Advertisement

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆತಂಕಕಾರಿ

12:47 PM Sep 16, 2017 | |

ಕೋಲಾರ: ಮಕ್ಕಳನ್ನು ಸುರಕ್ಷಿತಗೊಳಿಸುವ ಮೂಲಕ ದೇಶವನ್ನು ಬಲಿಷ್ಠಗೊಳಿಸಲು ಸರಕಾರ ಹಾಗೂ ಸಮಾಜ ಜೊತೆಗೂಡಬೇಕಿದೆ ಎಂದು ನೋಬೆಲ್‌ ಪ್ರಶಸ್ತಿ ಪುರಸ್ಕೃತ ಕೈಲಾಸ್‌ ಸತ್ಯಾರ್ಥಿ ಹೇಳಿದರು. ನಗರದ ಟಿ.ಚೆನ್ನಯ್ಯ ರಂಗ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಕಾನೂನು  ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ ಹಾಗೂ ಕಲೆಕ್ಟಿವ್‌ ಆಕ್ಷನ್‌ ನೆಟ್‌ವರ್ಕ್‌ ಆಶ್ರಯದಲ್ಲಿ “ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತ’ ಘೋಷಣೆಯಡಿ ಹಮ್ಮಿಕೊಂಡಿರುವ ಭಾರತ ಯಾತ್ರೆ ಅಭಿಯಾನದಲ್ಲಿ ಅವರು ಮಾತನಾಡುತ್ತಿದ್ದರು.

Advertisement

ಮಗುವಿಗೆ ನಿರ್ಭಯತೆ ಮುಖ್ಯ: ಪ್ರತಿ ಮಗು ಸುರಕ್ಷಿತ ವಾತಾವರಣದಲ್ಲಿ ನಿರ್ಭಯವಾಗಿ ಬೆಳೆದಾಗ ಮಾತ್ರ ಸುರಕ್ಷಿತ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಇದಕ್ಕಾಗಿಯೇ ಭಾರತ ಯಾತ್ರೆಯನ್ನು ತಾವು ನಡೆಸುತ್ತಿದ್ದೇವೆ. ಕೋಲಾರ ಜಿಲ್ಲೆ ಜನತೆ ತಮ್ಮ ಮಕ್ಕಳನ್ನು ಸುರಕ್ಷಿತಗೊಳಿಸುತ್ತೇವೆ ಎಂಬ ಭಾವನೆ ಮೂಡಿಸುವ ಮೂಲಕ ಯಾತ್ರೆಯನ್ನು ಸಫ‌ಲಗೊಳಿಸಬೇಕೆಂದು ಕೋರಿದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆತಂಕಕಾರಿ: ಪ್ರತಿ ಒಂದು ಗಂಟೆಯಲ್ಲಿ ಎರಡು ಮಗುವಿನ ಮೇಲೆ ಲೈಂಗಿಕ ಅತ್ಯಾಚಾರ ನಡೆಯುತ್ತಿದೆ. ಪ್ರತಿ ಗಂಟೆಗೆ 8 ಮಕ್ಕಳು ನಾಪತ್ತೆಯಾಗುವ ಮೂಲಕ ವಿವಿಧ ದಂಧೆಗಳಲ್ಲಿ ತೊಡಗುವಂತೆ ಮಾಡಲಾಗುತ್ತಿದೆ. ಹತ್ತು ವರ್ಷಗಳ ಹಿಂದೆ ನಡೆಸಿದ ಸಮೀûಾ ವರದಿಯ ಪ್ರಕಾರ ದೇಶದಲ್ಲಿ ಪ್ರತಿ 100 ಮಕ್ಕಳ ಪೈಕಿ 53 ಮಕ್ಕಳು ಅಂದರೆ, ಪ್ರತಿ ಇಬ್ಬರು ಮಕ್ಕಳಲ್ಲಿ ಒಂದು ಮಗು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಿದೆ ಎನ್ನುವುದು ಆತಂಕಕಾರಿ ವಿಚಾರವಾಗಿದೆ. ಹಾಗೆಯೇ, ನಾಚಿಕೆಗೇಡಿನ ಸಂಗತಿಯೂ ಆಗಿದೆ ಎಂದು ವಿಷಾದಿಸಿದರು.

