Advertisement

ಲೈಂಗಿಕ ದೌರ್ಜನ್ಯ, ಸುಲಿಗೆ: ಅಪರಾಧಿಗೆ 7 ವರ್ಷ ಶಿಕ್ಷೆ

12:14 AM Sep 29, 2020 | mahesh |

ಮಂಗಳೂರು: ನಗರದ ಹಾಸ್ಟೆಲ್‌ವೊಂದಕ್ಕೆ ನುಗ್ಗಿ ಎಂಬಿಬಿಎಸ್‌ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹಣ, ಎಟಿಎಂ ಕಾರ್ಡ್‌ ಸುಲಿಗೆ ಮಾಡಿದ ಆರೋಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

ಮೈಸೂರು ಕೆ.ಆರ್‌. ನಗರದ ನಾಗೇಶ ಅಲಿಯಾಸ್‌ ನಾಗು (30) ಶಿಕ್ಷೆಗೊಳಗಾದಾತ. 2017ರ ಡಿ. 5ರ ಮುಂಜಾವ 4.30ರ ವೇಳೆಗೆ ನಾಗೇಶ, ವಿದ್ಯಾರ್ಥಿನಿಯರ ಹಾಸ್ಟೆಲ್‌ ಕಟ್ಟಡದ 2ನೇ ಮಹಡಿಗೆ ನುಗ್ಗಿ ಅಲ್ಲಿ ಮಲಗಿದ್ದ ವಿದ್ಯಾರ್ಥಿನಿಯ ಕೋಣೆ ಪ್ರವೇಶಿಸಿ ಆಕೆಯ ಕೈ ಕಾಲು ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿ ಎಟಿಎಂ ಕಾರ್ಡ್‌ ಹಾಗೂ ಪರ್ಸ್‌ ಸುಲಿಗೆ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

5 ಲ.ರೂ.ಗೆ ಬೇಡಿಕೆ ಇಟ್ಟಿದ್ದ
ಶಿಕ್ಷೆಗೊಳಗಾಗಿರುವ ನಾಗೇಶ ಹಾಸ್ಟೆಲ್‌ಗೆ ಕೋಣೆ ಪ್ರವೇಶಿಸಿ ಅಲ್ಲಿ ಮಲಗಿದ್ದ ವಿದ್ಯಾರ್ಥಿನಿಯ ಬಾಯಿ ಮುಚ್ಚಿ, ಕೈ, ಕಾಲು ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿ ರಾಡ್‌ ತೋರಿಸಿ ಬೆದರಿಕೆಯೊಡ್ಡಿ 5 ಲ.ರೂ.ಗೆ ಬೇಡಿಕೆ ಇಟ್ಟಿದ್ದ. ಪರ್ಸ್‌ನಲ್ಲಿದ್ದ 3,000 ರೂ., ಎಟಿಎಂ ಕಾರ್ಡ್‌ನಿಂದ ಒಟ್ಟು 8,000 ರೂ. ತೆಗೆದಿದ್ದ. 3ನೇ ಮಹಡಿಯಲ್ಲಿ ಮಲಗಿದ್ದ ವಿದ್ಯಾರ್ಥಿನಿಯೊಬ್ಬಳ ಮೊಬೈಲ್‌ ಕೂಡ ಎಗರಿಸಿದ್ದ.

ತನಿಖೆಗೆ ನೆರವಾದ ಸಿಸಿ ಕೆಮರಾ
ಆರೋಪಿಯ ಬೆರಳಚ್ಚು ಹಾಗೂ ಎಟಿಎಂ ಸಿಸಿ ಕೆಮರಾಗಳಲ್ಲಿ ದಾಖಲಾಗಿದ್ದ ದೃಶ್ಯವು ತನಿಖೆಗೆ ಸಹಕಾರಿಯಾಗಿವೆ. 2017ರ ಡಿ. 10ರಂದು ಆರೋಪಿ ನಾಗೇಶನನ್ನು ಬಂಧಿಸಲಾಗಿತ್ತು. 25 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಉಳ್ಳಾಲ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರು ತನಿಖಾಧಿಕಾರಿಯಾಗಿದ್ದರು. ಡಿಸಿಪಿ ಉಮಾ ಪ್ರಶಾಂತ್‌ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶೆ ಸೈದುನ್ನೀಸಾ ಅವರು ಸೆ. 25ರಂದು ತೀರ್ಪು ನೀಡಿದ್ದಾರೆ. ಸಂತ್ರಸ್ತೆ ಹಾಗೂ ಸರಕಾರದ ಪರ ಪಿಪಿ ಜಯರಾಮ ಶೆಟ್ಟಿ ಅವರು ವಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next