ಗುರುಮಠಕಲ್: ಗಡಿ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ಊರು ಹಲವು ಸೌಲಭ್ಯಗಳಿಂದ ವಂಚಿತವಾಗಿರುವುದು ಒಂದು ಕಡೆಯಾದರೆ ಕನಿಷ್ಟ ರಸ್ತೆ ಮೇಲೆ ಹರಿಯುವ ನೀರನ್ನು ಬೇರೆ ಕಡೆ ಹೋಗಲು ವ್ಯವಸ್ಥೆ ಮಾಡದಷ್ಟು ಆಡಳಿತ ಜಿಡ್ಡುಗಟ್ಟಿದೆ.
ತಾಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಬಂಡ ಗ್ರಾಮದಲ್ಲಿ ರಸ್ತೆ ಮೇಲೆ ಹರಿಯುವ ಚರಂಡಿ ನೀರು ಹಲವು ರೋಗ, ರುಜಿಗಳಿಗೆ ರಹದಾರಿಯಾಗಿದೆ. ಕೊಳಚೆ ನೀರಿನ ಮೇಲೆಯೇ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಮಕ್ಕಳು, ವೃದ್ಧರನ್ನು ಎತ್ತಿಕೊಂಡು ದಾಟಿಸದಿದ್ದರೇ ಕೊಳಚೆಯಲ್ಲಿ ಬೀಳುವುದು ಸಾಮಾನ್ಯವಾಗಿದೆ. ಈ ರಸ್ತೆಯ ಹಾಗೂ ಚರಂಡಿಯನ್ನು ಸರಿಯಾಗಿ ನಿರ್ವಹಿಸಲು ಒಮ್ಮೆಯೂ ಆ ಭಾಗದ ಇಂಜಿನಿಯರ್‌ಗಳು ಗಡಿ ಗ್ರಾಮಕ್ಕೆ ಬಂದೇ ಇಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ರಸ್ತೆ ನಮಗೆ ಸಂಬಂಧಿಸಿಲ್ಲ ಎನ್ನುತ್ತಾರೆ. ಹಾಗಾದರೆ ಈ ರಸ್ತೆಯ ದುರಸ್ತಿ ಯಾರು ಮಾಡಿಸಬೇಕು? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಮಳೆ ಬಂತೆಂದರೆ ಮುಖ್ಯ ರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ಸದಾ ಹರಿಯುತ್ತಿದೆ. ಚರಂಡಿ ತುಂಬಿದ ನೀರು ಸುಲಭವಾಗಿ ಹೋಗುವಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಸಾರ್ವಜನಿಕರು ಬಳಸಿದ ನೀರು, ಬಚ್ಚಲು ನೀರು, ಕೊಚ್ಚೆ ನೀರಿನ ರೂಪತಾಳಿ ಮುಖ್ಯ ರಸ್ತೆ ಮೇಲೆ ನಿಂತು ಗಬ್ಬೆದ್ದು ನಾರುತ್ತಿದೆ. ರಸ್ತೆಯಲ್ಲಿ ಕೊಳಚೆ ನೀರು ಸದಾ ಹರಿಯುತ್ತಿದೆ. ಚರಂಡಿ ಸ್ವತ್ಛಗೊಳಿಸದೇ ಇರುವದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಗಿದೆಯಲ್ಲದೇ ಈ ರಸ್ತೆ ದಾಟಲು ಜನರು ಪರದಾಡುವ ಸ್ಥಿತಿ ಉಂಟಾಗಿದೆ.
ವಿದ್ಯಾರ್ಥಿಗಳ ಗೋಳಂತೂ ಹೇಳತೀರದು. ಚರಂಡಿ ನೀರಿನಲ್ಲಿಯೇ ನಡೆದು ಪಾಲಕರು ತಮ್ಮ ಮಕ್ಕಳನ್ನು ಎತ್ತಿಕೊಂಡು ಹೋಗಿ ರಸ್ತೆ ದಾಟಿಸುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಿ ಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರನ್ನು ನಿಲ್ಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಬೇಕು ಎಂದು ಬೋರಬಂಡ ಗ್ರಾಮದ ನಿವಾಸಿಗಳು ಆಗ್ರಹಿಸಿದ್ದಾರೆ.