ನ್ಯಾಯದಾನದ ವೇಗ ಹೆಚ್ಚಲಿ: ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥವಾಗಬೇಕಾದರೆ ಇನ್ನೂ 40 ವರ್ಷಗಳು ಬೇಕಾಗುತ್ತವೆ. ತಪ್ಪಿತಸ್ಥರು ನಿರ್ಭಯವಾಗಿ ಸಮಾಜದಲ್ಲಿ ಓಡಾಡಿಕೊಂಡಿರುವುದರಿಂದಲೇ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯಾಯದಾನ ವೇಗವನ್ನು ಹೆಚ್ಚಿಸುಸುವುದರ ಜೊತೆಗೆ ಮಕ್ಕಳ ಪಾಲಿಗೆ ಭಯ ಮುಕ್ತ ಭಾರತವನ್ನು ನಿರ್ಮಾಣ ಮಾಡುವುದು ಪ್ರತಿ ಶಿಕ್ಷಕ ಹಾಗೂ ಪೋಷಕರ ಜವಾಬ್ದಾರಿಯಾಗಬೇಕೆಂದರು.

ಶಾಲೆಗೆ ನಿಯಮಿತವಾಗಿ ಭೇಟಿ ನೀಡಿ: ಎಲ್ಲಾ ಮಕ್ಕಳಿಗೂ ಪೌಷ್ಟಿಕ ಆಹಾರ ಮತ್ತು ಶುದ್ಧ ಕುಡಿಯುವ ನೀರು ನೀಡುವ ಮೂಲಕ ಅವರ ಆರೋಗ್ಯವನ್ನು ಕಾಪಾಡಬೇಕು. ಪ್ರತಿ ರಾಜಕಾರಣಿಯು ತಮ್ಮ ಸಮೀಪದ ಶಾಲೆಗೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ಶಾಲೆಗಳ ವ್ಯವಸ್ಥೆಯನ್ನು ಸುಧಾರಿಸಿ, ಮಕ್ಕಳಿಗೆ ಸುರಕ್ಷಿತ ಭಾವನೆ ಮೂಡಿಸಬೇಕು. ಸಮಾಜದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ತಮ್ಮ ಕುಟುಂಬದ ಮಕ್ಕಳೊಂದಿಗೆ ಗೆಳೆಯರಂತೆ ವರ್ತಿಸಬೇಕೆಂದು ಸಲಹೆ ನೀಡಿದರು.

Advertisement

ಮಕ್ಕಳಿಗೆ ಸುರಕ್ಷಿತತೆ ಕಲ್ಪಿಸಿ: ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ ಚಂದ್ರ ಮಾತನಾಡಿ, ಜಿಲ್ಲೆಯಲ್ಲೂ ಮಕ್ಕಳ ಮೇಲೆ ದೌರ್ಜನ್ಯ ನಡೆಸಿರುವ ಹಲವಾರು ಪ್ರಕರಣಗಳು ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಿದರೆ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಬಾಲ್ಯದಲ್ಲಿಯೇ ಮಕ್ಕಳ ಮನಸನ್ನು ಮುದುಡಿ ಹೋಗುವಂತೆ ಮಾಡಬಾರದು. ಅವರ ಸೂಕ್ಷ್ಮ ಮನಸುಗಳನ್ನು ನೋಯಿಸಬಾರದು. ಮಕ್ಕಳು ಮೊಬೈಲ್‌, ಇಂಟರ್‌ನೆಟ್‌ ಬಳಸುವಾಗ ನಿಗಾ ಇಡಬೇಕೆಂದರು.

ಆಂದೋಲನ ಗಟ್ಟಿಗೊಳಿಸೋಣ: ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಗುರುರಾಜ್‌ ಶಿರೋಳ್‌ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣದ ಕನಸಿನೊಂದಿಗೆ ಮಕ್ಕಳನ್ನು ಸುರಕ್ಷಿತಗೊಳಿಸುವಲ್ಲಿ ಕೈಲಾಸ್‌ ಸತ್ಯಾರ್ಥಿ ನೇತೃತ್ವದಲ್ಲಿ ಸಮುದ್ರದಂತೆ ನಡೆಯುತ್ತಿರುವ ಭಾರತ ಯಾತ್ರೆಗೆ ನದಿ, ತೊರೆ, ಝರಿಗಳಂತೆ ಸೇರಿ “ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತ’ ಆಂದೋಲನವನ್ನು ಗಟ್ಟಿಗೊಳಿಸೋಣ. ಈ ಕಾರ್ಯದಲ್ಲಿ ಇಡೀ ಜಿಲ್ಲೆಯ ಜನತೆಯ ಸಹಕಾರ ಇದೆ ಎಂದು ಘೋಷಿಸಿದರು.

