ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮದ ಬಾಲೇಹೊಸೂರ ರಸ್ತೆಗೆ ಹೊಂದಿಕೊಂಡ 3 ಮತ್ತು 5ನೇ ವಾರ್ಡ್‌ನಲ್ಲಿ ಹರಿಯುವ ಚರಂಡಿ ನೀರಿಗೆ ಅಡ್ಡಲಾಗಿ ಸ್ಥಳೀಯರು ಹಾಕಿದ್ದ ಒಡ್ಡನ್ನು ಗ್ರಾಪಂನವರು ಪೊಲೀಸರ ಭದ್ರತೆಯಲ್ಲಿ ಶನಿವಾರ ತೆರವುಗೊಳಿಸಿದರು.
ಗ್ರಾಮದ ಉರ್ದು ಶಾಲೆಯಿಂದ ತಾಂಡಾವರೆಗಿನ ರಸ್ತೆ ಬದಿ ಹರಿಯುವ ಚರಂಡಿ ನೀರಿಗೆ ಸಮರ್ಪಕ ವ್ಯವಸ್ಥೆ ಇಲ್ಲದಿದ್ದರಿಂದ ಇಲ್ಲಿನ ನಿವಾಸಿಗರು ಅಲ್ಲಲ್ಲಿ ನೀರಿಗೆ ತಡೆ ಹಾಕಿದ್ದರು. ಇದರಿಂದ ಅನೇಕ ವರ್ಷಗಳಿಂದಲೂ ಈ ಪ್ರದೇಶದಲ್ಲಿನ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿರುವುದರಿಂದ ಇಡೀ ಪ್ರದೇಶ ಕೊಳಚೆಮಯವಾಗಿತ್ತು.
ಈ ಕುರಿತು ಪತ್ರಿಕೆಗಳು ಸಾಕಷ್ಟು ಬಾರಿ ವರದಿ ಮಾಡಿದ್ದರಿಂದ ಎಚ್ಚೆತ್ತ ಗ್ರಾಪಂನವರು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿತ್ತು.
ಅದರನ್ವಯ ಶನಿವಾರ ಗ್ರಾಪಂನವರು ಪೊಲೀಸ್ ಇಲಾಖೆ ಸಹಕಾರದಲ್ಲಿ ಚರಂಡಿಗೆ ಅಡ್ಡಲಾಗಿ ಹಾಕಿದ್ದ ತಡೆಯನ್ನು ತೆರವುಗೊಳಿಸಲು ಮುಂದಾಗಿ ಜನರಿಗೆ ಎಲ್ಲ ರೀತಿಯಲ್ಲಿ ತಿಳಿ ಹೇಳಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ 3ಮತ್ತು 5ನೇ ವಾರ್ಡ್‌ನ ನಿವಾಸಿಗರು ಚರಂಡಿಗೆ ಅಡ್ಡಲಾಗಿ ಹಾಕಿರುವ ತಡೆ ತೆರವುಗೊಳಿಸಲು ನಮ್ಮದೇನೂ ತಕರಾರಿಲ್ಲ. ಆದರೆ ಈ ಮೂಲಕ ಹಾದು ಹೋಗುವ ಚರಂಡಿ ನೀರು ಎಲ್ಲಿಯೂ ನಿಲ್ಲದಂತೆ ಸಮರ್ಪಕ ವ್ಯವಸ್ಥೆ ಮಾಡಬೇಕೆಂದು ಬಿಗಿಪಟ್ಟು ಹಿಡಿದರು.
ಆಗ ಗ್ರಾಪಂ ಅಧ್ಯಕ್ಷ ಶಶಿಕಾಂತ ದಾಸರ, ಸದಸ್ಯರಾದ ಶರಣಪ್ಪ ಇಚ್ಚಂಗಿ, ವಿಜಯ ಹಳ್ಳಿ ಮತ್ತಿತರರು ನೆರೆದಿದ್ದ ಜನತೆಗೆ, ಸದ್ಯ ಹಾಕಿರುವ ತಡೆ ತೆರವುಗೊಳಿಸಿ ಅದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳೊಣ. ಸದ್ಯ ಅಡ್ಡಲಾಗಿ ಹಾಕಿರುವ ತಡೆ ತೆರವುಗೊಳಿಸಲು ಸಹಕರಿಸಿ ಎಂದರು. ಆದರೆ ತಾಂಡಾ ನಿವಾಸಿಗರು ಇದಕ್ಕೆ ಒಪ್ಪಲಿಲ್ಲ. ಆಗ ಪಿಡಿಒ ಎಂ.ಎನ್. ಮಲ್ಲೂರ ತಹಶೀಲ್ದಾರರಿಗೆ ವಿಷಯ ತಲುಪಿಸಿದಾಗ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರರು ಮೊದಲು ಭೂ ಮಾಪನ ಇಲಾಖೆಯಿಂದ ಈ ಮೊದಲಿನಿಂದಲೂ ಸೈಸರ್ಗಿಕವಾಗಿ ನೀರು ಹರಿದು ಹೋಗುವ ಪ್ರದೇಶ ಗುರುತಿಸಿ ಸಮೀಕ್ಷೆ ಮಾಡಿಸಬೇಕು. ಬಳಿಕ ಇಲ್ಲಿನ ಜನರಿಗೆ ತೊಂದರೆಯಾಗದಂತೆ ಶಾಶ್ವತ ಪರಿಹಾರಕೊಳ್ಳಲು ಗ್ರಾಪಂ ನವರು ಇಲಾಖೆಗೆ ಪತ್ರ ಬರೆಯುವಂತೆ ಸೂಚಿಸಿದರು. ಮತ್ತು ಎಲ್ಲರೂ ಸೇರಿ ಎರಡ್ಮೂರು ದಿನಗಳಲ್ಲಿ ಸಮಸ್ಯೆಗೊಂದು ಪರಿಹಾರಕ್ಕೆ ಕ್ರಮ ಕೈಗೊಳ್ಳೊಣ ಎಂದು ಭರವಸೆ ನೀಡಿದರು.
ಗ್ರಾಪಂ ಬಸಣ್ಣ ಇಟಗಿ, ವಿರೂಪಾಕ್ಷಪ್ಪ ಶಿರನಹಳ್ಳಿ, ಸೋಮಶೇಖರ ಲಮಾಣಿ, ಬಾಬಣ್ಣ ಲಮಾಣಿ, ಗ್ರಾಮದ ಹಿರಿಯರು, ಪೊಲೀಸ್ ಮತ್ತು ಗ್ರಾಪಂ ಸಿಬ್ಬಂದಿಗಳಿದ್ದರು.