Advertisement

ದರ್ಶನ ಸುಗಮ: ಮಂಡಲ ಪೂಜೆ, ಸಂಕ್ರಾಂತಿ ಪ್ರಯುಕ್ತ ತೆರೆದ ದೇಗುಲ

06:36 AM Nov 17, 2018 | |

ಶಬರಿಮಲೆ/ಪಂಪಾ: ಮಂಡಲ ಪೂಜೆ- ಮಕರ ವಿಳಕ್ಕು ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲವನ್ನು ಶುಕ್ರವಾರ ತೆರೆಯ ಲಾಗಿದ್ದು, ವಿವಾದದ ನಡುವೆಯೂ ಈ ಬಾರಿಯ ಯಾತ್ರೆ ನಿರ್ವಿಘ್ನವಾಗಿ ಸಾಗುವ ಲಕ್ಷಣ ಗೋಚರಿಸಿದೆ. ಏಕೆಂದರೆ, ಒಂದೆಡೆ ಎಲ್ಲ ವಯೋ ಮಿತಿಯ ಮಹಿಳೆಯರು ದೇಗುಲ ಪ್ರವೇಶ ಮಾಡಬಹುದು ಎಂಬ ಸೆ.28ರ ತೀರ್ಪು ಜಾರಿಗೆ ಸಮಯಾವಕಾಶ ಕೋರಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸುಪ್ರೀಂ ಕೋರ್ಟ್‌ಗೆ ಶನಿವಾರ ಅಥವಾ ಸೋಮವಾರ ಮನವಿ ಸಲ್ಲಿಸಲು ಮುಂದಾಗಿದೆ. ಇನ್ನೊಂದೆಡೆ ದೇಗುಲ ಪ್ರವೇಶಿಸಿಯೇ ಸಿದ್ಧ ಎಂದು ಹಠ ತೊಟ್ಟು ಕೊಚ್ಚಿ ವಿಮಾನ ನಿಲ್ದಾಣದಲ್ಲಿ 10 ಗಂಟೆಗಳಿಗೂ ಹೆಚ್ಚು ಕಾಲ ಕಾದಿದ್ದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಪೊಲೀಸರ ಸೂಚನೆ ಮೇರೆಗೆ ಪುಣೆಗೆ ವಾಪಸಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಮಹಿಳೆಯರ ಪ್ರವೇಶವಿಲ್ಲದೆಯೇ ಯಾತ್ರೆ ಪೂರ್ಣಗೊಳ್ಳುವ ಸುಳಿವು ಸಿಕ್ಕಿದಂತಾಗಿದೆ.

Advertisement

ಬದಲಾಯಿತು ನಿಲುವು
ಸೆ.28ರ ತೀರ್ಪಿಗೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದ್ದ ಕೇರಳ ಸರಕಾರ ಭಕ್ತರ ಒತ್ತಡಕ್ಕೆ ಬಾಗಿದೆ. ತೀರ್ಪಿನ ಅನುಷ್ಠಾನಕ್ಕೆ ಹೆಲಿಕಾಪ್ಟರ್‌ ಬಳಕೆ ಮತ್ತು ಇತರ ದಾರಿ ಕಂಡು ಕೊಳ್ಳಲು ಮುಂದಾಗಿದ್ದ ವಿಜಯನ್‌ ನೇತೃತ್ವದ ಎಲ್‌ಡಿ ಎಫ್ ಸರಕಾರ ಗುರುವಾರವೇ ಟಿಡಿಬಿಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುವಂತೆ ಸೂಚನೆ ನೀಡಿತ್ತು. ಅದರಂತೆ ತಿರುವನಂತಪುರದಲ್ಲಿ ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್‌ ಮಾತನಾಡಿ, ಈ ಬಗ್ಗೆ ಮುಖ್ಯಮಂತ್ರಿ ಜತೆ ಶನಿವಾರ ಚರ್ಚೆ ನಡೆಸುತ್ತೇವೆ. ಬಳಿಕ ಸಾಧ್ಯವಾದರೆ ನ.17ರಂದು ಇಲ್ಲವಾದಲ್ಲಿ ಸೋಮವಾರ ವಕೀಲರ ಮೂಲಕ ಸು.ಕೋ.ನಲ್ಲಿ ಸಮಯಾವಕಾಶ ಕೋರಲಿದ್ದೇವೆ ಎಂದು ಹೇಳಿದ್ದಾರೆ. 

