Advertisement

ಕಂಟೋನ್ಮೆಂಟ್‌ಗೆ ಶಾಫ್ಟ್ ಶಾಕ್‌

09:58 AM Oct 13, 2017 | Team Udayavani |

ಬೆಂಗಳೂರು: ವಿವಾದಿತ ಕಂಟೋನ್ಮೆಂಟ್‌ ಬಳಿ ನಿಲ್ದಾಣ ನಿರ್ಮಾಣಕ್ಕೆ ಮತ್ತೂಂದು ತಾಂತ್ರಿಕ ಸಮಸ್ಯೆ ಎದುರಾಗಿದೆ. ಸಂಸದರು ಮತ್ತು ಹೋರಾಟಗಾರರ ಒತ್ತಾಯಕ್ಕೆ ಮಣಿದ ಬಿಎಂಆರ್‌ಸಿಎಲ್‌ ಗುರುವಾರ ಬಹಿರಂಗ ಪಡಿಸಿದ “ನಮ್ಮ ಮೆಟ್ರೋ’ ಎರಡನೇ ಹಂತದ “ಸಮಗ್ರ ಯೋಜನಾ ವರದಿ’ಯಲ್ಲಿ ಈ ಅಂಶದ ಉಲ್ಲೇಖವಿದೆ.

Advertisement

ಉದ್ದೇಶಿತ ಸಮಗ್ರ ಯೋಜನಾ ವರದಿ (ಡಿಪಿಆರ್‌) ಪ್ರಕಾರ ಕಂಟೋನ್ಮೆಂಟ್‌ನಿಂದ ಪಾಟರಿ ಟೌನ್‌ ನಡುವಿನ ಉದ್ದ 1,618 ಮೀಟರ್‌ ಇದೆ. ಆದರೆ, ಮೆಟ್ರೋ ನಿಯಮಗಳ ಪ್ರಕಾರ ಸುರಂಗ ಮಾರ್ಗದ ಉದ್ದ 1,500 ಮೀಟರ್‌ಗಿಂತ ಹೆಚ್ಚಿದ್ದರೆ, ಸುರಕ್ಷತೆ ದೃಷ್ಟಿಯಿಂದ ಮಾರ್ಗದ ಮಧ್ಯೆ ದೊಡ್ಡ ಬಾವಿಯ ಆಕಾರದ ಗುಂಡಿ (ಶಾಫ್ಟ್) ತೆರೆಯಬೇಕಾಗುತ್ತದೆ ಎಂದು ಹೇಳಲಾಗಿದೆ. 

ಈ ಹಿಂದೆ ಮಂತ್ರಿಸ್ಕ್ವೇರ್‌ನಿಂದ ಮೆಜೆಸ್ಟಿಕ್‌ ನಡುವೆ “ಕಾವೇರಿ’ ಟಿಬಿಎಂ ಕೆಟ್ಟುನಿಂತಿದ್ದಾಗ, ಅದರ ಪಕ್ಕದಲ್ಲೊಂದು ತಾತ್ಕಾಲಿಕವಾದ “ಶಾಫ್ಟ್’ ಕೊರೆದು, ಟಿಬಿಎಂ ಹೊರತೆಗೆಯಲಾಗಿತ್ತು. ಇದೇ ಮಾದರಿಯಲ್ಲಿ ಕಂಟೋನ್ಮೆಂಟ್‌-ಪಾಟರಿ ಟೌನ್‌ ನಡುವೆ ಶಾಶ್ವತವಾದ “ಶಾಫ್ಟ್’ ನಿರ್ಮಿಸಬೇಕಾಗುತ್ತದೆ. ಸುಮಾರು 30ರಿಂದ 40 ಮೀಟರ್‌ ಆಳದವರೆಗೆ ಇದನ್ನು ಕೊರೆಯಬೇಕಾಗುತ್ತದೆ.

