ಶಹಾಬಾದ: ಅಂಬೇಡ್ಕರ್ ಭವನಕ್ಕೆ ಮೀಸಲಾದ ಸ್ಥಳ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸುತ್ತಿರುವ ವ್ಯಕ್ತಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಶಾಸಕ ಬಸವರಾಜ ಮತ್ತಿಮಡು ನಗರಸಭೆ ಪೌರಾಯುಕ್ತರಿಗೆ ಆದೇಶಿಸಿದರು.
ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಕುಂದು ಕೊರತೆಗಳ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗಾಗಲೇ ಅಂಬೇಡ್ಕರ್ ಭವನದ ಸ್ಥಳ ಒತ್ತುವರಿ ಮಾಡಿ, ಕಟ್ಟಡ ನಿರ್ಮಾಣವಾಗುತ್ತಿದೆ. ಅದನ್ನು ತಡೆಹಿಡಿಯಬೇಕೆಂದು ದೂರು ಬಂದಿದ್ದರೂ, ಯಾಕೆ ಹಿಂದೇಟು ಹಾಕುತ್ತಿದ್ದೀರಿ.
ಗೋಡೆ ಕಟ್ಟಿ, ಪ್ಲಾಸ್ಟರ್ ಮಾಡುತ್ತಿದ್ದರೂ ಏನು ಮಾಡುತ್ತಿದ್ದಿರಿ ಎಂದು ತಹಶೀಲ್ದಾರ್ ಸುರೇಶ ವರ್ಮಾ, ಪೌರಾಯುಕ್ತ ವೆಂಟಕೇಶ ಅವರನ್ನು ಪ್ರಶ್ನಿಸಿದರು. ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೂ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಪೌರಾಯುಕ್ತರು ಹೇಳಿದರು.
ನೋಟಿಸ್ ನೀಡಿದರೂ ಕಟ್ಟಡ ನಿರ್ಮಾಣ ಮಾಡುತ್ತಿದ್ದರೆ ಆ ವ್ಯಕ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಸೂಚಿಸಿದರು. ಮಾರ್ವಾಡಿ ಸಮಾಜದ ವತಿಯಿಂದ ಅಧ್ಯಕ್ಷೆ ಜ್ಯೋತಿ ಶರ್ಮಾ ನೇತೃತ್ವದಲ್ಲಿ ಆಗಮಿಸಿದ ನಿಯೋಗವು ನಗರದ ಅಕ್ಷರಸ್ಥ ಮಹಿಳೆಯರಿಗೆ ಉದ್ಯೋಗ ನೀಡಲು ಸಣ್ಣ ಉದ್ಯೋಗ ಘಟಕ ಸ್ಥಾಪಿಸಬೇಕೆಂದು ಮನವಿ ಮಾಡಿದರು. ನಗರದ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಹೆರಿಗೆಗಾಗಿ ಸೂಕ್ತ ಸೌಲಭ್ಯ ಇಲ್ಲದ ಕಾರಣ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗುತ್ತಿದೆ. ಸ್ಥಳೀಯವಾಗಿ ಹೆರಿಗೆ ಮಾಡಿಸಲು ಸೂಕ್ತ ಸಿಬ್ಬಂದಿ, ಮೂಲ ಸೌಕರ್ಯ ಒದಗಿಸಬೇಕೆಂದು ಮನವಿ ಮಾಡಿದರು.
ನಗರದಲ್ಲಿ ಗೋವುಗಳ ಕಳ್ಳತನ ನಡೆಯುತ್ತಿದ್ದು, ಗೋವುಗಳಿಗಾಗಿ ಗೋಮಾಳ ಸ್ಥಾಪಿಸಬೇಕು. ಹರಿಯುವ ಅಜನಿ ಹಳ್ಳದ ಸ್ವಚ್ಛತೆಗೆ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಅವರಿಂದ ಅನುದಾನ ಬಿಡುಗಡೆಯಾಗಿತ್ತು. ಆದರೆ, ಸ್ವಚ್ಛತಾ ಕಾರ್ಯ ಕೈಗೊಳ್ಳದೆ, ಹಳ್ಳ ಹೊಲಸು ನಾರುತ್ತಿದೆ ಎಂದು ಅನೀಲ ಹೀಬಾರೆ ಶಾಸಕರ ಗಮನಕ್ಕೆ ತಂದರು.
ತಹಶೀಲ್ದಾರ್ ಸುರೇಶ ವರ್ಮಾ, ಪೌರಾಯುಕ್ತ ಕೆ. ವೆಂಕಟೇಶ, ಕ್ಷೇತ್ರ ಶಿಕ್ಷಣಾ ಧಿಕಾರಿ ಶಂಕ್ರಮ್ಮ ಡವಳಗಿ, ಲೋಕೋಪಯೋಗಿ ಇಲಾಖೆ ಜೆಇ ಶ್ರೀಪಾದ ಕುಲಕರ್ಣಿ, ಪಿಐ ಕೆ. ಅಮರೇಶ, ಬಿಜೆಪಿ ಅಧ್ಯಕ್ಷ ಸುಭಾಸ ಜಾಪೂರ, ಮುಖಂಡರಾದ ಅಣ್ಣಪ್ಪ ದಸ್ತಾಪುರ, ದುರ್ಗಪ್ಪ ಪವಾರ, ರವಿ ರಾಠೊಡ, ಅನೀಲ ಕುಮಾರ ಬೋರಗಾಂವಕರ್, ನಿಂಗಣ್ಣ ಹುಳಗೋಳ, ಬಸವರಾಜ ಬಿರಾದಾರ, ಕನಕಪ್ಪ ದಂಡಗುಲಕರ್, ಪಾರ್ವತಿ ಪವಾರ, ಶರಣು ವಸ್ತ್ರದ, ಚಂದ್ರಕಾಂತ ಗೊಬ್ಬುರಕರ್ ಇತರರು ಇದ್ದರು.