ನಡುನಡುವೆ ಮೂಡಿ ಬಂದ ವಿವರಣೆ ಶಾಲೆಯಲ್ಲಿ ಅಧ್ಯಾಪಕರು ವಿದ್ಯಾರ್ಥಿಯನ್ನು ಗದರುವ ದನಿಗೆ ಬದಲಾಗಿ ಸ್ವಲ್ಪ ಮೃದು ಮಧುರವಾಗಿದ್ದರೆ ಮತ್ತಷ್ಟು ಸಹನೀಯವಾಗುತ್ತಿತ್ತು. ಇಡೀ ನೃತ್ಯರೂಪಕವನ್ನು ಎತ್ತಿ ಹಿಡಿದದ್ದು ವಿ| ವಿನುತಾ ಆಚಾರ್ಯರ ಸುಮಧುರ ಹಾಗೂ ಸ್ಪಷ್ಟ ಹಾಡುಗಾರಿಕೆ. ಅಷ್ಟೇ ಪರಿಣಾಮಕಾರಿಯಾಗಿ ಧ್ವನಿಮುದ್ರಣ ಮಾಡಿದ್ದು ಗೀತಾಂ ಗಿರೀಶ್.
“ಕಾದಿರುವಳು ಶಬರಿ ಶ್ರೀರಾಮ ನೀ ಬರುವೆಯೆಂದು’. ರಾಮಾಯಣ ಮಹಾಕಾವ್ಯದ ಮನೋಜ್ಞ ಕಥಾನಕವನ್ನು ಖ್ಯಾತ ಸಾಹಿತಿ ಉದ್ಯಾವರ ಮಾಧವ ಆಚಾರ್ಯರ ಪರಿಕಲ್ಪನೆಯೊಂದಿಗೆ ವಿ| ಭ್ರಮರಿ ಶಿವಪ್ರಕಾಶ್ ಇವರ ನೃತ್ಯ ಸಂಯೋಜನೆಯಲ್ಲಿ ಉಡುಪಿಯಲ್ಲಿ ನೃತ್ಯರೂಪಕವಾಗಿ ಪ್ರದರ್ಶಿಸಲಾಯಿತು. ನಾಡಿನಿಂದ ಕಾಡಿನೆಡೆಗೆ ಕಾಡಿನಿಂದ ಕಡಲಿನೆಡೆಗೆ ಸಾಗುವ ಹಾದಿಯಲ್ಲಿ ಸಿಗುವ ಪಶು, ಪಕ್ಷಿ, ಪ್ರಾಣಿ,ಗಿಡ,ಮರ,ನದಿಗಳ ನಡುವೆ ವಾಲ್ಮೀಕಿ ಮಹರ್ಷಿ ಕಟ್ಟಿದ ರಾಮಾಯಣದ ಮಹಾಪ್ರಸ್ಥಾನವನ್ನು ಕೆಲವೆಡೆ ವ್ಯಕ್ತಿ ಚಿತ್ರಣ ಮತ್ತೆ ಹಲವೆಡೆ ಸಂಕೇತಗಳ ಮೂಲಕ ಬಿಂಬಿಸಿದ ರೀತಿ ಅದ್ಭುತವಾಗಿತ್ತು. ಕೆಲವೊಂದು ಸಂಗತಿಗಳು ಕವಿಯ ಕಲ್ಪನೆಯಾದರೂ ಮೂಲ ಕತೆಗೆ ಚ್ಯುತಿ ಬಾರದ ರೀತಿಯಲ್ಲಿ ರಂಗಕ್ಕಿಳಿಸಿದ ನಿರ್ದೇಶಕರ ಪ್ರಯತ್ನ ಪ್ರಶಂಸಾರ್ಹ.
