Advertisement

INDWvsSAW; ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಾಗಿಸಿದ ಭಾರತೀಯ ಜೋಡಿ

05:10 PM Jun 28, 2024 | Team Udayavani |

ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ದದ ಏಕದಿನ ಸರಣಿಯನ್ನು ವೈಟ್ ವಾಶ್ ಮಾಡಿದ ಭಾರತ ವನಿತಾ ತಂಡವು ಏಕೈಕ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ ಅವರು ಹರಿಣಗಳನ್ನು ಹೈರಾಣಾಗಿಸಿದರು.

Advertisement

ಶಫಾಲಿ ವರ್ಮಾ ಚೊಚ್ಚಲ ದ್ವಿಶತಕ ಮತ್ತು ಸ್ಮೃತಿ ಮಂಧನಾ ಎರಡನೇ ಟೆಸ್ಟ್ ಶತಕದ ಸಹಾಯದಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಸ್ಮೃತಿ ಮತ್ತು ಶಫಾಲಿ ಅದ್ಭುತ ಆರಂಭ ಒದಗಿಸಿದರು. ದ.ಆಫ್ರಿಕಾ ಬೌಲರ್ ಗಳನ್ನು ಬೆಂಡೆತ್ತಿದ ಇವರಿಬ್ಬರು ಮೊದಲ ವಿಕೆಟ್ ಗೆ ದಾಖಲೆಯ 292 ರನ್ ಜೊತೆಯಾಟವಾಡಿದರು. ಮೊದಲ ಬಾರಿಗೆ ನೂರರ ಗಡಿ ದಾಟಿದ ಶಫಾಲಿ ವರ್ಮಾ ಅದನ್ನು ದ್ವಿಶತಕವನ್ನಾಗಿಸಿದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಶಫಾಲಿ 197 ಎಸೆತಗಳಲ್ಲಿ 205 ರನ್ ಮಾಡಿದರು. ಈ ಇನ್ನಿಂಗ್ಸ್ ನಲ್ಲಿ ಅವರು 23 ಬೌಂಡರಿ ಮತ್ತು 8 ಸಿಕ್ಸರ್ ಚಚ್ಚಿದರು.

ಭರ್ಜರಿ ಫಾರ್ಮ್ ನಲ್ಲಿರುವ ಸ್ಮೃತಿ ಮಂಧನಾ ಅವರು ತಮ್ಮ ಶತಕಗಳ ಓಟವನ್ನು ಮುಂದುರಿಸಿದರು. ಏಕದಿನ ಸರಣಿಯಲ್ಲಿ ಎರಡು ಶತಕ ಬಾರಿಸಿದ್ದ ಉಪ ನಾಯಕಿ ಟೆಸ್ಟ್ ನಲ್ಲೂ ಫಾರ್ಮ್ ಮುಂದುವರಿಸಿದರು. 161 ಎಸೆತ ಎದುರಿಸಿದ ಮಂಧನಾ 149 ರನ್ ಗಳಿಸಿದರು.

Advertisement

ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಜೆಮಿಮಾ ರೋಡ್ರಿಗಸ್ ಅವರು ಅರ್ಧಶತಕದ ಕೊಡುಗೆ ನೀಡಿದರು. 94 ಎಸೆತಗಳಿಂದ ಜೆಮಿಮಾ 55 ರನ್ ಮಾಡಿದರು.

ಸ್ಮೃತಿ-ಶಫಾಲಿ ದಾಖಲೆ

ಮೊದಲು ವಿಕೆಟ್ 292 ರನ್ ಜೊತೆಯಾಟವಾಡಿದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಹೊಸ ವಿಶ್ವದಾಖಲೆ ಬರೆದರು. 2004 ರಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನದ ಸಜ್ಜಿದಾ ಶಾ ಮತ್ತು ಕಿರಣ್ ಬಲೂಚ್ ಅವರ 241 ರನ್ ಆರಂಭಿಕ ವಿಕೆಟ್ ಜೊತೆಯಾಟದ ದಾಖಲೆಯನ್ನು ಶಫಾಲಿ ಮತ್ತು ಸ್ಮೃತಿ ಹಿಂದಿಕ್ಕಿದರು.

ಅಷ್ಟೇ ಅಲ್ಲದೆ, ಈ 282 ರನ್ ಜೊತೆಯಾಟವು ಮಹಿಳಾ ಟೆಸ್ಟ್‌ ನಲ್ಲಿ ಯಾವುದೇ ವಿಕೆಟ್‌ಗೆ ಎರಡನೇ ಗರಿಷ್ಠ ಜೊತೆಯಾಟವಾಗಿದೆ. 1987 ರಲ್ಲಿ ವೆದರ್‌ಬಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ವಿಕೆಟ್‌ಗೆ ಆಸ್ಟ್ರೇಲಿಯಾದ ಜೋಡಿ ರೀಲರ್ ಮತ್ತು ಆನೆಟ್ಸ್ 309 ರನ್‌ ಜೊತೆಯಾಟವಾಡಿದ್ದು ದಾಖಲೆಯಾಗಿದೆ.

ಈ ಹಿಂದಿನ ಭಾರತೀಯ ದಾಖಲೆಯನ್ನೂ ಸ್ಮೃತಿ- ಶಫಾಲಿ ಮುರಿದರು. 2014ರಲ್ಲಿ ಮೈಸೂರಿನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಪೂನಮ್ ರಾವತ್ ಮತ್ತು ತಿರುಷ್ಕಾಮಿನಿ ಅವರ 275 ರನ್ ದಾಖಲೆಯನ್ನು ಅಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next