ಇದರ ಸುತ್ತಳತೆ ಸುಮಾರು 1,200 ಚದರ ಮೀಟರ್‌ ಇರಬೇಕು. ಜತೆಗೆ ಪೂರಕ ಸೌಕರ್ಯಗಳ ನಿರ್ಮಾಣವೂ ಸೇರಿದಂತೆ ಸುಮಾರು ನಾಲ್ಕು ಸಾವಿರ ಚದರ ಮೀಟರ್‌ ಜಾಗ ಈ ಶಾಫ್ಟ್ಗೆ ಬೇಕಾಗುತ್ತದೆ. ಇದು ಈಗ ಮತ್ತೂಂದು ತಲೆನೋವಾಗಿ ಪರಿಣಮಿಸಲಿದೆ.

ಇದನ್ನು ಕಂಟೋನ್ಮೆಂಟ್‌ ನಿಲ್ದಾಣ ಸ್ಥಳಾಂತರ ವಿರೋಧಿಸುತ್ತಿರುವ ಹೋರಾಟಗಾರರಾಗಲಿ ಹಾಗೂ ಸ್ಥಳಾಂತರ ಸಮರ್ಥಿಸಿಕೊಳ್ಳುತ್ತಿರುವ ಬಿಎಂಆರ್‌ ಸಿಯಾಗಲಿ ಇದರ ಬಗ್ಗೆ ಬೆಳಕುಚೆಲ್ಲಿಲ್ಲ. ಆದರೆ, ಗೊಟ್ಟಿಗೆರೆ-ಐಐಎಂಬಿ-ನಾಗವಾರ ಕಾರಿಡಾರ್‌ಗೆ ಸಂಬಂಧಿಸಿದ ಯೋಜನಾ ವರದಿಯಲ್ಲಿ ಈ ಶಾಫ್ಟ್ ಬಗ್ಗೆ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ.

Advertisement

4 ಸಾವಿರ ಚದರ ಮೀಟರ್‌ ಭೂಸ್ವಾಧೀನ?: ಮೂಲಗಳ ಪ್ರಕಾರ ಈ “ಶಾಫ್ಟ್’ ನಂದಿದುರ್ಗ ರಸ್ತೆ-ಬೆನ್ಸನ್‌ ಟೌನ್‌ ನಡುವೆ ಬರಲಿದೆ. ಇದು ಜನವಸತಿ ಪ್ರದೇಶವಾಗಿದ್ದು, ಯಾವುದೇ ಸರ್ಕಾರಿ ಜಮೀನು ಇಲ್ಲ. ಹಾಗಾಗಿ, 4 ಸಾವಿರ ಚದರ ಮೀಟರ್‌ನಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅನಿವಾರ್ಯ ಆಗಲಿದೆ. ಜತೆಗೆ ಎರಡೂ ನಿಲ್ದಾಣಗಳ ತುದಿಯಲ್ಲಿ ಟನಲ್‌ ವೆಂಟಿಲೇಷನ್‌ ಸಿಸ್ಟ್‌ಂ ಅಳವಡಿಸಬೇಕಾಗುತ್ತದೆ. ಇದಕ್ಕಾಗಿ ಹೆಚ್ಚುವರಿಯಾಗಿ ತಲಾ 600 ಚದರ ಮೀಟರ್‌ ಜಾಗ ಬೇಕಾಗುತ್ತದೆ. ಇದಕ್ಕಾಗಿ ಅಂದಾಜು 50 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