ಮಕ್ಕಳ ಬಾಲ್ಯವನ್ನು ಸುರಕ್ಷಿತಗೊಳಿಸುವ ವಾಗ್ಧಾನ ಮಾಡುವ ಪ್ರಮಾಣ ವಚನವನ್ನು ಕೈಲಾಸ್‌ ಸತ್ಯಾರ್ಥಿ ರಂಗ ಮಂದಿರದಲ್ಲಿ ನರೆದಿದ್ದ ಎಲ್ಲರಿಗೂ ಬೋಧಿಸಿದರು.
ಗ್ರಾಮ ವಿಕಾಸ ಎಂ.ವಿ.ಎನ್‌.ರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗವೇಣಿ ನಿರೂಪಿಸಿ, ಚೌಡಪ್ಪ ಸ್ವಾಗತಿಸಿ, ಶಿಲ್ಪ ವಂದಿಸಿದರು. ಇದಕ್ಕೂ ಮುನ್ನ ವಿವಿಧ ಶಾಲಾ ಮಕ್ಕಳು ಭಾರತ ಸೇವಾದಳ, ಎನ್‌ಸಿಸಿ ಇತರೇ ತಂಡಗಳೊಂದಿಗೆ ಕೈಲಾಸ್‌ ಸತ್ಯಾರ್ಥಿ ಅವರನ್ನು ಪ್ರವಾಸಿ ಮಂದಿರದಿಂದ ಟಿ.ಚೆನ್ನಯ್ಯ ರಂಗ ಮಂದಿರದವರೆಗೆ ಮೆರವಣಿಗೆಯಲ್ಲಿ ಕರೆ ತಂದರು.

ವೇದಿಕೆಯಲ್ಲಿ ಜಿಪಂ ಸಿಇಒ ಬಿ.ಬಿ.ಕಾವೇರಿ, ಟಿ.ಆರ್‌.ರಘುನಂದನ್‌, ಕಾರ್ಮಿಕ ಅಧಿಕಾರಿ ನಿರಂಜನ್‌, ಗ್ರಾಪಂ ಒಕ್ಕೂಟದ ಅಧ್ಯಕ್ಷ ಪ್ರಸನ್ನ, ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎಂ.ಸೌಮ್ಯಾ, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ವಿನೋದ್‌ಕುಮಾರ್‌, ಡಿಡಿಪಿಐ ಸ್ವಾಮಿ, ರಾಜಣ್ಣ , ಜಾಗೃತಿ ಸಮಿತಿಯ ಧನರಾಜ್‌ ಇತರರು ಹಾಜರಿದ್ದರು.

ಮಗು ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಶೋಷಣೆಯನ್ನು ಮುಕ್ತವಾಗಿ ಹೇಳಿಕೊಳ್ಳದಂತಹ ಭಯದ ವಾತಾವರಣವನ್ನು ಮನೆ ಮತ್ತು ಶಾಲೆಗಳಲ್ಲಿ ಸೃಷ್ಟಿಸಿರುವುದು ಖಂಡನೀಯ. ಮಾವೋವಾದಿ ನಕ್ಸಲರು ಮಕ್ಕಳನ್ನು ಮುಂದಿಟ್ಟುಕೊಂಡು ಪೊಲೀಸರನ್ನು ಹತ್ಯೆ ಮಾಡುತ್ತಿದ್ದಾರೆ. ಉಗ್ರಗಾಮಿಗಳು ಮಕ್ಕಳ ಕೈಗೆ ಬಂದೂಕು ನೀಡಿ ಹಿಂಸಾ ಕೃತ್ಯಗಳಲ್ಲಿ ತೊಡಗಿಸುತ್ತಿದ್ದಾರೆ. ಇವುಗಳ ವಿರುದ್ಧ ಇಡೀ ದೇಶವೇ ಧ್ವನಿ ಎತ್ತಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತಾವು ಭಾರತ ಯಾತ್ರೆ ನಡೆಸುತ್ತಿದ್ದೇವೆ. 
-ಕೈಲಾಸ್‌ ಸತ್ಯಾರ್ಥಿ, ನೋಬೆಲ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ  

Advertisement

Udayavani is now on Telegram. Click here to join our channel and stay updated with the latest news.

Next