Advertisement

ಜಿಲ್ಲೆಯಲ್ಲಿ ವೈದ್ಯರ ತೀವ್ರ ಕೊರತೆ

02:13 PM Nov 14, 2022 | Team Udayavani |

ನೆಲಮಂಗಲ: ಸರ್ಕಾರ ಹತ್ತು, ಹತ್ತು ವೈದ್ಯರನ್ನು ಕೊಟ್ಟಿದ್ದರೆ ವೈದ್ಯರ ಕೊರತೆ ಇಲ್ಲದಂತೆ ನಿಯೋಜನೆ ಮಾಡಬಹುದಿತ್ತು ಎಂಬ ಡಿಎಚ್‌ಒ ಡಾ.ವಿಜಯೇಂದ್ರರ ಹೇಳಿಕೆಗಳಿಂದ ಮೊದಲಕೋಟೆ ಆಸ್ಪತ್ರೆ ಯಲ್ಲಿ ರೋಗಿಗಳು ದಿನನಿತ್ಯ ನರಳಾಡುವ ಸ್ಥಿತಿ ನಿರ್ಮಾಣ ಆಗಿದೆ.

Advertisement

ಆರೋಗ್ಯ ಸಚಿವ ಡಾ.ಸುಧಾಕರ್‌ ಅವರ ಉಸ್ತುವಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಿನೇ ದಿನೆ ವೈದ್ಯರ ಕೊರತೆ ಹೆಚ್ಚಾಗುತ್ತಿದ್ದು, ತಾಲೂಕಿನ ಮೊದಲಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸ್ವಯಂಘೋಷಿತ ರಜೆಗಳಿಂದ ರೋಗಿಗಳು ಪರದಾಡುವಂತಾಗಿದೆ.

ಮೊದಲಕೋಟೆಯಲ್ಲಿ ವೈದ್ಯರಾಗಿ ಕೆಲಸ ಮಾಡುವ ಡಾ.ಅರುಂಧತಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಾರದಿರುವುದು, ವಾರದ ನಾಲ್ಕೈದು ದಿನ ಸ್ವಯಂಘೋಷಿತ ರಜೆ ಮಾಡಿ ಆಸ್ಪತ್ರೆ ಬಂದ್‌ ಮಾಡುವುದು ಸೇರಿದಂತೆ ಅನೇಕ ಆರೋಪಗಳಿದ್ದರೂ, ಕ್ರಮಕೈಗೊಳ್ಳುವುದಾಗಿಲಿ, ವೈದ್ಯರ ಬದಲಾವಣೆ ಮಾಡುವುದಾಗಲಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಹಾಗೂ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಟ್ಟಲು ಮುಜುಗರ: ಹಳ್ಳಿ ಜನರು ಚಿಕಿತ್ಸೆಗೆ ಬಂದರೆ ಕೈ ಹಿಡಿದು ನೋಡುವುದಾಗಲಿ, ಸ್ಟೆತೋಸ್ಕೋಪ್‌ ನಿಂದ ರೋಗಿಗಳನ್ನು ಚೆಕ್‌ ಮಾಡುವುದಾಗಲಿ ಮಾಡ ದೇ ಅಮಾನವೀಯತೆ ತೋರಿ ಮುಟ್ಟಲು ಅಸಹ್ಯ ಪಡುತ್ತಾರೆ. ಡಾ. ಅರುಂಧತಿಯವರು ದೂರದಲ್ಲಿಯೇ ರೋಗಿಗಳನ್ನು ನಿಲ್ಲಿಸಿ ನಿಮಗೆ ಏನಾಗಿದೆ ಎಂದು ಕೇಳಿ ಮಾತ್ರೆ ಬರೆದು ಕಳುಹಿಸುವ ಪರಿಪಾಠ ಮಾಡಿಕೊಂಡಿದ್ದಾರೆ. ನಾವೇನು ಮನುಷ್ಯರಲ್ಲವೇ, ವೈದ್ಯರು ದೇವರಂತೆ ಆಸ್ಪತ್ರೆಗೆ ಬಂದರೆ ನಮ್ಮನ್ನು ಮೃಗಗಳಂತೆ ನೋಡುವ ವೈದ್ಯರು ನಮಗೆ ಬೇಡ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆರೋಗ್ಯ ಸಚಿವರ ಕ್ಷೇತ್ರ: ಆರೋಗ್ಯ ಸಚಿವ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಸುಧಾಕರ್‌ ಕ್ಷೇತ್ರದಲ್ಲೇ ವೈದ್ಯರ ಕೊರತೆ ಇರುವ ಬಗ್ಗೆ ಡಿಎಚ್‌ಒ ವಿಜಯೇಂದ್ರರವರ ಹೇಳಿಕೆ ನಿಜಕ್ಕೂ ದುರಂತವೇ ಸರಿ. ಸರ್ಕಾರ ನಮಗೆ ಹತ್ತು, ಹತ್ತು ಡಾಕ್ಟರ್‌ ಕೊಟ್ಟಿದ್ದರೆ ಹಾಕಬಹುದಿತ್ತು. ಎಲ್ಲಾ ಆಸ್ಪತ್ರೆಗಳಲ್ಲಿ ಒಬ್ಬರೇ ವೈದ್ಯರಿರುವುದು, ಮೊದಲಕೋಟೆ ಆಸ್ಪತ್ರೆ ವೈದ್ಯರ ಮೇಲೆ ದೂರು ಬಂದಿದೆ. ತನಿಖೆ ಮಾಡಿದ್ದೇವೆ ಸತ್ಯ ಅನಿಸಿದೆ. ಸರಿಪಡಿಸುತ್ತೇವೆ ಬಿಡಿ ಎಂದು ಹೇಳುವ ಮೂಲಕ ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ವಿಜಯೇಂದ್ರ ವ್ಯಕ್ತಪಡಿಸಿರುವುದು ವಿಪರ್ಯಾಸವೇ ಸರಿ.

