Advertisement

ಚರಂಡಿ ಹೂಳು ತೆಗೆಯುವ ಕಾರ್ಯ ಇನ್ನೂ ಆಗಿಲ್ಲ

11:06 PM Jun 07, 2020 | Sriram |

ಮಲ್ಪೆ: ಮಳೆಗಾಲ ಸಮೀಪಿಸುತ್ತಿದ್ದರೂ ನಗರಸಭೆ ಕೊಡವೂರು, ಮೂಡುಬೆಟ್ಟು ವಾರ್ಡ್‌ಗಳಲ್ಲೂ ಚರಂಡಿ ಹೂಳನ್ನು ತೆರವುಗೊಳಿಸುವ ಕಾರ್ಯ ನಡೆಸಿಲ್ಲ . ಇದು ಪ್ರತಿ ವರ್ಷ ಮರುಕಳಿಸುವ ಸಮಸ್ಯೆಯಾಗಿದ್ದರೂ, ಈ ಬಾರಿ ಮಾತ್ರ ಇದುವರೆಗೂ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿಲ್ಲ .

Advertisement

ಕೊಡವೂರು ವಾರ್ಡ್‌ನಲ್ಲಿ ಪ್ರಮುಖವಾಗಿ ಕೃಷಿ ಭೂಮಿಯಿಂದ ನೀರು ಹರಿದು ಹೋಗಲು ಯಾವ ವ್ಯವಸ್ಥೆಯೂ ಆಗಿಲ್ಲ. ಶೇ. 60ರಷ್ಟು ಚರಂಡಿ ಹೂಳೆತ್ತುವ ಕೆಲಸ ಆಗಬೇಕಾಗಿದೆ. ಜೋಡುಕರೆಯಿಂದ ಶೇಣರ ಜಿಡ್ಡದ ಸಂಪರ್ಕದ ಚರಂಡಿ, ಕೊಡವೂರು ಶಂಕರನಾರಾಯಣ ತೀರ್ಥ ಕೆರೆಯಿಂದ ಕಾನಂಗಿಬೈಲು ರಸ್ತೆ ಚರಂಡಿಯಲ್ಲಿ ಹೂಳು ತುಂಬಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ನಗರಸಭೆ ಜೆಸಿಬಿಯಿಂದ 5 ದಿನಗಳ ಕಾಲ ನಿರಂತರ ಕೆಲಸ ನಡೆಸಿತ್ತು. ಈ ಸಲ ಒಂದು ದಿನ ಮಾತ್ರ ಕೆಲಸ ನಡೆದಿದೆ. ಈ ಬಾರಿ ಕೊಡವೂರು ವಾರ್ಡ್‌ ಅಭಿವೃದ್ಧಿ ಸಮಿತಿ ವತಿಯಿಂದ ಜೆಸಿಬಿ ತರಿಸಿ 7,500 ಬಾಡಿಗೆ ನೀಡಿ ಮಾರಿಗುಡಿ ಬೈಲು, ವಾಸುಕೀನಗರದ ಚರಂಡಿ ಹೂಳೆತ್ತುವ ಕೆಲಸ ಮಾಡಲಾಗಿದೆ ಎಂದು ನಗರಸಭೆ ಸದಸ್ಯ ವಿಜಯ ಕೊಡವೂರು ತಿಳಿಸಿದ್ದಾರೆ.

ರೈತರ ಸಮಸ್ಯೆ ಕೇಳುವವರಿಲ್ಲ
ಕೊಡವೂರು ವಾರ್ಡ್‌ನಲ್ಲಿ 177ಕ್ಕೂ ಅಧಿಕ ಮಂದಿ ರೈತರಿದ್ದು ಪ್ರಸ್ತುತ 18 ಮಂದಿ ಮಾತ್ರ ಕೃಷಿ ಕಾಯಕ ನಡೆಸುತ್ತಿದ್ದಾರೆ. ಇಲ್ಲಿನ ಬಹುತೇಕ ಕೃಷಿ ಭೂಮಿಯ ನೀರು ಹರಿದು ಹೋಗಲು ಯಾವ ವ್ಯವಸ್ಥೆಯೂ ಇಲ್ಲ. “ಭೂಮಿ ಹಡಿಲು ಬಿಡಬೇಡಿ, ಒಂದು ವೇಳೆ ಕೃಷಿ ಮಾಡದಿದ್ದರೆ ಭೂಮಿಯನ್ನು ವಾಪಸು ಪಡೆಯುತ್ತೇವೆ’ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರೂ ಕೃಷಿ ಮಾಡುವ ಪರಿಸರ ಮ್ರಾ ಒದಗಿಸಿಲ್ಲ. ಜಿಲ್ಲಾಧಿಕಾರಿಗಳು ಒಂದು ದಿನವೂ ನಮ್ಮನ್ನು ಕರೆದು ನಿಮ್ಮ ಸಮಸ್ಯೆ ಏನು ಎಂದು ಇದುವರೆಗೂ ಕೇಳಿಲ್ಲ ಎಂದು ಕೃಷಿಕರು ಆರೋಪಿಸುತ್ತಾರೆ.

