Advertisement

ನೀರು ಮುಟ್ಟಿದರೆ ಮೈ ಉರಿ, ಕಜ್ಜಿ!

06:00 AM Jun 06, 2018 | |

ಉಡುಪಿ: ಕಲ್ಸಂಕ ತೋಡು ಇನ್ನೇನು ಸಮುದ್ರ ಸೇರಲು ಎರಡು ಕಿ.ಮೀನಷ್ಟು ಮಾತ್ರವೇ ಬಾಕಿ ಇದೆ ಎನ್ನುವ ಪ್ರದೇಶದಲ್ಲಿ (ಕೊಡವೂರು, ಕಲ್ಮಾಡಿ)ಅದೆಷ್ಟು ರೀತಿಯಲ್ಲಿ ಕೆಟ್ಟು ಹೋಗಿದೆ ಎಂದರೆ ಅದರ ನೀರನ್ನು ಮುಟ್ಟಿದರೆ ಮೈಯಲ್ಲಿ  ಕಜ್ಜಿ, ಉರಿ ಖಚಿತ! ಈ ಮಾತನ್ನು ಹೇಳುವ ಸ್ಥಳೀಯರಾದ ಶಂಕರ ಪೂಜಾರಿ ಅವರ ಮುಖದಲ್ಲೇ ನೋವು ಕಾಣಿಸುತ್ತದೆ. “ಇದೇ ತೋಡಿನಲ್ಲಿ ನಾವು ಮರಳು ತೆಗೆಯುತ್ತಿದ್ದೆವು. ಇಲ್ಲಿ ಕಟ್ಟ ಕಟ್ಟಿದ ಮೇಲೆ 200-300 ಜನ ಈಜಲು ಬರುತ್ತಿದ್ದರು. ಬಟ್ಟೆಯನ್ನೂ ಒಗೆಯುತ್ತಿದ್ದರು. ಯುಗಾದಿ ಸಮಯ ಮೀನೂ ಹಿಡಿಯುತ್ತಿದ್ದೆವು. ಅಂತಹ ನೀರನ್ನು ಈಗ ಮುಟ್ಟಿದರೆ, ಮೈ ಉರಿ, ಕಜ್ಜಿ ಉಂಟಾಗುತ್ತದೆ’ ಎನ್ನುತ್ತಾರೆ.  

Advertisement

ಕೊಳಚೆ ಶುದ್ಧೀಕರಣ ಘಟಕದ ಅವಾಂತರ
ಕೊಡವೂರು ಭಾಗದಲ್ಲಿ ನದಿ ಇಷ್ಟೊಂದು ಕುಲಗೆಟ್ಟು ಹೋಗಲು ನಿಟ್ಟೂರಿನ ಕೊಳಚೆ ಶುದ್ದೀಕರಣ ಘಟಕದಲ್ಲಿ ಕೊಳಚೆ ನೀರನ್ನು ಶುದ್ಧೀಕರಣ ಮಾಡದೇ ಹಾಗೆಯೇ ತೋಡಿಗೆ ಬಿಡುವುದು ಕಾರಣ ಎನ್ನುವುದು ಇಲ್ಲಿನವರ ಆರೋಪ. “ಇದರ ನೀರು ನೀರೇ ಅಲ್ಲ. ಒಂದೊಂದು ಬಾರಿ ಒಂದೊಂದು ರೀತಿಯ ಬಣ್ಣ ಹೊಂದಿರುತ್ತದೆ. ಒಮ್ಮೆ ಕಪ್ಪು, ಇನ್ನೊಮ್ಮೆ ಕೆಂಪು ಮತ್ತೂಮ್ಮೆ ನೀಲಿ ಬಣ್ಣದಲ್ಲಿರುತ್ತದೆ’ ಎನ್ನುತ್ತಾರೆ ವಿಜಯ ಕೊಡವೂರು ಅವರು.

