ಮಂಗಳೂರು: ಅಸ್ಸಾಂ ಮೂಲದ, ಬೈಕಂಪಾಡಿಯಲ್ಲಿ ವಾಸಿಸುವ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಯುವಕನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯವು ಐದು ವರ್ಷಗಳ ಶಿಕ್ಷೆ ವಿಧಿಸಿದೆ.
ಬಾಲಕಿ ವಾಸಿಸುತ್ತಿದ್ದ ಪಕ್ಕದ ಮನೆಯಲ್ಲಿದ್ದ, ಅಸ್ಸಾಂ ರಾಜ್ಯದ ಹಜಾರಿ ಗ್ರಾಮದ ಅತೀಕ್ ಉರ್ ರಹ್ಮಾನ್ ಲಷ್ಕರ್ (28) ಶಿಕ್ಷೆಗೊಳಗಾದಾತ. ಬಾಲಕಿಯು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದು, ಅತೀಕ್ ಉರ್ ರಹ್ಮಾನ್ ಪಕ್ಕದ ಮನೆಯಲ್ಲಿ ಬಾಡಿಗೆ ಗಿದ್ದ. 2018ರ ಜೂನ್ 24ರಂದು ಸಂಜೆ ಆತ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು “ಅತಿರೇಕದ ಲೈಂಗಿಕ ದೌರ್ಜನ್ಯ’ ನಡೆಸಿದ್ದ. ಇದನ್ನು ಬಾಲಕಿ ತಂದೆಗೆ ತಿಳಿಸಿದ್ದು, ತಂದೆ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು.
ಎಸ್‌ಐ ವೆಂಕಟೇಶ್ ಅವರು ಪ್ರಕರಣ ದಾಖಲಿಸಿ ಆರೋಪಿ ಯನ್ನು ಬಂಧಿಸಿ, ತನಿಖೆ ಆರಂಭಿ ಸಿದ್ದರು. ಬಳಿಕ ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ತನಿಖೆಯನ್ನು ಪೂರ್ತಿಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಒಟ್ಟು 25 ಸಾಕ್ಷಿಗಳನ್ನು ಹೆಸರಿಸಿದ್ದು, ಅವರಲ್ಲಿ 20 ಮಂದಿ ಸಾಕ್ಷ್ಯ ಹೇಳಿದ್ದರು.
ಪೋಕ್ಸೋ ವಿಶೇಷ ನ್ಯಾಯಾ ಲಯದ ನ್ಯಾಯಾಧೀಶರಾದ ಪಲ್ಲವಿ ಬಿ.ಆರ್. ಅವರು ವಿಚಾರಣೆ ನಡೆಸಿ, ಐಪಿಸಿ ಸೆಕ್ಷನ್ 354 ಮತ್ತು ಪೋಕ್ಸೋ ಕಾಯ್ದೆಯ ಕಲಂ 10ರನ್ವಯ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ, ಆತನಿಗೆ 5 ವರ್ಷ ಸಾದಾ ಸಜೆ, 5000 ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದರು. ದಂಡ ದಲ್ಲಿ 3000 ರೂ. ಮೊತ್ತವನ್ನು ಸಂತ್ರಸ್ತ ಬಾಲಕಿಗೆ ನೀಡಲು ಸೂಚಿಸಲಾಗಿದೆ, ಅಲ್ಲದೆ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದವರು ಸಂತ್ರಸ್ತ ಬಾಲಕಿಗೆ ಸೂಕ್ತ ಪರಿಹಾರ ನೀಡಬೇಕು ಎಂದೂ ಆದೇಶಿಸಲಾಗಿದೆ.
ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಸಿ.ವೆಂಕಟ ರಮಣ ಸ್ವಾಮಿ ವಾದಿಸಿದ್ದರು.