಒಪ್ಪಿಗೆ ಪಡೆಯಲಾಗಿದೆ. ಇನ್ನೇನು ಎರಡು ತಿಂಗಳಿನ ಒಳಗಾಗಿ ಗೋಳಾ (ಕೆ) ಗ್ರಾಮದ ಕಾಗಿಣಾ ನದಿಯಿಂದ ತೊನಸನಹಳ್ಳಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ನೂರಕ್ಕೆ ನೂರರಷ್ಟು ಮಾಡೇ ತೀರುತ್ತೇನೆ.
•
ಬಸವರಾಜ ಮತ್ತಿಮಡು,
ಶಾಸಕರು, ಕಲಬುರಗಿ ಗ್ರಾಮೀಣ ಮತಕ್ಷೇತ್ರ
ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು, ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲೂ ಕೊಳವೆ ಬಾವಿಗಳನ್ನು ಹಾಕಿದರೂ ನೀರು ಸಿಗುತ್ತಿಲ್ಲ. ಗ್ರಾ.ಪಂ.ನಿಂದ ಕೊಳವೆ ಬಾವಿ ತೋಡಿಸಿ ಅಲ್ಲಿಂದ ನೀರು ಪೂರೈಕೆ ಮಾಡುತ್ತಿದ್ದೇವೆ. ಆದರೂ ನೀರಿನ ಸಮಸ್ಯೆಯಿದೆ. ಶಾಸಕರೊಡನೆ ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇವೆ. ಎರಡು ತಿಂಗಳಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
•
ವಿಜಯಕುಮಾರ ಮಾಣಿಕ್,
ಅಧ್ಯಕ್ಷ, ತೊನಸನಹಳ್ಳಿ (ಎಸ್)ಗ್ರಾಪಂ
ಗ್ರಾಪಂ ಕೇಂದ್ರ ಸ್ಥಾನ ಹೊಂದಿದ್ದರೂ ಗ್ರಾಮಕ್ಕೆ ಮೂಲ ಸೌಲಭ್ಯ ದೊರಕಿಲ್ಲ. ಅಂತರ್ಜಲ ಮಟ್ಟ ಕುಸಿದಿದೆ. ಬಾವಿಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕಲುಷಿತ ನೀರನ್ನೇ ಕುಡಿಯಬೇಕಾಗಿದೆ. ರಾತ್ರಿ-ಹಗಲು ಎನ್ನದೇ ಅಲ್ಪ ಸ್ವಲ್ಪ ನೀರಿಗಾಗಿ ಚರಿಗೆಯಿಂದ ತುಂಬುವಂಥ ಪರಿಸ್ಥಿತಿ ಬಂದೊದಗಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ. ಕೂಡಲೇ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
•
ಮಲ್ಲಿಕಾರ್ಜುನ ಗೊಳೇದ, ಗ್ರಾಮಸ್ಥ
ಮಲ್ಲಿನಾಥ ಜಿ.ಪಾಟೀಲ