ರಾಮಾಯಣದ ಆರಂಭಿಕ ಪರಿಚಯದೊಂದಿಗೆ ಪ್ರಾರಂಭವಾಗುವ ನೃತ್ಯರೂಪಕ ಮುಂದೆ ವಾಲ್ಮೀಕಿ ಮಹರ್ಷಿಯ ಅಂತರಾಳವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಶಬರಿಯ ಕತೆಯೇ ರೂಪಕದ ಜೀವಾಳವಾದ್ದರಿಂದ ಶಬರಿ ಬಾಲ್ಯ ಕಳೆದು ಯೌವನಾವಸ್ಥೆಗೆ ಕಾಲಿಡುವ ದೃಶ್ಯದ ತುಣುಕಿನಲ್ಲಿ ಸುಂದರ ಬಾಲಿಕೆ ಶಬರಿ ಒಡನಾಡಿಗಳೊಂದಿಗೆ ಆಟವಾಡುತ್ತ ಕಾಡಿನ ಗಿಡಮರಗಳ ಸೊಬಗನ್ನು ಸಂಭ್ರಮಿಸುತ್ತಾ ಪಶು,ಪಕ್ಷಿಗಳೊಂದಿಗೆ ನಲಿಯುತ್ತಾ ಬಾಲಕಿಯ ಮುಗ್ಧತೆಯನ್ನು ಅನುಭವಿಸಿ ಅಭಿನಯಿಸಿದ ರೀತಿ ಪ್ರಶಂಸನೀಯ. ಮುಂದೆ ಬೆಳೆದು ದೊಡ್ಡವಳಾದ ಶಬರಿ ತನ್ನ ತರುಣಾವಸ್ಥೆಯಲ್ಲಿ ಕಾಮುಕ ಬೇಡನೊಬ್ಬನ ಉಪಟಳಕ್ಕೆ ತುತ್ತಾಗುವ ಸಂದರ್ಭ ವಾಲ್ಮೀಕಿ ಮಹರ್ಷಿ ಹುತ್ತದೊಳಗಿಂದ ಬಂದು ಆಕೆಯನ್ನು ರಕ್ಷಿಸುವ ಕವಿಯ ಕಲ್ಪನೆ ಈಗೀಗ ವನಿತೆಯರ ಮೇಲೆ ಅತ್ಯಾಚಾರವೆಸಗುತ್ತಿರುವ ನರರೂಪದ ರಾಕ್ಷಸರನ್ನು ಸಾಂಕೇತಿಸುವಂತೆ ಮೂಡಿ ಬಂತು. ಈ ನಡುವೆ ಕೋಸಲ ದೇಶದಲ್ಲಿ ಶ್ರೀರಾಮ ಸೀತಾ- ಲಕ್ಷ್ಮಣ ಸಹಿತ ವಾನಪ್ರಸ್ಥಕ್ಕೆ ತೆರಳುವ ಕಥಾನಕವನ್ನು ಮಂಥರೆಯ ಮೂಲಕ ರಂಗಕ್ರಿಯೆಗೊಳಪಡಿಸಿದ ಚಾತುರ್ಯ ಮೆಚ್ಚ ತಕ್ಕದ್ದು. ಹಾಗೆಯೇ ಮಹರ್ಷಿ ವಾಲ್ಮೀಕಿ ಶಬರಿಗೆ ಶ್ರೀಮನ್ನಾರಾಯಣನೆ ಮುಂದೆ ಶ್ರೀರಾಮನಾಗಿ ಭುವಿಯಲ್ಲಿ ಅವತರಿಸಲಿರುವ ವಿಷಯ ತಿಳಿಸುವ ಸಂದರ್ಭದಲ್ಲಿ ವೈಕುಂಠ ಲೋಕವನ್ನೆ ಧರೆಗಿಳಿಸಿದ ದೃಶ್ಯ ನಯನ ಮನೋಹರವಾಗಿತ್ತು. ಕ್ಷೀರ ಸಮುದ್ರದಲ್ಲಿ ಶೇಷಶಾಯಿಯಾಗಿರುವ ಮಹಾವಿಷ್ಣುವಿನ ಪರಿಕಲ್ಪನೆ ಕಾಡು-ನಾಡಿನ ಸಂಬಂಧ ಕಡಲಿಗಿರುವುದನ್ನು ಸಾಂಕೇತಿಸುವ ಮೂಲಕ ನೃತ್ಯ ರೂಪಕದ ನಾಡು-ಕಾಡು-ಕಡಲು ಆಶಯವನ್ನು ಪ್ರತಿಧ್ವನಿಸುವಂತಿತ್ತು.