Advertisement

ಟಿಎಚ್‌ಒ ಸೇವೆ: ವೈದ್ಯರು ಬರುತ್ತಿಲ್ಲ ಎಂಬ ರೋಗಿಗಳ ಕೂಗಿರುವ ಮೊದಲಕೋಟೆ ಆಸ್ಪತ್ರೆಯಲ್ಲಿ ಶಾಸಕರು ಮಾತ್ರ ಸೇವೆ ಮಾಡಿಲ್ಲ. ಪ್ರಸ್ತುತ ನೆಲಮಂಗಲ ತಾಲೂಕು ಆರೋಗ್ಯ ಅಧಿಕಾರಿಗಳಾಗಿರುವ ಹೇಮಲತಾ ಕೂಡ ಇದೇ ಆಸ್ಪತ್ರೆಯಲ್ಲಿ ಕೆಲಸ ಮಾಡಿ ದವರು. ಜಿಲ್ಲೆಯಲ್ಲಿ ಉಸ್ತುವಾರಿಗಳಾಗಿ ಆರೋಗ್ಯ ಸಚಿವರೇ ಇದ್ದಾರೆ. ಆಸ್ಪತ್ರೆಯಲ್ಲು ಸೇವೆ ಸಲ್ಲಿಸಿದ ತಾಲೂಕು ಶಾಸಕರು ಹಾಗೂ ಟಿಎಚ್‌ಒ ಇದ್ದರೂ, ಮೊದಲಕೋಟೆ ಆಸ್ಪತ್ರೆ ಸಮಸ್ಯೆಯ ಸುಳಿಯಿಂದ ಹೊರಗೆ ಬರಲು ನರಳಾಡುವಂತಾಗಿದೆ.

