Advertisement

ಕೊಳಚೆ ನೀರಿನ ದುರ್ನಾತ ತಾಳದೇ ಅಂಗಡಿ ಬಂದ್‌

02:21 PM Apr 25, 2022 | Team Udayavani |

ನಂಜನಗೂಡು: ಕೊಳಚೆ ನೀರಿನ ದುರ್ನಾತ ತಡೆಯ ಲಾಗದೇ ನಗರದಲ್ಲಿನ ಖಾಸಗಿ ಬಸ್‌ ನಿಲ್ದಾಣದ 15ಕ್ಕೂ ಹೆಚ್ಚು ಅಂಗಡಿಗಳು ವಾರದಿಂದ ಬಾಗಿಲು ಮುಚ್ಚಿವೆ.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಇರುವ ನಿಲ್ದಾಣವು ಬೆಳಗ್ಗಿನಿಂದ ಸಂಜೆವರೆಗೂ ಜನಜಂಗುಳಿಯಿಂದ ಕೂಡಿರುತ್ತಿದೆ. ಇಲ್ಲಿಗೆ ದಿನಕ್ಕೆ 50ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ತಾಲೂಕಿನ ಕೌಲಂದೇ ಹೋಬಳಿ, ಬಿಳಗರೆ, ತಿ.ನರಸೀಪುರ, ಕೊಳ್ಳೇಗಾಲ, ಬಿಳಿಗಿರಿರಂಗನಬೆಟ್ಟ, ಮಹದೇಶ್ವರಬೆಟ್ಟ, ಚಾಮರಾಜ ನಗರದತ್ತ ಸಂಚರಿಸುತ್ತವೆ. ನೂರಾರು ಪ್ರಯಾಣಿಕರು, ಪ್ರವಾಸಿಗರು ಇಲ್ಲಿಯೇ ಬಸ್‌ ಹತ್ತಲು ಬರುತ್ತಾರೆ.

ಮಳೆ ನೀರಿನ ಜೊತೆ ಕೊಳಚೆ: ಸದಾ ಜನರಿಂದ ಕೂಡಿರುವ ಪ್ರದೇಶದಲ್ಲಿ ಕಳೆದ ವಾರ ಮಳೆ ಬಂದಾಗ ಶೇಖರಣೆ ಆದ ನೀರಿಗೆ ಕೊಳಚೆ ನೀರು, ಕಸ, ಮರದ ಎಲೆ ಸೇರಿ ದುರ್ವಾಸನೆ ಬೀರುತ್ತಿದೆ. ಇದನ್ನು ತಾಳಲಾರದೇ ಇಲ್ಲಿದ್ದ ಗೂಡಂಗಡಿಗಳು ಕೆಲ ದಿನಗಳಿಂದ ಬಾಗಿಲು ಹಾಕಿವೆ. ಸುತ್ತಲಿನ ಜನರು ಮೂಗು ಮುಚ್ಚಿಕೊಂಡು ಸಂಚಾರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮಡುಗಟ್ಟಿ ನಿಂತಿರುವ ಕೊಳಚೆ ನೀರು: ನಿಲ್ದಾಣವು ನಗರಸಭೆಗೆ ಸೇರಿದೆ. ಟೆಂಡರ್‌ದಾರರು ಇಲ್ಲಿನ ಗೂಡಂ ಗಡಿ ಮಾಲಿಕರಿಂದ ತೆರಿಗೆ ವಸೂಲು ಮಾಡುತ್ತಾರೆ. ಖಾಸಗಿ ಬಸ್‌ಗಳಿಂದಲೂ ನಗರಸಭೆಗೆ ವಾರ್ಷಿಕ ಲಕ್ಷಾಂ ತರ ರೂ. ವರಮಾನವಿದೆ. ಆದರೂ, ಮಡುಗಟ್ಟಿ ನಿಂತಿರುವ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ.

ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ: ಇಲ್ಲಿನ ದುರ್ನಾತ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ತಾವು ಈಗಾಗಲೇ ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿರುವುದಾಗಿ ಈ ಪ್ರದೇಶದ ನಗರಸಭಾ ಸದಸ್ಯೆ ವಸಂತ ನುಡಿದರು.

Advertisement

ಶೀಘ್ರದಲ್ಲೇ ಕೊಳಚೆ ನೀರು ಹೊರಹೋಗುವಂತೆ ಮಾಡಲಾಗುವದು. ಅಲ್ಲಿಂದ ಮುಂದಿನ ಚರಂಡಿವರಿಗೆ ಕೊಳವೆ ಜೋಡಿಸಿ ದುರ್ನಾತ ತಪ್ಪಿಸಲಾಗುವುದು. – ಶ್ರೀನಿವಾಸ, ಎಇ ನಗರಸಭೆ.

ಮಳೆ ಬಂದರೆ ಸಾಕು ರೈಲ್ವೆ ನಿಲ್ದಾಣ ದ ಕೊಳಚೆ ನೀರು ಇಲ್ಲಿಗೆ ಬಂದು ಸೇರುತ್ತದೆ. ನಾವು ಸಹ ಸಾಕಷ್ಟು ಬಾರಿ ಕೊಳಚೆ ನೀರು ಹೊರಹಾಕುವ ಕೆಲಸ ಮಾಡಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ರೂಪಿಸಬೇಕಿದೆ. ರೈಲ್ವೆ ಇಲಾಖೆಯವರ ಅಸಹಕಾರದಿಂದ ವಿಳಂಬವಾಗುತ್ತಿದೆ. – ಮೈತ್ರಿದೇವಿ, ನಗರಸಭೆ ಆರೋಗ್ಯ ವಿಭಾಗಾಧಿಕಾರಿ.

ನಗರಸಭೆ ಅಧಿಕಾರಿಗಳು ಐದು ನಿಮಿಷ ನಿಲ್ದಾಣದಲ್ಲಿ ನಿಂತರೆ ಇಲ್ಲಿನ ಕಷ್ಟ ಏನೆಂಬುದು ಅವರಿಗೆ ತಿಳಿಯುತ್ತದೆ. ದುರ್ನಾತ ತಾಳಲಾರದೇ ಅಂಗಡಿಗಳನ್ನು ಬಂದ್‌ ಮಾಡಿದ್ದೇವೆ. ಇದರಿಂದ ನಮಗಷ್ಟೇ ಅಲ್ಲ, ಪ್ರಯಾಣಿಕರಿಗೂ ತೊಂದರೆ ಆಗಿದೆ. -ಪುಟ್ಟಮಂಚಯ್ಯ, ಗೂಡಂಗಡಿ ಮಾಲಿಕ.

ನಗರಸಭೆಗೆ ವಾರ್ಷಿಕವಾಗಿ 58,000 ರೂ. ಬಸ್‌ ಕಂದಾಯ ಪಾವತಿಸುತ್ತೇವೆ. ಪ್ರತಿ ದಿನ ನೂರಾರು ಪ್ರಯಾಣಿಕರು ಇಲ್ಲಿ ಬಂದು ಹೋಗುತ್ತಾರೆ. ಈ ಖಾಸಗಿ ಬಸ್‌ ನಿಲ್ದಾಣದ ಅವ್ಯವಸ್ಥೆ ಹೇಳತೀರದು. ಇಲ್ಲಿನ ದುರ್ನಾತದ ಬಗ್ಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. -ಪುಟ್ಟಮಾದಯ್ಯ, ಅಧ್ಯಕ್ಷ, ಖಾಸಗಿ ಬಸ್‌ಗಳ ಏಜೆಂಟರ ಸಂಘ.

 

-ಶ್ರೀಧರ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next