ಸೊಳ್ಳೆ ಉತ್ಪಾದನಾ ಕೇಂದ್ರ  
ಕೊಡವೂರು ಶಂಕರನಾರಾಯಣ ತೀರ್ಥ ಕೆರೆ ಮತ್ತು ಅದರ ಪಕ್ಕದ ಗದ್ದೆಗಳು ಇಲ್ಲಿನ ಕೊಳಚೆ ನೀರಿನ ಕರುಣಾಜನಕ ಕತೆ ಹೇಳುತ್ತವೆ. ಗದ್ದೆಗಳಲ್ಲಿ ನಿಂತ ನೀರಿನಲ್ಲಿ ಹುಳಗಳ ರಾಶಿ. ಪಕ್ಕದ ವಾಸು ಎಂಬವರ ಮನೆಯವರು ಜ್ವರದಿಂದ ಕಂಗಾಲಾಗಿದ್ದಾರೆ. ಸೊಳ್ಳೆಗಳು ವಿಪರೀತವಿದ್ದು, ಉತ್ಪಾದನಾ ಕೇಂದ್ರದಂತಿದೆ.  ಕೊಡವೂರು ಸೇತುವೆ ಬಳಿ ಈ ತೋಡಿಗೆ ಅಡ್ಡಲಾಗಿ ಮೀನಿನ ಬಲೆಯನ್ನು ಹಾಕಿ ತೋಡಿಗೆ ಕಸವನ್ನು ಹಾಕದಂತೆ ಮಾಡುವ ಪ್ರಯತ್ನ ನಡೆಸಲಾಗಿದೆ. ಅಷ್ಟರ ಮಟ್ಟಿಗಾದರೂ ತೋಡು ಸ್ವಚ್ಛವಿರಲಿ ಎಂಬ ಪ್ರಯತ್ನ ಸ್ಥಳೀಯರದ್ದು. ಇಲ್ಲಿ ಹರಿಯುವ ನದಿ(ತೋಡು)ಗೆ ತೆಂಗಿನಕಾಯಿ ಬಿದ್ದರೂ ಅದನ್ನು ಹೆಕ್ಕುವುದಿಲ್ಲ. ತೀರ ಕಲುಷಿತವಾಗದ್ದರಿಂದ ನೀರಿಗೆ ಇಳಿಯಲೇ ಹೆದರುವಂತಾಗಿದೆ.  

ಆರಂಭಗೊಂಡಿತ್ತು ಹೋರಾಟ ಇಂದ್ರಾಣಿ ದೇವಸ್ಥಾನ ಮೂಲಕ ಹಾದು ಬರುವುದರಿಂದ ಕಲ್ಸಂಕ ತೋಡಿಗೆ ಇಂದ್ರಾಣಿ ನದಿ ಎನ್ನುತ್ತಾರೆ. ಕೊಡವೂರು ಭಾಗದಲ್ಲಿ ಕಲ್ಮಾಡಿ ನದಿ ಎನ್ನುವುದೂ ಉಂಟು. ಇದನ್ನು ಉಳಿಸಲು ಇಂದ್ರಾಣಿ ತೀರ್ಥ ಮುಕ್ತಿ ಆಂದೋಲನ ಎಂಬ ಹೋರಾಟವನ್ನು  ಕೊಡವೂರಿನಲ್ಲಿ ಆರಂಭಿಸಲಾಗಿತ್ತು. “ಈ ನದಿ ಉಳಿಸಲು ಊರವರು ಹೋರಾಟ ಹುಟ್ಟು ಹಾಕಿದ್ದೆವು. ಎಲ್ಲೆಡೆ ಮನವಿ ನೀಡಿದ್ದೇವೆ. ಪ್ರತಿಭಟನೆ ನಡೆಸಿದ್ದೇವೆ. ಕಾನೂನು ಹೋರಾಟವೂ ಮುಂದುವರೆದಿದೆ. ನಮ್ಮ ಪ್ರಯತ್ನ ಮುಂದುವರೆಸುತ್ತೇವೆ’ ಎನ್ನುತ್ತಾರೆ ಆಂದೋಲನ ಮುಂದಾಳು ರಾಘವೇಂದ್ರ ರಾವ್‌ ಅವರು.  