“ದುಬಾರಿಯಾದರೂ ಸುರಂಗ ಮಾರ್ಗದ ಉದ್ದೇಶ ಸಾಧ್ಯವಾದಷ್ಟು ಭೂಸ್ವಾಧೀನ ಕಡಿಮೆ ಮಾಡಬೇಕು ಎಂಬುದಾಗಿರುತ್ತದೆ. ಆದರೆ, ಇಷ್ಟೊಂದು ಭೂಸ್ವಾಧೀನ  ಪಡಿಸಿಕೊಂಡು ನಿರ್ಮಿಸುವುದಾದರೆ, ಸುರಂಗ ಮಾರ್ಗ ಯಾಕೆ? ಎತ್ತರಿಸಿದ ಮಾರ್ಗದಲ್ಲೇ ಹೋಗಬಹುದು ಅಲ್ಲವೇ?’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ಇನ್ನು ಗೊಟ್ಟಿಗೆರೆ-ನಾಗವಾರ ಮಾರ್ಗದ ನಡುವೆ 6 ಎತ್ತರಿಸಿದ ಮತ್ತು 12 ಸುರಂಗ ಸೇರಿದಂತೆ ಒಟ್ಟಾರೆ 18 ನಿಲ್ದಾಣಗಳು ಬರುತ್ತವೆ. ಈ ಪೈಕಿ ಅತಿ ಉದ್ದದ ಸುರಂಗ ಮಾರ್ಗ ಕಂಟೋನ್ಮೆಂಟ್‌-ಪಾಟರಿ ಟೌನ್‌. ಇದನ್ನು ಹೊರತುಪಡಿಸಿದರೆ, ಪಾಟರಿ ಟೌನ್‌- ಟ್ಯಾನರಿ ರಸ್ತೆ (1,159 ಮೀ.), ವೆಲ್ಲಾರ್‌- ಎಂ.ಜಿ. ರಸ್ತೆ (1,136 ಮೀ.) ಆಗಿದೆ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ. 

ಸ್ವಾಗತಾರ್ಹ ಹೆಜ್ಜೆ : ಇನ್ನು ಸರ್ಕಾರದಿಂದ ಅನುಮೋದನೆಗೊಂಡ ಎರಡನೇ ಹಂತದ ಡಿಪಿಆರ್‌ನಲ್ಲಿ ಕಂಟೋನ್ಮೆಂಟ್‌-ಪಾಟರಿ ಟೌನ್‌ ನಡುವೆ ಹಾದುಹೋಗುವುದಾಗಿ ಬಿಎಂಆರ್‌ಸಿ ಹೇಳಿಕೊಂಡಿದೆ. ತದನಂತರದಲ್ಲಿ ಆ ಮಾರ್ಗದಲ್ಲಿನ ತಾಂತ್ರಿಕ, ಸುರಕ್ಷತಾ ಕಾರಣಗಳನ್ನು ನೀಡಿ ಸ್ಥಳಾಂತರಕ್ಕೆ ಮುಂದಾಗಿದೆ. ಈ ಸಂಬಂಧ ಸರ್ಕಾರದ ಮನವೊಲಿಕೆಗೆ ಮುಂದಾಗಿದೆ.

ಈ ಮಧ್ಯೆ ನಿರಂತರ ಹೋರಾಟಕ್ಕೆ ಸ್ಪಂದಿಸಿ ಬಿಎಂಆರ್‌ ಸಿಯು ಡಿಪಿಆರ್‌ ಅನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿರುವುದನ್ನು ಹೋರಾಟಗಾರರು ಸ್ವಾಗತಿಸಿದ್ದಾರೆ. ಪ್ರಜಾ ರಾಗ್‌ನ ಸದಸ್ಯ ಸಂಜೀವ ದ್ಯಾಮಣ್ಣವರ ಮಾತನಾಡಿ, “ಇದೊಂದು ಸ್ವಾಗತಾರ್ಹ ಬೆಳವಣಿಗೆ. “ನಮ್ಮ ಮೆಟ್ರೋ’ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲವೂ ಸಾರ್ವಜನಿಕರದ್ದು ಎಂಬುದನ್ನು ಬಿಎಂಆರ್‌ಸಿ ಒಪ್ಪಿಕೊಂಡಿದೆ. ಡಿಪಿಆರ್‌ ಅನ್ನು ಜನ ಅರ್ಥಮಾಡಿಕೊಳ್ಳಲು ಅನುಕೂಲ ಆಗಲಿದೆ. ನಿಗಮದ ಪಾರದರ್ಶಕ ನಡೆ ಇದೇ ರೀತಿ ಮುಂದುವರಿಯಲಿದೆ ಎಂದು ನಿರೀಕ್ಷಿಸುತ್ತೇವೆ’ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next