Advertisement

ಕಲಾವಿದರಿಗೆ ಶಿಸ್ತು, ಸಂಯಮ, ಬದ್ಧತೆ ಮುಖ್ಯ : ಮಾಣಿಲ ಶ್ರೀ

03:40 AM Dec 04, 2018 | Team Udayavani |

ನೆಲ್ಯಾಡಿ: ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾಕೇಂದ್ರದ ದ್ವಿತೀಯ ವಾರ್ಷಿಕೋತ್ಸವ, ಕಲಾಕೇಂದ್ರದ ಮಕ್ಕಳಿಂದ ‘ಮೇದಿನಿ ನಿರ್ಮಾಣ-ಮಹಿಷ ವಧೆ’ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಸುಂದೋಪಸುಂದ ಕಾಳಗ’ ಯಕ್ಷಗಾನ ಬಯಲಾಟ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನ ದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಗಾನದಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ಇದ್ದು, ಕಲಾವಿದನಿಗೆ ಶಿಸ್ತು, ಸಂಯಮ, ಬದ್ಧತೆ ಮುಖ್ಯ. ಕಟೀಲು ಮೇಳದ ಕಲಾವಿದ ಪ್ರಶಾಂತ್‌ ಶೆಟ್ಟಿ ಅವರ ಸಾಧನೆಯಿಂದ ನೆಲ್ಯಾಡಿಯಲ್ಲಿ ಶಬರೀಶ ಕಲಾಕೇಂದ್ರ ಹುಟ್ಟಿಕೊಂಡು ನೂರಾರು ಮಕ್ಕಳಲ್ಲಿ ಯಕ್ಷಗಾನದ ಕಲೆ ಬಿತ್ತುವ ಕೆಲಸ ಆಗುತ್ತಿದೆ. ಯಕ್ಷಗಾನ ಕಲೆ ಮೇಲೆ ಮಕ್ಕಳಿಗೆ ಅಭಿರುಚಿ ಇರಬೇಕು. ಪುರಾಣ ಪ್ರಸಂಗಗಳ ಮೂಲಕ ಮಕ್ಕಳಲ್ಲಿ ಪುರಾಣದ ಕಥೆಗಳ ಬಗ್ಗೆ ತಿಳಿಸುವ ಕೆಲಸ ಆಗಬೇಕು. ಇದರಿಂದ ಮಕ್ಕಳು ಸತ್ಪ್ರಜೆಗಳಾಗಲು ಸಾಧ್ಯವಿದೆ ಎಂದರು.

Advertisement

ಮುಖ್ಯ ಅತಿಥಿಯಾಗಿದ್ದ ಯಕ್ಷಗಾನ ಕಲಾವಿದ, ಸಾಹಿತಿ ಗೋಪಾಲಕೃಷ್ಣ ಶಗ್ರಿತ್ತಾಯ ಮಾತನಾಡಿ, ಶಬರೀಶ ಕಲಾ ಕೇಂದ್ರದ ವತಿಯಿಂದ ಹಿಮ್ಮೇಳ ಸಹಿತ ಮಕ್ಕಳ ಮೇಳ ಆರಂಭಿಸಬೇಕು. ಈ ನಿಟ್ಟಿನಲ್ಲಿ ಪ್ರಶಾಂತ್‌ ಶೆಟ್ಟಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣರು ದೀಪ ಪ್ರಜ್ವಲನೆ ಮಾಡಿ, ತಾವು ಕಲಿತ ವಿದ್ಯೆಯನ್ನು ಮತ್ತೂಬ್ಬರಿಗೆ ಧಾರೆ ಎರೆದಲ್ಲಿ ಮಾತ್ರ ಅದು ಸಾರ್ಥಕವಾಗಲಿದೆ. ನೆಲ್ಯಾಡಿ ಪ್ರದೇಶದ ಯಕ್ಷಗಾನಾಸಕ್ತ ವಿದ್ಯಾರ್ಥಿಗಳಿಗೆ ಕಲೆಯನ್ನು ಉಪದೇಶಿಸುವ ಮೂಲಕ ಪ್ರಶಾಂತ್‌ ಶೆಟ್ಟಿಯವರು ಯಕ್ಷಗಾನ ಕಲೆ ಉಳಿಸಲು ಕೊಡುಗೆ ನೀಡುತ್ತಿದ್ದಾರೆ. ಮಕ್ಕಳ ಮೂಲಕ ಪೌರಾಣಿಕ ಯಕ್ಷಗಾನ ಆಡಿ ತೋರಿಸುವುದರಿಂದ ಅವರಲ್ಲಿ ಜ್ಞಾನವೂ ಬೆಳೆಯಲಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಜಮಾ ಉಗ್ರಾಣ ಮುಖ್ಯಸ್ಥ ಭುಜಬಲಿ ಅಧ್ಯಕ್ಷತೆ ವಹಿಸಿ, ಟಿ.ವಿ., ಮೊಬೈಲ್‌ ಯುಗದಲ್ಲಿರುವ ಇಂದಿನ ಮಕ್ಕಳಿಗೆ ಯಕ್ಷಗಾನ ಅಭ್ಯಾಸ ಮಾಡಿಸುವುದು ಬಹಳ ಕಷ್ಟದ ಕೆಲಸ. ಯಕ್ಷಗಾನ ಸಂಘಟಕ, ಬೆಂಗಳೂರಿನ ಉದ್ಯಮಿ ಆರ್‌.ಕೆ. ಭಟ್‌, ಕೊಣಾಲು ಸರಕಾರಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಜಯಂತಿ ಮಾತನಾಡಿದರು.

