ಬೆಂಗಳೂರು: ಪತಿಯ ಅನಾರೋಗ್ಯವನ್ನೇ ನೆಪ ಮಾಡಿಕೊಂಡು ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದಲ್ಲದೆ, ಈಕೆಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದ ಭಾರತೀಯ ಮಾನವ ಹಕ್ಕುಗಳ ಪರಿಷತ್‌ನ ದಕ್ಷಿಣ ಭಾರತ ಮುಖ್ಯಸ್ಥೆ ಹಾಗೂ ಈಕೆಯ ಪತಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಇಮ್ರಾನ್ ಮತ್ತು ಈತನ ಪತ್ನಿ ಸೀಮಾ ಖಾನ್ ಬಂಧಿತ ದಂಪತಿ. ಆರೋಪಿಗಳು ಪಕ್ಕದ ಮನೆಯ ಮಹಿಳೆ ಮೇಲೆ ದೌರ್ಜನ್ಯವೆಸಗಿದಲ್ಲದೆ, ಈಕೆಯಿಂದ 8 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಕೆ.ಜಿ.ಹಳ್ಳಿಯಲ್ಲಿ ಮೆಕಾನಿಕ್ ಆಗಿದ್ದ ಇಮ್ರಾನ್, ಸಂತ್ರಸ್ತೆ ಮನೆ ಪಕ್ಕದಲ್ಲೇ ವಾಸವಾಗಿದ್ದ. ಈ ವೇಳೆ ಆಕೆಯ ಪತಿ ಡಯಾಲಿಸಿಸ್‌ನಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ. ಸಹಾಯ ಮಾಡುವ ನೆಪದಲ್ಲಿ ಸಂತ್ರಸ್ತೆಯ ಮನೆಗೆ ಹೋಗುತ್ತಿದ್ದ ಇಮ್ರಾನ್, ಈಕೆಯ ಪುತ್ರ ಮತ್ತು ಪುತ್ರಿಯನ್ನು ಪರಿಚಯಿಸಿಕೊಂಡಿದ್ದ. ಬಳಿಕ ಪುತ್ರಿಯ ಜತೆ ಸಲುಗೆಯಿಂದ ಇರಲು ಯತ್ನಿಸಿದ್ದ. ಇದನ್ನು ಗಮನಿಸಿದ ಸಂತ್ರಸ್ತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು.
ಇದನ್ನೇ ನೆಪ ಮಾಡಿಕೊಂಡು ಆರೋಪಿ ಆಗಾಗ್ಗೆ ಮನೆಗೆ ಹೋಗಿ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಅಕ್ರಮ ಸಂಬಂಧ ಇಟ್ಟಕೊಳ್ಳುವಂತೆ ಪೀಡಿಸುತ್ತಿದ್ದ. ಇದೇ ರೀತಿ ಸುಮಾರು ನಾಲ್ಕೈದು ವರ್ಷಗಳಿಂದ ದೌರ್ಜನ್ಯವೆಸಗಿದ್ದಾನೆ.
ಈ ಮಧ್ಯೆ ಆರೋಪಿ ಇಮ್ರಾನ್ ಭಾರತೀಯ ಮಾನವ ಹಕ್ಕುಗಳ ಪರಿಷತ್ ಎಂಬ ಸರ್ಕಾರೇತರ ಸಂಸ್ಥೆಯ ದಕ್ಷಿಣ ಭಾರತ ಮುಖ್ಯಸ್ಥೆ ಸೀಮಾ ಖಾನ್‌ಳನ್ನು ಮದುವೆಯಾಗಿದ್ದ. ಬಳಿಕ ಈತ ಸಂಘಟನೆಯ ರಾಜ್ಯ ಅಧ್ಯಕ್ಷನಾಗಿದ್ದ. ಕೆಲ ದಿನಗಳ ಬಳಿಕ ಆರೋಪಿ ಸಂತ್ರಸ್ತೆ ಜತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಪತ್ನಿಗೆ ಹೇಳಿದ್ದಾನೆ. ಬಳಿಕ ಇಬ್ಬರು ಸೇರಿ ಆಕೆ ಮೇಲೆ ದೌರ್ಜನ್ಯವೆಸಗುತ್ತಿದ್ದರು ಎಂದು ಪೊಲೀಸರು ಹೇಳಿದರು.
ಬಂಗಾರ ಅಡಮಾನ: ಬಳಿಕ ಪತ್ನಿ ಸೀಮಾ ಖಾನ್ ಜತೆ ಸೇರಿ ಸಂತ್ರಸ್ತೆಗೆ ಆಗಾಗ್ಗೆ ಕರೆ ಮಾಡಿ ನೀನ್ನ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋಗಳು ನನ್ನ ಬಳಿ ಇವೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳಿ ಆಕೆ ಬಳಿಯಿಂದ್ದ ಚಿನ್ನಾಭರಣ ಸೇರಿ 8 ಲಕ್ಷ ರೂ. ದೋಚಿದ್ದರು.
ಸಂತ್ರಸ್ತೆ ಮೇಲೆ: ಪತಿಯನ್ನು ಸಂತ್ರಸ್ತೆ ಡಯಾಲಿಸಿಸ್‌ಗೆ ಕರೆತಂದಾಗ ಆರೋಪಿ ಇಮ್ರಾನ್ ಸಾರ್ವಜನಿಕವಾಗಿ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದ. ಈ ಮಾಹಿತಿ ಪಡೆದ ಶಿವಾಜಿನಗರ ಠಾಣೆಯ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಶೀಲಾ, ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದರು. ನಂತರ ಎಲ್ಲ ವಿಚಾರ ಬಯಲಾಗಿದೆ.