ವೈದ್ಯರ ಬದಲಾವಣೆ ಮಾಡದಿದ್ದರೆ ಪ್ರತಿಭಟನೆ : ನಾವು ಬಡವರು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಉತ್ತಮ ಚಿಕಿತ್ಸೆ ಸಿಗುತ್ತದೆ ಅಂತ ಬರುತ್ತೇವೆ. ಆದರೆ, ಮೊದಲಕೋಟೆ ಆಸ್ಪತ್ರೆಯಲ್ಲಿ ವೈದ್ಯರೇ ಇರೋದಿಲ್ಲ. ಅವರಿಗೆ ಇಷ್ಟಬಂದಾಗ ಬರ್ತಾರೆ, ಹೋಗ್ತರೆ. ಸಿಕ್ಕಾಗ ನಮ್ಮನ್ನು ಮುಟ್ಟಿ ನೋಡಲು ಮುಜುಗರ ಪಡುತ್ತಾರೆ. ದೂರದಿಂದ ನಿಮಗೆ ಏನು ಕಾಯಿಲೆ ಅಂತ ಕೇಳಿ ಮಾತ್ರೆ ನೀಡಿ ಕಳುಹಿಸುತ್ತಾರೆ. ಇಂತಹ ಡಾಕ್ಟರ್‌ ನಮಗೆ ಬೇಡ. ವೈದ್ಯರ ಬದಲಾವಣೆ ಮಾಡದಿದ್ದರೆ ಆಸ್ಪತ್ರೆ ಬಾಗಿಲಲ್ಲಿ ಕುಳಿತು ಪ್ರತಿಭಟನೆ ಮಾಡುತ್ತೇವೆ ಎಂದು ಮೊದಲಕೋಟೆ ವೃದ್ಧೆ ಚನ್ನಮ್ಮ ಒತ್ತಾಯಿಸಿದ್ದಾರೆ.

ಶಾಸಕರೇ ಗಮನಿಸಿ : ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ಡಾ. ಕೆ.ಶ್ರೀನಿವಾಸಮೂರ್ತಿಯವರು ಮೊದಲಕೋಟೆ ಆಸ್ಪತ್ರೆ ಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಲೂಕಿಗೆ ಶಾಸಕರನ್ನು ನೀಡಿದ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳಿದ್ದರೂ, ಸಹ ಉತ್ತಮ ವೈದ್ಯರ ಕೊರತೆ ಹೆಚ್ಚಾಗಿದೆ. ರೋಗಿಗಳು ಖಾಲಿ ಕುರ್ಚಿ ನೋಡಿಕೊಂಡು ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸೇರಿದಂತೆ ಆಸ್ಪತ್ರೆಗೆ ಬರುವ ರೋಗಿಗಳು ಅನೇಕ ಬಾರಿ ದೂರು ನೀಡಿದ್ದು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮನವರಿಕೆ ಮಾಡಿ ದೂರು ನೀಡಿದರೂ, ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಮೊದಲಕೋಟೆ ವೈದ್ಯರ ಮೇಲೆ ಜನರಿಗೆ ಸ್ಪಂದನೆ ಇಲ್ಲ, ಚಿಕಿತ್ಸೆ ನೀಡುತ್ತಿಲ್ಲ. ಆಸ್ಪತ್ರೆಗೆ ಬರುತ್ತಿಲ್ಲ ಎಂಬ ಕಾರಣಕ್ಕೆ ತನಿಖೆಗೆ ಸೂಚನೆ ನೀಡಲಾಗಿದೆ. ಬೇರೆ ವೈದ್ಯರು ನಿಯೋಜನೆಗೆ ಎಲ್ಲೂ ಡಾಕ್ಟರ್‌ಗಳಿಲ್ಲ, ಎಲ್ಲಾ ಕಡೆ ಒಬ್ಬರೇ ಇದ್ದಾರೆ. ನಮಗೆ ಸರ್ಕಾರ ಹತ್ತು, ಹತ್ತು ಡಾಕ್ಟರ್‌ ಕೊಟ್ಟಿದ್ದರೆ ಹಾಕಬಹುದಿತ್ತು. ನೋಟಿಸ್‌ ನೀಡಲಾಗಿದೆ. ಅದರ ಬಗ್ಗೆ ಟಿಎಚ್‌ಒ ವಿಚಾರಿಸುತ್ತೇನೆ. – ವಿಜಯೇಂದ್ರ ಡಿಎಚ್‌ಒ, ಬೆಂಗಳೂರು ಗ್ರಾಮಾಂತರ

Advertisement

Udayavani is now on Telegram. Click here to join our channel and stay updated with the latest news.

Next