ಮುಂದೆ ರಾಮ, ಲಕ್ಷ್ಮಣ, ಸೀತೆಯರ ಪಂಚವಟಿ ಪ್ರವೇಶ ಅಲ್ಲಿ ಶೂರ್ಪಣಖೀಗೆ ತಕ್ಕ ಶಾಸ್ತಿ, ಮಾರೀಚನ ಮಾಯಾ ಜಿಂಕೆಯ ಚೆಲ್ಲಾಟ, ಕಳ್ಳ ಸನ್ಯಾಸಿ ವೇಷದಲ್ಲಿ ರಾವಣನಿಂದ ಸೀತಾಪಹರಣ ದೃಶ್ಯಕಾವ್ಯಗಳು ಯಥಾವತ್ತಾಗಿ ಮೂಡಿಬಂದವು. ಮತಂಗ ಮುನಿಯ ಆಶ್ರಮಕ್ಕೆ ಸಮೀಪದಲ್ಲಿ ಪರ್ಣಕುಟಿಯೊಂದನ್ನು ಕಟ್ಟಿ ರಾಮಧ್ಯಾನದಲ್ಲಿ ನಿರತಳಾಗಿ ದಿನವೂ ಆತನಿಗಾಗಿ ಹೂವು-ಹಣ್ಣುಗಳನ್ನು ಆರಿಸುತ್ತಾ ರಾಮನ ಬರುವಿಕೆಗಾಗಿ ಕಾಯುತ್ತಿರುವ ಶಬರಿಯ ಅಭಿನಯ ಮನೋಜ್ಞವಾಗಿತ್ತು.
ಪ್ರತಿದಿನ ಬೆಳಗಾದಾಗ ಹಿಂದಿನ ದಿವಸ ಸಂಗ್ರಹಿಸಿಟ್ಟಿದ್ದ ಹೂ-ಹಣ್ಣುಗಳನ್ನು ರಾಮ ಬರಲಿಲ್ಲವಲ್ಲಾ ಎನ್ನುವ ದುಃಖದೊಂದಿಗೆ ಬಿಸಾಡಿ ಹೊಸತಾಗಿ ಹಣ್ಣುಗಳನ್ನು ಆಯುತ್ತಾ, ರಾಮ ಬಂದನೇ ಎಂದು ಕ್ಷಣಕ್ಷಣಕ್ಕೂ ಕಾತರದಿಂದ ಸೊಂಟ ಸಹಕರಿಸದಿದ್ದರೂ ಕತ್ತು ಎತ್ತರಿಸುತ್ತಾ ರಾಮ ಇನ್ನೂ ಬರಲಿಲ್ಲವಲ್ಲಾ ಎಂದು ಶಬರಿ ಬಿಡುವ ನಿಟ್ಟುಸಿರಿನಲ್ಲಿ ಆಪ್ತರ ಬರುವಿಕೆಯನ್ನು ಕಾಯುವ ನಮ್ಮ-ನಿಮ್ಮ ನಡುವಿನ ಸಂಕೇತವಾಗಿ, ರಾಮನೊಲವಿನ ಬತ್ತದ ಚಿಲುಮೆಯಾಗಿ ಮಾರ್ಪಡುವ ಪಾತ್ರಧಾರಿ ಸಮರ್ಥವಾಗಿ ಶಬರಿ ಪಾತ್ರಕ್ಕೆ ನ್ಯಾಯ ಒದಗಿಸಿದರು. ರೂಪಕದುದ್ದಕ್ಕೂ ಹುತ್ತ, ಪರ್ಣಕುಟಿ, ಕಡಲು ಇತ್ಯಾದಿಗಳನ್ನು ಸಮೂಹವನ್ನುಪಯೋಗಿಸಿ, ಕತೆಯ ಓಘಕ್ಕೆ ಚ್ಯುತಿಬಾರದ ರೀತಿಯಲ್ಲಿ ಸೂತ್ರಧಾರರ ಬಳಕೆಯೊಂದಿಗೆ ಸುಧೀರ್ಘವಾಗಬಹುದಾದ ಕಥಾನಕವನ್ನು ಸಂಕ್ಷಿಪ್ತವಾಗಿಯಾದರೂ ಹೇಳಬೇಕಾದುದನ್ನೆಲ್ಲಾ ಹೇಳಿ ರಂಗಕ್ಕಿಳಿಸಿದ ಜಾಣ್ಮೆ ಅಭಿನಂದನೀಯ.
ಕಲಾವಿದ