ಈ ಸಲ ಮಳೆಗಾಲ ಮುಗಿದ ಬಳಿಕ ಕಿಂಡಿಅಣೆಕಟ್ಟಿಗೆ ಕಟ್ಟ ಹಾಕಿ ಹಲವಾರು ಎಕ್ರೆ ಪ್ರದೇಶಗಳ‌ಲ್ಲಿ ತರಕಾರಿ ಬೆಳೆ ಬೆಳೆಸಲು ರೈತರು ನಿರ್ಧರಿಸಿದ್ದಾರೆ. ನಗರಸಭೆಯ ಅಧಿಕಾರಿಗಳು ಯಾವ ಕಾರಣಕ್ಕೂ ಅಣೆಕಟ್ಟನ್ನು ತೆರವುಗೊಳಿಸ ಬಾರದು ಎಂದಿದ್ದಾರೆ. ಸರಕಾರ ಒಂದು ಕಡೆ ಕೃಷಿಮಾಡಿ ಎಂದರೆ,ಮತ್ತೊಂದೆಡೆ ಕೃಷಿಕರು ಅಣೆಕಟ್ಟಿಗೆ ಕಟ್ಟ ಹಾಕಿ ಕೃಷಿ ಮಾಡಿ ದರೆ ಕಟ್ಟ ತೆರವುಗೊಳಿಸುತ್ತಾರೆ ವಿಜಯ ಎಂದು ಕೊಡವೂರು ಆರೋಪಿಸಿದ್ದಾರೆ.

ಕೊಡವೂರು ವಾರ್ಡ್‌ ಗಡಿಭಾಗ ತೆಂಕನಿಡಿಯೂರು ಪಂಚಾಯತ್‌ ವ್ಯಾಪ್ತಿಯ ಸಾಯಿಬಾಬ ರಸ್ತೆ ಸಮೀಪ ಸರಕಾರಿ ತೋಡುಮುಚ್ಚಿ ಹೋಗಿದ್ದು ಅಲ್ಲಿ ಮನೆಗಳು ನಿರ್ಮಾಣವಾಗಿವೆ. ಇಲ್ಲಿ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲದೆ 10 ಎಕ್ರೆ ಕೃಷಿ ಭೂಮಿ ಹಡಿಲು ಬಿದ್ದಿದೆ. ಇಲ್ಲಿನ ನೀರು ಕೊಡವೂರು ವಾರ್ಡ್‌ಗೆ ಹರಿದು ಬರುತ್ತಿದೆ.

Advertisement

ಮರಮಟ್ಟು ತೆರವಾಗಿಲ್ಲ
ಕೊಡವೂರಿನಿಂದ ಮೂಡುಬೆಟ್ಟುವಿಗೆ ಸಂಪರ್ಕದ ಸೇತುವೆ ಕೆಳಗೆ ಮರಗಳು ಸಿಕ್ಕಿಹಾಕಿಕೊಳ್ಳುತ್ತವೆ. ಅವುಗಳನ್ನು ತತ್‌ಕ್ಷಣ ತೆರವುಗೊಳಿಸದಿದ್ದಲ್ಲಿ ಸೇತುವೆಗೆ ಹಾನಿಯಾಗುವು ದಲ್ಲದೆ ಮಳೆನೀರು ಹರಿದು ಹೋಗಲು ಸಮಸ್ಯೆಯಾಗ ಲಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ತಿಳಿಸಿದರೆ ಇನ್ನೂ ಟೆಂಡರ್‌ ಆಗಿಲ್ಲ, ಮಾಡುತ್ತೇವೆ ಎಂದು ಸಬೂಬು ನೀಡುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಕೊಡವೂರು ಸಾಲ್ಮರದಲ್ಲಿ ಕೊಂಬೆಗಳು ತುಂಡಾಗಿ ಬಿದ್ದು ಸಮಸ್ಯೆಯಾಗಿದೆ. ಕೊಡವೂರು ಸರ್ಕಲ್‌ನಲ್ಲೂ ಅಪಾಯದ ಮರವಿದೆ. ಬಾಚನಬೈಲು ಪಾಳೆಕಟ್ಟೆಯಲ್ಲಿ ಮರಗಳು ಬಿದ್ದು ವಿದ್ಯುತ್‌ ಸಮಸ್ಯೆ ಉಂಟಾಗುತ್ತಿದೆ. ಕಾನಂಗಿ ಮಾರಿಗುಡಿಯ ಟ್ರಾನ್ಸ್‌ ಫಾರ್ಮರ್‌ನಲ್ಲಿ ಸಮಸ್ಯೆಯಿರುವುದರಿಂದ ಆಗಾಗ ವಿದ್ಯುತ್‌ ಕೈ ಕೊಡುತ್ತಿದೆ.

