ಬೆಂಗಳೂರು: ಪರಿಚಯಸ್ಥ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್‌ನಗರ ನಿವಾಸಿ ಕುಮಾರ್(35) ಬಂಧಿತ.
ಆರೋಪಿ ಪರಿಚಯಸ್ಥ ಮಹಿಳೆಗೆ ಮೊಬೈಲ್ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದಲ್ಲದೆ, ನಡು ರಸ್ತೆಯಲ್ಲಿ ಆಕೆಯ ಕೈ ಹಿಡಿದು ಎಳೆದಾಡಿದ್ದ. ಈ ಸಂಬಂಧ ಸಂತ್ರಸ್ತೆ ಮೇ 30ರಂದು ದೂರು ನೀಡಿದ್ದರು. ಈ ಆಧಾರದ ಮೇಲೆ ಆರೋಪಿಯನ್ನು ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ರಾಜಕೀಯ ಪಕ್ಷವೊಂದರ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಆರೋಪಿ ಕುಮಾರ್, ಎರಡು ತಿಂಗಳ ಹಿಂದೆ ಸಂತ್ರಸ್ತೆ ಬಾಡಿಗೆ ಮನೆ ಹುಡುಕುವಾಗ ಆಕೆಯನ್ನು ಪರಿಚಯಿಸಿಕೊಂಡಿದ್ದಾನೆ. ಆ ವೇಳೆ ತಾನು ಬಾಡಿಗೆ ಮನೆ ಹುಡುಕಿಕೊಡುವ ಮಧ್ಯವರ್ತಿ ಹಾಗೂ ಫೈನಾನ್ಸ್ ಕೆಲಸ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.
ಬಳಿಕ ಆಕೆಯ ಮೊಬೈಲ್ ನಂಬರ್ ಪಡೆದ ಆರೋಪಿ ಪ್ರತಿನಿತ್ಯ ಆಕೆಗೆ ಕರೆ ಮಾಡಿ, ” ನೀನು ನನಗೆ ಬೇಕು. ನನ್ನ ಜತೆ ಬಾ, ನಿಮ್ಮ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಗೆ ಬರುತ್ತೇನೆ’ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ. ಅದರಿಂದ ಬೇಸರಗೊಂಡಿದ್ದ ಸಂತ್ರಸ್ತೆ ಆತನಿಂದ ಅಂತರ ಕಾಯ್ದುಕೊಂಡಿದ್ದರು.
ಈ ಮಧ್ಯೆ ಮೇ 30ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಎಲ್.ಎನ್.ಪುರ 8ನೇ ಕ್ರಾಸ್‌ನಲ್ಲಿ ನಡೆದು ಹೋಗುತಿದ್ದ ಸಂತ್ರಸ್ತೆಯನ್ನು ಅಡ್ಡಗಟ್ಟಿದ ಆರೋಪಿ, ತನ್ನ ಬೇಡಿಕೆ ಈಡೇರಿಸುವಂತೆ ಆಕೆಯ ಕೈ ಹಿಡಿದು ಎಳೆದಾಡಿದ್ದಾನೆ.
ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಕೂಡ ಹಾಕಿದ್ದ. ಗಾಬರಿಗೊಂಡ ಸಂತಸ್ತೆಗೆ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಸಂತ್ರಸ್ತೆ ಆರೋಪಿಯ ವಿರುದ್ಧ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.