ಹಿಂದಿರುಗಲು ನಿರ್ಧಾರ
ಶುಕ್ರವಾರ ಬೆಳಗ್ಗೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇತರ ಐವರು ಹೋರಾಟಗಾರರ ಜತೆಗೆ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿ ಆಗಮಿಸಿದ್ದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಪುಣೆಗೆ ವಾಪಸಾಗಿದ್ದಾರೆ. ಆದರೆ ಜ.20ರೊಳಗಾಗಿ ಮತ್ತೆ ಬರುವುದಾಗಿ ಹೇಳಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಹೊರಭಾಗದಲ್ಲಿ ಸೇರಿದ್ದ ದೊಡ್ಡ ಸಂಖ್ಯೆಯ ಪ್ರತಿಭಟನಕಾರರಿಂದಾಗಿ ತೃಪ್ತಿ ಮತ್ತು ಸಂಗಡಿಗರಿಗೆ ವಿಮಾನ ನಿಲ್ದಾಣದಿಂದ ಹೊರಬರಲು ಸಾಧ್ಯವೇ ಆಗಲಿಲ್ಲ. ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೃಪ್ತಿ ದೇಸಾಯಿ, ಹೆದರಿಕೆಯಿಂದ ವಾಪಸಾಗುತ್ತಿಲ್ಲ. ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಮನವಿ ಮಾಡಿದ್ದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. 

ಜಾಮೀನು ನಿರಾಕರಣೆ
ಇದೇ ವೇಳೆ, ಶಬರಿಮಲೆ ದೇಗುಲ ಆವರಣ ಪ್ರವೇಶಿಸಿದ್ದ ರೆಹನಾ ಫಾತಿಮಾಗೆ ಜಾಮೀನು ನೀಡಲು ಕೇರಳ ಹೈಕೋರ್ಟ್‌ ನಿರಾಕರಿಸಿದೆ. ಆಕೆಯ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ. 

ತೆರೆದ ದೇಗುಲ ಬಾಗಿಲು
ಎಲ್ಲ ವಯೋಮಿತಿಯ ಮಹಿಳೆಯರು ದೇಗುಲ ಪ್ರವೇಶ ಮಾಡಬಹುದು ಎಂದು ಸೆ.28ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ಮೂರನೇ ಬಾರಿಗೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆದಿದೆ. ಶುಕ್ರವಾರ ಸಂಜೆ 5 ಗಂಟೆಗೆ ಸರಿಯಾಗಿ ಮುಖ್ಯ ಅರ್ಚಕ ಎ.ವಿ.ಉಣ್ಣಿಕೃಷ್ಣನ್‌ ನಂಬೂದಿರಿ ಬಾಗಿಲು ತೆರೆದರು. ಮುಖ್ಯ ತಂತ್ರಿ ಕಂದರಾರು ರಾಜೀವರಾರು ಒಳ ಪ್ರವೇಶ ಮಾಡಿದಾಗ ಅಯ್ಯಪ್ಪ ಭಕ್ತರು “ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಘೋಷಣೆ ಕೂಗಿದರು. 

Advertisement

ಪ್ರಮುಖ ದಿನಗಳು
41 ದಿನ- ಡಿ.27ರ ವರೆಗೆ ಮಂಡಲ ಪೂಜೆಗಾಗಿ ತೆರೆದಿರಲಿರುವ ಸಮಯ
ಡಿ.28-29- ದೇಗುಲ ಮುಚ್ಚಲಿದೆ.
ಡಿ.30-ಜ.20- ಮಕರವಿಳಕ್ಕು ಸಂದರ್ಭಕ್ಕಾಗಿ ತೆರೆಯಲಿರುವ ದಿನಗಳು.

