ಶಹಾಬಾದ: ಚಿತ್ತಾಪುರ ತಾಲೂಕಿನ ಭವಿಷ್ಯ ನಿರ್ಮಾಣ ಮಾಡುವ ಶಕ್ತಿ ಜನರಲ್ಲಿದೆ. ರಾಜಕಾರಣಿಗಳಿಂದ ಈಗ ಪ್ರಬುದ್ಧ ಸಮಾಜ ಕಟ್ಟುವುದಕ್ಕೆ ಸಾಧ್ಯವಿಲ್ಲ. ಪ್ರಬುದ್ಧ ಸಮಾಜ ಕಟ್ಟುವ ಕೆಲಸ ಸ್ವಾಮೀಜಿಗಳ ಮಾರ್ಗದರ್ಶನದಿಂದ ಸಾಧ್ಯ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ತಾಲೂಕಿನ ತೊನಸನಳ್ಳಿ (ಎಸ್) ಗ್ರಾಮದ ಅಲ್ಲಮ ಪ್ರಭು ಸಂಸ್ಥಾನ ಪೀಠದ ಮಲ್ಲಣ್ಣಪ್ಪ ಮಹಾಸ್ವಾಮಿಗಳ 58ನೇ ಜನ್ಮದಿನೋತ್ಸವ, 1 ಕೋಟಿ ರೂ. ವೆಚ್ಚದ ಯಾತ್ರಿ ನಿವಾಸ ಕಟ್ಟಡ ಲೋಕಾರ್ಪಣೆ, ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮನ್ನು ಆಯ್ಕೆ ಮಾಡಿ ಬೆಂಗಳೂರಿಗೆ ಕಳುಹಿಸಿರುವುದು ಸಮಾಜದ ಏಳ್ಗೆಗಾಗಿ. ಅದನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಇದ್ದುದ್ದನ್ನು ಇದ್ದಂಗೆ ಹೇಳುವ ನನಗೆ, ಬಣ್ಣ ಬಣ್ಣದ ಮಾತು ಆಡಲು ಬರುವುದಿಲ್ಲ. ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿದ್ದೇನೆ. ಜನರು ಪ್ರಬುದ್ಧತೆ ಹೊಂದಿದರೆ ಮಾತ್ರ ತಾಲೂಕಿನ ಏಳ್ಗೆಯಾಗಲು ಸಾಧ್ಯ ಎಂದು ಹೇಳಿದರು.
ಪ್ರವಾಸೋದ್ಯಮ ಖಾತೆ ಸಚಿವನಾಗಿದ್ದಾಗ ನಿಜಶರಣ ಅಂಬಿಗರ ಚೌಡಯ್ಯನವರ ಜನ್ಮಸ್ಥಳ ಚೌಡದಾನಪುರಕ್ಕೆ ಏಳು ಕೋಟಿ ರೂ. ನೀಡಿದ್ದೆ. ಮುಗುಳನಾಗಾವ ಸಿದ್ದಲಿಂಗೇಶ್ವರ ಮಠ, ಜೇಮಸಿಂಗ್ ಮಹಾರಾಜ ಮಠಕ್ಕೆ ಒಂದು ಕೋಟಿ ರೂ. ನೀಡಲಾಗಿದ್ದು, ನಾಲವಾರ ಮಠಕ್ಕೆ ಅನುದಾನ ನೀಡಲಾಗಿದೆ. ಅಲ್ಲದೇ, ಕಲಬುರಗಿ ಖ್ವಾಜಾ ಬಂದೆ ನವಾಜ ದರ್ಗಾಕ್ಕೆ ಒಂದು ಕೋಟಿ ರೂ. ನೀಡಲಾಗಿದೆ. ಕೇವಲ ಜನರ ಆಶೀರ್ವಾದದಿಂದ ಚಿತ್ತಾಪುರ ಪ್ರಗತಿಗೆ 2,700 ಕೋಟಿ ರೂ. ಅನುದಾನ ತರಲು ಸಾಧ್ಯವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, ಚಿತ್ತಾಪುರ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಹಣ ತಂದಿರುವ ಕೀರ್ತಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ. ತೊನಸನಳ್ಳಿ ಮಠಕ್ಕೆ ಒಂದು ಕೋಟಿ ರೂ. ಅನುದಾನ ತಂದು ಕಟ್ಟಡ ನಿರ್ಮಿಸಿದ್ದು, ನುಡಿದಂತೆ ನಡೆದ ಶಾಸಕರಾಗಿದ್ದಾರೆ ಎಂದು ಹೇಳಿದರು.
ಮುಗುಳನಾಗಾವದ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಮಲ್ಲಣ್ಣಪ್ಪ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬೆಳ್ಳಿ ಕಿರೀಟ ತೊಡಿಸಿ ಸತ್ಕರಿಸಲಾಯಿತು. ಯರಗೋಳ ಸಂಗಮೇಶ ದೇವರು, ಚಟ್ನಳ್ಳಿ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ಆರ್., ಜಿ.ಪಂ ಪ್ರತಿ ಪಕ್ಷದ ನಾಯಕ ಶಿವಾನಂದ ಪಾಟೀಲ, ಸದಸ್ಯ ಶಿವರುದ್ರ ಭೇಣಿ, ತಾ.ಪಂ ಅಧ್ಯಕ್ಷ ಜಗನ್ನಾಥರೆಡ್ಡಿ ರಾಮತೀರ್ಥ, ಶಹಾಬಾದ ಬಿಸಿಸಿ ಅಧ್ಯಕ್ಷ ಡಾ| ಎಂ.ಎ. ರಶೀದ್, ವಾಡಿ ಬಿಸಿಸಿ ಅಧ್ಯಕ್ಷ ಮಹಿಮೂದ್ ಸಾಹೇಬ, ಚಿತ್ತಾಪುರ ಬಿಸಿಸಿ ಅಧ್ಯಕ್ಷ ಭೀಮಣ್ಣ ಸಾಲಿ, ಜಿ.ಪಂ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಬಾಗೋಡಿ, ನಾಗರೆಡ್ಡಿ ಕರದಾಳ, ಅಣವೀರ ಇಂಗಿನಶೆಟ್ಟಿ, ಗಿರೀಶ ಕಂಬಾನೂರ, ಮಹಾಂತೇಶ ಪೂಜಾರಿ, ಶರಣಬಸಪ್ಪ ಧನ್ನಾ, ತಾ.ಪಂ ಮಾಜಿ ಸದಸ್ಯ ನಿಂಗಣ್ಣ ಹುಳಗೋಳ, ಗ್ರಾ.ಪಂ ಅಧ್ಯಕ್ಷ ವಿಜಯಾನಂದ ಮಾಣಿಕ ಮತ್ತಿತರರು ಪಾಲ್ಗೊಂಡಿದ್ದರು. ಬಸವರಾಜ ಹೇರೂರ ನಿರೂಪಿಸಿದರು.