Advertisement

ಮುಂಗಾರು ನಿರೀಕ್ಷೆಯಲ್ಲಿ ರೈತರು

02:59 PM Jun 17, 2019 | Naveen |

ಶಹಾಬಾದ: ತಾಲೂಕಿನಲ್ಲಿ ಹೊಲ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆಯಲ್ಲಿರುವ ರೈತರು ಮುಂಗಾರು ಮಳೆ ಆಗಮನಕ್ಕೆ ಕಾಯುತ್ತಿದ್ದಾರೆ.

Advertisement

ಜೂನ್‌ ತಿಂಗಳ ಮೊದಲ ವಾರದಲ್ಲಿ ಮಳೆಯಾಗುತ್ತದೆ ಎಂಬ ಆಶಾಭಾವನೆಯಿಂದ ಕಾದು ಕುಳಿತಿದ್ದ ರೈತರಿಗೆ ತೀವ್ರ ನಿರಾಸೆಯಾಗಿದೆ. ಸುಮಾರು 15 ದಿನಗಳಾದರೂ ಮಳೆಯಾಗುವ ಲಕ್ಷಣಗಳು ಕಾಣದಿರುವುದರಿಂದ ರೈತರಲ್ಲಿ ಆತಂಕದ ಮನೆ ಮಾಡಿದೆ.

ನಗರದ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಹೆಸರು, ತೊಗರಿ, ಜೋಳ ಬೆಳೆಯಲು ಯೋಗ್ಯವಾದ ಭೂಮಿ ಇದೆ. ಈ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಮಳೆ ಮುನಿಸಿಕೊಂಡಿದ್ದರಿಂದ ಹೆಸರು, ಉದ್ದು, ಎಳ್ಳು ಬೆಳೆಯುವ ಕನಸು ನುಚ್ಚುನೂರಾಗಿದೆ. ಈಗಲಾದರೂ ಕಣ್ಣು ತೆರೆದರೆ ರೈತರ ಮೊಗದಲ್ಲಿ ಒಂದಿಷ್ಟು ಸಂತೋಷ ಕಾಣಬಹುದು.

ಶಹಾಬಾದ ರೈತ ಸಂಪರ್ಕ ವಲಯದಲ್ಲಿ ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರಗಳ ದಾಸ್ತಾನು ಸಂಗ್ರಹ ಇದೆ. ಕೇವಲ ಭೂಮಿ ಹಸಿಯಾದರೆ ಸಾಕು ಬಿತ್ತನೆ ಮಾಡುತ್ತೇವೆ ಎಂದು ಹೇಳುತ್ತಾರೆ ಇಲ್ಲಿನ ರೈತ ಸದಾನಂದ ಕುಂಬಾರ.

ಬಿತ್ತನೆ ಬೀಜ ಲಭ್ಯ: ನಗರದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ತೊಗರಿ, ಉದ್ದು, ಹೆಸರು ಕಾಳುಗಳ ಹಾಗೂ ಪೋಷಕಾಂಶದ ರಸಗೊಬ್ಬರಗಳನ್ನು ವಿತರಿಸಲಾಗುತ್ತಿದೆ. ಶಹಾಬಾದ ಕೃಷಿ ವಲಯದ ತೊನಸನಹಳ್ಳಿ(ಎಸ್‌), ಮರತೂರ, ಭಂಕೂರ, ಮಾಲಗತ್ತಿ, ವ್ಯಾಪ್ತಿಯ ಸಣ್ಣ ಹಾಗೂ ಅತಿಸಣ್ಣ ರೈತರು ರಿಯಾಯಿತಿ ದರದಲ್ಲಿ ನೀಡಲಾಗುವ ಬೀಜ ಹಾಗೂ ರಸಗೊಬ್ಬರ ಪಡೆದುಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಕಾಶಿನಾಥ ದಂಡೋತಿ ಮತ್ತು ಸಹಾಯಕ ಕೃಷಿ ಅಧಿಕಾರಿ ಸೈಯ್ಯದ್‌ ಪಟೇಲ್ ತಿಳಿಸಿದ್ದಾರೆ.

Advertisement

ಹೋಬಳಿಯ ಭಂಕೂರ, ಶಂಕರವಾಡಿ, ಮಾಲಗತ್ತಿ, ಮುತ್ತಿಗಿ, ತರಿತಾಂಡಾ, ಅಲ್ದಿಹಾಳ, ಯರಗಲ್, ತೆಗೆನೂರ, ಮರತೂರ, ತೊನಸಿನಹಳ್ಳಿ, ಹೊನಗುಂಟಾ, ಕಡೆಹಳ್ಳಿ, ಇಂಗಳಗಿ, ಕಡಬೂರ, ಚಾಮನೂರ, ಕುನ್ನೂರ, ಗೋಳಾ ಅನೇಕ ಗ್ರಾಮಗಳಲ್ಲಿ ರೈತರು ಹೊಲ ಹಸನು ಮಾಡಿಕೊಂಡು ಬಿತ್ತನೆ ಸಿದ್ಧತೆಯಲ್ಲಿದ್ದಾರೆ. ರೈತರು ಮಳೆರಾಯನ ಆಗಮನಕ್ಕೆ ಕಾಯುತ್ತಿದ್ದಾರೆ. ಇನ್ನೂ ಕೆಲವು ಪ್ರದೇಶದಲ್ಲಿ ಹೊಲ ಹಸನು ಮಾಡುವಲ್ಲಿ ತೊಡಗಿದ್ದಾರೆ. ಮಳೆ ಆಗಮನ ವಿಳಂಬವಾದರೆ ಅಲ್ಪಾವಧಿ ಬೆಳೆಗಳ ಬೇಸಾಯಕ್ಕೆ ಸ್ವಲ್ಪ ಹಿನ್ನಡೆಯಾಗುತ್ತದೆ. ಈ ವಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ ರೈತರು.

ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು 18,070 ಹೆಕ್ಟೇರ್‌ ಪ್ರದೇಶ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ರೈತರಿಗೆ ಬಿತ್ತನೆಗೆ ಬೀಜಗಳನ್ನು ಹಾಗೂ ಪೋಷಕಾಂಶದ ರಸಗೊಬ್ಬರಗಳನ್ನು ವಿತರಿಸಲಾಗುತ್ತಿದೆ. ಕಳೆದ ವರ್ಷ ಹೋಬಳಿ ವಲಯದಲ್ಲಿ ನೆಟೆ ರೋಗ ಕಾಣಿಸಿಕೊಂಡಿತ್ತು. ಅದನ್ನು ತಡೆಗಟ್ಟಲು ಅಣುಜೀವಿ ಗೊಬ್ಬರವಾದ ಟ್ರೈಕೋಡರ್ಮವನ್ನು ರೈತರು ತಮ್ಮ ಭೂಮಿಯಲ್ಲಿ ಬಳಸಬೇಕು.
ಸೈಯದ್‌ ಪಟೇಲ್,
ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next