15 ಸಾವಿರ- ಭದ್ರತೆಗಾಗಿನ ಪೊಲೀಸ್‌ ಸಿಬಂದಿ
860 ಮಹಿಳಾ ಪೊಲೀಸರು
25 ಕೋಟಿ- ಈ ಸಾಲಿನಲ್ಲಿ  ದೇಗುಲಕ್ಕೆ ಭೇಟಿ ನೀಡಲಿರುವ ಸಂಭಾವ್ಯ ಭಕ್ತರು.

ರಾತ್ರಿ 10ರ ಬಳಿಕ ಅನುಮತಿ ಇಲ್ಲ
ಶಬರಿಮಲೆ ದೇಗುಲದ ಮುಖ್ಯ ಆವರಣ (ಸನ್ನಿಧಾನಂ) ದಲ್ಲಿ ರಾತ್ರಿ ಹತ್ತರ ಬಳಿಕ ಯಾರನ್ನೇ ಆಗಲಿ ಉಳಿದು ಕೊಳ್ಳಲು ಅವಕಾಶ ನೀಡದೇ ಇರಲು ಪೊಲೀಸರು ತೀರ್ಮಾ ನಿಸಿ ದ್ದಾರೆ. ಅದಕ್ಕೆ ಸಂಬಂಧಿಸಿ ದಂತೆ ಕಟ್ಟಪ್ಪಣೆಯನ್ನು ಭದ್ರತಾ ಸಿಬಂದಿಗೆ ಈಗಾಗಲೇ ನೀಡಲಾಗಿದೆ.

ಜ.20ರ ವರೆಗೆ ಮಹಿಳೆಯರು ದೇಗುಲ ಪ್ರವೇಶಿಸದಂತೆ ಕಾಯಲಿದ್ದೇವೆ. ತೃಪ್ತಿ ದೇಸಾಯಿ ವಾಪಸಾಗಿದ್ದು ನಮ್ಮ ಹೋರಾಟಕ್ಕೆ ಸಂದ ಜಯ.
ರಾಹುಲ್‌ ಈಶ್ವರ್‌, ಅಯ್ಯಪ್ಪ ಧರ್ಮ ಸೇನಾದ ಅಧ್ಯಕ್ಷ

ಭಕ್ತರಿಗೆ ಎಲ್ಲ  ರೀತಿಯ ಅನುಕೂಲಗಳನ್ನು ರಾಜ್ಯ ಸರಕಾರ ಕಲ್ಪಿಸಿಕೊಟ್ಟಿದೆ. ಆಗಸ್ಟ್‌ನಲ್ಲಿ  ಉಂಟಾಗಿದ್ದ ಪ್ರವಾಹದಿಂದ ನಿರ್ಮಿಸಲಾಗಿದ್ದ ಮೂಲ ಸೌಕರ್ಯ ನಾಶವಾಗಿತ್ತು.
ಕಡಕಂಪಳ್ಳಿ  ಸುರೇಂದ್ರನ್‌, ಕೇರಳ ಮುಜರಾಯಿ ಸಚಿವ

ಈ ಸಾಲಿನಲ್ಲಿ  ಭಕ್ತರಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಸರಕಾರ ವಿಫ‌ಲವಾಗಿದೆ. ಟಿಡಿಬಿಯ ಪ್ರಯತ್ನ ಈ ನಿಟ್ಟಿನಲ್ಲಿ  ಏನೇನೂ ಸಾಲದು.
ರಮೇಶ್‌ ಚೆನ್ನಿತ್ತಲ, ಕೇರಳ ವಿಪಕ್ಷ ನಾಯಕ

ತೃಪ್ತಿ ದೇಸಾಯಿಯವರೇ, ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲೆಂದು ಬಂದಿರುವ ನೀವು 41 ದಿನಗಳ ವ್ರತಾಚರಣೆ ಮಾಡಿದ್ದೀರಾ? ನಿಮ್ಮ ಇರುಮುಡಿ ಕಟ್ಟು  ಎಲ್ಲಿದೆ?
ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next