ಚಿಕ್ಕಬಳ್ಳಾಪುರ: ಬೆಳಗ್ಗೆ ನಿದ್ದೆಯಿಂದ ಎದ್ದರೆ ಮನೆ ಮುಂಭಾಗ ಕೊಳಚೆ ನೀರನ್ನು ನೋಡಬೇಕು. ರಾತ್ರಿಯಾದರೆ ಮಲಗಲು ಸೊಳ್ಳೆಗಳ ಕಾಟ..ಕೊಳಚೆನೀರಿನಲ್ಲಿ ಹೋಗುವಾಗ ಬಹಳಷ್ಟು ವಾಹನ ಸವಾರರು ಬಿದ್ದು ಎದ್ದಿದ್ದಾರೆ. ಒಮ್ಮೊಮ್ಮೆ ಮನೆಗಳಿಂದ ಹೊರ ಬರಲಾಗದಂತಹ ದುರ್ವಾಸನೆ ಆವರಿಸುವುದು ಇಲ್ಲಿ ಮಾಮೂಲಿ. ಇದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಸರ್ಕಾರಿ ವಸತಿ ಗೃಹಕ್ಕೆ ಕೂಗಳತೆ ದೂರದ ಭಗತ್‌ಸಿಂಗ್ ನಗರದ ನಿವಾಸಿಗಳ ನಿತ್ಯದ ಗೋಳು.
ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಗ್ಯಾರೇಜ್‌ಗೆ ಸಮೀಪದಲ್ಲಿರುವ ಭಗತ್‌ಸಿಂಗ್ ನಗರ ಮೊದಲೇ ಮೂಲ ಸೌಕರ್ಯಗಳ ಕೊರತೆಯಿಂದ ನರಳುತ್ತಿದೆ. ಆದರೆ, ಒಳಚರಂಡಿ ಅವ್ಯವಸ್ಥೆ ನಗರದ ನಿವಾಸಿಗಳ ನೆಮ್ಮದಿ ಕೆಡಿಸಿದೆ. ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ಒಳಚರಂಡಿ ಈಗಜಿಲ್ಲಾ ಕೇಂದ್ರ ಬೆಳೆದಂತೆ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದು, ಮ್ಯಾನ್‌ಹೋಲ್‌ಗಳ ಕಳಪೆ ಕಾಮಗಾರಿಯಿಂದ ಒಂದಡೆ ಕೊಳಚೆ ನೀರು ಉಕ್ಕಿ ರಸ್ತೆಗಳಿಗೆ ಹರಿದರೆ ಮತ್ತೂಂದಡೆ ಕೊಳಚೆ ನೀರು ರಸ್ತೆಗಳಲ್ಲಿ ಕೆರೆಯಂತೆ ಜಲಾವೃತಗೊಂಡು ವಾಹನ ಸವಾರರ ಹಾಗೂ ಪಾದಚಾರಿಗಳ ಪ್ರಾಣ ಹಿಂಡುತ್ತಿದೆ.
ಸಮಸ್ಯೆ ಸೃಷ್ಟಿ: ಭಗತ್‌ಸಿಂಗ್ ನಗರದ ಮುಖ್ಯ ರಸ್ತೆಯಲ್ಲಿ ಪ್ರಶಾಂತ ನಗರಕ್ಕೆ ಹೋಗುವ ರಸ್ತೆ ಆರಂಭದಲ್ಲಿ ಒಳಚರಂಡಿ ಮ್ಯಾನ್‌ಹೋಲ್ ದುಸ್ಥಿತಿಗೆ ತಲುಪಿ ತಿಂಗಳುಗಳೇ ಉರುಳಿದರೂ ಸ್ಥಳೀಯ ನಗರಸಭೆ ಅಪ ರೂಪಕ್ಕೆ ಒಮ್ಮೆ ಬಂದು ರಿಪೇರಿ ಮಾಡಿ ಕೈತೊಳೆದುಕೊಳ್ಳುತ್ತಿದೆ. ಹೀಗಾಗಿ ಒಳಚರಂಡಿ ಕೊಳಚೆ ನೀರು ಭಗತ್‌ಸಿಂಗ್ ನಗರ ನಿವಾಸಿಗಳ ನಿದ್ದೆಗೆಡಿಸುತ್ತಿದೆ.
ಸೊಳ್ಳೆಗಳ ಕಾಟವಿದೆ : ಒಳಚರಂಡಿಯಿಂದ ಹೊರ ಬರುವ ನೀರು ನೇರವಾಗಿ ಚರಂಡಿಗೆ ಹೋಗುತ್ತಿರುವುದರಿಂದ ಸೊಳ್ಳೆ ಗಳ ಕಾಟ ವಿಪರೀತವಾಗಿದೆ. ಇಲ್ಲಿ ಜನ ರಾತ್ರಿಯಾದರೆ ನೆಮ್ಮದಿಯಿಂದ ನಿದ್ದೆ ಮಾಡದ ಸ್ಥಿತಿ ಇದೆ. ಈ ರಸ್ತೆಯಿಂದ ಪ್ರಶಾಂತ ನಗರ, ಸದಾಶಿವ ನಗರಕ್ಕೆ ತೆರಳಬೇಕು. ಜೊತೆಗೆ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಬೇರೆ ಇದೆ. ಸರ್ಕಾರಿ ಪ್ರೌಢ ಶಾಲೆ ಇದರ ಮುಂದಿದೆ. ಇಲ್ಲಿಂದಲೇ ಮುಸ್ಟೂರು, ಕೇತನಹಳ್ಳಿ, ಎಸ್.ಗೊಲ್ಲಹಳ್ಳಿ, ಅವಲಗುರ್ಕಿಗೆ ತೆರಳಬೇಕು. ಆದರೆ, ಒಳಚರಂಡಿ ಅವ್ಯವಸ್ಥೆಯಿಂದ ಕೂಡಿರುವ ಪರಿಣಾಮ ಸ್ಥಳೀಯ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.
-ಕಾಗತಿ ನಾಗರಾಜಪ್ಪ