ಸಮ್ಮಾನ
ಹಿರಿಯ ಭಾಗವತ, ಯಕ್ಷಗಾನ ಪ್ರಸಂಗಕರ್ತ ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಮತ್ತು ಶೋಭಾ ದಂಪತಿಯನ್ನು ಸಮ್ಮಾನಿಸಲಾಯಿತು. ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಅಂಚೆ ಇಲಾಖೆ ನಿವೃತ್ತ ನೌಕರ ಪದ್ಮಯ್ಯ ಗೌಡ ಹಾಗೂ ಅಂಗವಿಕಲ ಬಾಬು ಗೌಡ ಅವರನ್ನು ಶಾಲು, ಸ್ಮರಣಿಕೆ, ಹಾರಾರ್ಪಣೆ ಮಾಡಿ ಗೌರವಿಸಲಾಯಿತು.

Advertisement

ಶ್ರೀ ಕ್ಷೇತ್ರ ಕಾರಿಂಜದ ಬಾಲಕೃಷ್ಣ ಆಚಾರ್ಯ ತಂತ್ರಿಗಳು, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ಶ್ರೀ ಶಬರೀಶ ಕಲಾಕೇಂದ್ರದ ಪೋಷಕರ ಪ್ರತಿನಿಧಿ ಹರಿಪ್ರಸಾದ್‌ ಕೆ., ಮಂಗಳೂರು ಅಡ್ಡೂರಿನ ಶಿಲ್ಪಿ ಸುರೇಶ್‌ ಆಚಾರ್ಯ ಉಪಸ್ಥಿತರಿದ್ದರು. ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ ಸ್ವಾಗತಿಸಿದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಧೀರ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಯಕ್ಷಗಾನ-ಬಯಲಾಟ
ಅಪರಾಹ್ನ 3 ಗಂಟೆಗೆ ಅನಂತ ಪದ್ಮನಾಭ ನೂಜಿನ್ನಾಯ ಮತ್ತು ಸುರೇಶ್‌ ಮುಚ್ಚಿಂತಾಯ ಅವರು ಮಕ್ಕಳ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕಟೀಲು ಮೇಳದ ಕಲಾವಿದ ಪ್ರಶಾಂತ್‌ ಶೆಟ್ಟಿ ಅವರ ನಿರ್ದೇಶನದಲ್ಲಿ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ‘ಮೇದಿನಿ ನಿರ್ಮಾಣ-ಮಹಿಷ ವಧೆ’ಯಕ್ಷಗಾನ ಬಯಲಾಟ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿಯವರ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಸುಂದೋಪಸುಂದ ಕಾಳಗ’ ಯಕ್ಷಗಾನ ಬಯಲಾಟ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next