ಉಸಿರಾಟ ಕಷ್ಟ
ನಾನು ಇಲ್ಲಿ 40 ವರ್ಷಗಳಿಂದ ಇದ್ದೇನೆ. ಕಳೆದ 10 ವರ್ಷಗಳಿಂದ ಇಲ್ಲಿ ವಾಸನೆಯಿಂದಾಗಿ ರಾತ್ರಿ ಮಲಗುವುದು ಕೂಡ ಸಾಧ್ಯವಾಗುತ್ತಿಲ್ಲ. ಹಿಂದೆ ಇಲ್ಲಿ ನದಿ ಸ್ವತ್ಛವಾಗಿತ್ತು ಮೀನು ಕೂಡ ಹಿಡಿಯುತ್ತಿದ್ದರು. ಈಗ ಬೇಸಗೆ ಕಾಲದಲ್ಲಿಯಂತೂ ಉಸಿರಾಡುವುದೂ ಕಷ್ಟವಾಗುತ್ತದೆ.
ಪ್ರಸಿಲ್ಲಾ ಕೊಡವೂರು,  ಕಲ್ಮಾಡಿ

Advertisement

ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ನೀರನ್ನು ಪ್ಯೂರಿಫೈ ಮಾಡದೆ ಹಾಗೆಯೇ ಬಿಡುತ್ತಿದ್ದಾರೆ. ಅದರಿಂದಾಗಿ ಇಡೀ ಕೊಡವೂರು, ಕಲ್ಮಾಡಿಯ ಊರೇ ಹಾಳಾಗಿ ಹೋಗುತ್ತಿದೆ. ತೋಡಿಗೆ ಕೊಳಚೆ ಬಿಡಬಹುದು ಎಂದು ಕಾನೂನಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಧಿಕಾರಿಗಳು ಇದನ್ನು ನದಿಯ ಬದಲು “ತೋಡು’ ಎಂದು ಕರೆಯುತ್ತಿದ್ದಾರೆ. ನಮ್ಮ ಹೋರಾಟ ಮುಂದುವರೆಸುತ್ತೇವೆ.
ರಾಘವೇಂದ್ರ ರಾವ್‌ ಕೊಡವೂರು, ಇಂದ್ರಾಣಿ ಮುಕ್ತಿ ಆಂದೋಲನ ಸಮಿತಿ

ತೋಡು ಶುಚಿ
ಕಲ್ಮಾಡಿ ಭಾಗದ ಅನೇಕ ಬಾವಿಗಳು ಹಾಳಾಗಿರುವುದು ನನ್ನ ಗಮನಕ್ಕೂ ಬಂದಿದೆ. ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಕೊಳಚೆ ನೀರು ಬಿಡುವುದು ತೋಡು ಹಾಳಾಗಲು ಕಾರಣವಲ್ಲ. ಅಲ್ಲಿ ನೀರನ್ನು ಶುದ್ಧೀಕರಿಸಿಯೇ ಬಿಡಲಾಗುತ್ತಿದೆ. ವಿದ್ಯುತ್‌ ಇಲ್ಲದಿದ್ದರೆ ಮಾತ್ರ ಸ್ವಲ್ಪ ಸಮಸ್ಯೆಯಾಗುತ್ತದೆ. ಹಿಂದಿನ ಒಳಚರಂಡಿ ಅಸಮರ್ಪಕವಾಗಿವೆ. ಕೆಲವರು ನೇರವಾಗಿ ನದಿಗೆ ಮನೆಯ ಕೊಳಚೆ ನೀರು ಹರಿಸುತ್ತಿದ್ದರು. ಅವುಗಳನ್ನು ಗುರುತಿಸಿ ಸಂಪರ್ಕ ತೆಗೆಸಿದ್ದೇವೆ. ತೋಡು ಶುಚಿಗೆ ಕೆಲಸ ನಡೆಯುತ್ತಿದೆ. ಶಂಕರನಾರಾಯಣ ತೀರ್ಥ ತೀರ್ಥ ಕೆರೆ ಅಭಿವೃದ್ಧಿಗೆ 25 ಲ.ರೂ. ಮಂಜೂರಾಗಿದೆ.
ಮೀನಾಕ್ಷಿ ಮಾಧವ ಬನ್ನಂಜೆ, ಅಧ್ಯಕ್ಷರು, ಉಡುಪಿ ನಗರಸಭೆ

ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next