ಮೂಡುಬೆಟ್ಟು ವಾರ್ಡ್‌ನಲ್ಲಿ ಕೃತಕ ನೆರೆ
ವಿಶ್ವಕರ್ಮ ಸಭಾಭವನದಿಂದ 8, 9ನೇ ಅಡ್ಡರಸ್ತೆ ಸಂಧಿಸುವಲ್ಲಿ ಚರಂಡಿಯಲ್ಲಿ ಮಳೆನೀರಿನ ಜತೆ ಹಲವು ಮನೆಗಳ ಕೊಳಚೆ ನೀರು ನಿಂತು ಕೃತಕ ನೆರೆ ಉಂಟಾಗುತ್ತಿದೆ. ಇಲ್ಲಿನ ಮನೆಗಳಿಗೆ ಎರಡು ಮೂರು ಬಾರಿ ನೋಟಿಸ್‌ ಜಾರಿ ಮಾಡಲಾಗಿದೆ. ಇಂದ್ರಾಣಿ ನದಿಯ ಹೂಳೆತ್ತುವ ಕೆಲಸ ಉಡುಪಿ ಮಠದಬೆಟ್ಟುವಿನಿಂದ ಕೊಡವೂರು ಕಂಬ್ಲಿಕಟ್ಟದ ವರೆಗೆ ಮಾತ್ರ ನಡೆದು ಅರ್ಧಕ್ಕೆ ನಿಂತಿದ್ದು, ಪರಿಸರದಲ್ಲಿ ಕೃತಕ ನೆರೆ ಭೀತಿ ಉಂಟಾಗುವ ಸಾಧ್ಯತೆ ಇದೆ. ಆದಿವುಡುಪಿ -ಮೂಡುಬೆಟ್ಟು ಮುಖ್ಯರಸ್ತೆಯ ಚರಂಡಿಯಲ್ಲಿ ಹೂಳು ತುಂಬಿ ಗಿಡಗಂಟಿಗಳು ಬೆಳೆದಿವೆ. ಇನ್ನುಳಿದಂತೆ ಮಧ್ವನಗರ, ಚಂದ್ರಕಟ್ಟ, ಚೆನ್ನಂಗಡಿ, ಮುಖ್ಯಪ್ರಾಣ ರಸ್ತೆ, ಮಂಡೆ ಚಾವಡಿ, ಮೂಡುತೋಟ, ಎಸ್‌ಸಿ ಕಾಲನಿ ಭಾಗದ ಚರಂಡಿಯಲ್ಲಿ ಹೂಳೆತ್ತುವ ಕೆಲಸ ಆಗಬೇಕಿದೆ.

ಕೃತಕ ನೆರೆ ಭೀತಿ
ವಾರ್ಡ್‌ನ ಕೆಲವು ಕಡೆ ಗಂಭೀರ ಸಮಸ್ಯೆಗಳಿವೆ, ಕೃತಕ ನೆರೆಯ ಭೀತಿಯೂ ಇದೆ. ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಅಧಿಕಾರಿಗಳು ಕೋವಿಡ್-19 , ಕಾರ್ಮಿಕರ ಕೊರತೆಯ ಕಾರಣ ನೀಡುತ್ತಾರೆ. ಜನರ ಹಿತದೃಷ್ಟಿಯಿಂದ ಅಧಿಕಾರಿಗಳ ಮೇಲೆ ಸಾಧ್ಯವಾದಷ್ಟು ಒತ್ತಡವನ್ನು ಹೇರಿ ಕಾಮಗಾರಿಯನ್ನು ನಡೆಸುವ ಪ್ರಯತ್ನ ಮಾಡಲಾಗುವುದು.
-ಶ್ರೀಶ ಕೊಡವೂರು,
ಮೂಡುಬೆಟ್ಟು ವಾರ್ಡ್‌ ಸದಸ್ಯ

ನಮ್ಮ ಸಮಸ್ಯೆ ಕೇಳುವವರಿಲ್ಲ
ನಗರಸಭೆ ಅಡಳಿತ ಜಿಲ್ಲಾಧಿಕಾರಿಗಳ ಕೈಯಲ್ಲಿದೆ. ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಸಭೆ ಕರೆದು ನಮ್ಮ ವಾರ್ಡ್‌ನ ಸಮಸ್ಯೆಯನ್ನು ಕೇಳಬೇಕಾಗಿತ್ತು. ಆದರೆ ಆಡಳಿತ, ಅಧಿಕಾರಿಗಳಾಗಲಿ ನಮ್ಮ ಸಮಸ್ಯೆ ಕೇಳುತ್ತಿಲ್ಲ. ಜನರಿಗೆ ಮಾತ್ರ ನಾವು ನಗರಸಭೆ ಸದಸ್ಯರಾಗಿದ್ದೇವೆ ಹೊರತು ಆಡಳಿತದ ಲೆಕ್ಕದಲ್ಲಿ ನಮಗೆ ಯಾವ ಅಧಿಕಾರವೂ ಇಲ್ಲ.
– ವಿಜಯ ಕೊಡವೂರು, ಕೊಡವೂರು ವಾರ್ಡ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next