ನವದೆಹಲಿ: ಕೋವಿಡ್ -19 ಚಿಕಿತ್ಸಾ ಕೇಂದ್ರದಲ್ಲಿ ಸಹ ರೋಗಿ, ಸ್ನೇಹಿತನ ಜತೆಗೂಡಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿದ್ದು ಆರೋಪಿಗಳ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಾಜಧಾನಿ ಹೊಸದಿಲ್ಲಿಯ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ 19 ವರ್ಷದ ಸಹ ರೋಗಿಯಾಗಿದ್ದ ಯುವಕನೋರ್ವ ತನ್ನ 20 ವರ್ಷದ ಸ್ನೇಹಿತನೊಡಗೂಡಿ 14ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಶಂಕಿತ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯಲಿದೆ ಎಂದು ಹೊಸದಿಲ್ಲಿ ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ಪರ್ವಿಂದರ್ ಸಿಂಗ್ ತಿಳಿಸಿದ್ದಾರೆ.
ಪ್ರತ್ಯೇಕ ಪ್ರದೇಶದಲ್ಲಿ ಜುಲೈ 16ರಂದು ಅತ್ಯಾಚಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬಾಲಕಿಯ ಹೆತ್ತವರು ಈ ಬಗ್ಗೆ ದೂರು ನೀಡಿದ್ದಾರೆ. 19 ವರ್ಷ ಯುವಕ, ಅಪರಾಧಕ್ಕೆ ಸಹಕರಿಸಿದ 20 ವರ್ಷದ ಸ್ನೇಹಿತನನ್ನು ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಬಾಲಕಿ ಮತ್ತು ಯುವಕ ಕೋವಿಡ್ ಪರೀಕ್ಷೆಯ ಬಳಿಕ ಪಾಸಿಟಿವ್ ವರದಿ ಬಂದಿದ್ದರಿಂದ ಛತರ್‌ಪುರದ ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿದ್ದರು.
20ರ ಯುವತಿಯೊಬ್ಬಳು ತನ್ನ ಫೋನ್‌ನಲ್ಲಿ ವೀಡಿಯೋ ಮಾಡಿದ್ದಾಗಿಯೂ ಬಾಲಕಿ ದೂರಿನಲ್ಲಿ ತಿಳಿಸಿದ್ದು, ಅತ್ಯಾಚಾರ ಮತ್ತು ವೀಡಿಯೋ ಕುರಿತಾಗಿಯೂ ತನಿಖೆ ಮುಂದುವರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಆರೋಪಿಗಳು ಕೋವಿಡ್ ಚಿಕಿತ್ಸೆ ಪಡೆಯುತ್ತಿರುವುದರಿಂದ ಸರಕಾರಿ ಆಸ್ಪತ್ರೆಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಾಲಕಿ ಬೇರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪರ್ವಿಂದರ್ ಸಿಂಗ್ ತಿಳಿಸಿದ್ದಾರೆ.