Advertisement

Drought: ರಾಜ್ಯದಲ್ಲಿ ತೀವ್ರ ಮಳೆ ಕೊರತೆ: 4ರಂದು ಬರ ತಾಲೂಕುಗಳ ಘೋಷಣೆ

08:19 PM Aug 31, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾದ ಬೆಳೆಹಾನಿ ಲೆಕ್ಕಾಚಾರ ನಡೆದಿದ್ದು, ಹತ್ತು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

Advertisement

ಬೆಂಗಳೂರು ಪ್ರಸ್‌ಕ್ಲಬ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ತೀವ್ರ ಬರಪೀಡಿತ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಬೆಳೆ ಪರಿಸ್ಥಿತಿ ಸಮೀಕ್ಷೆ ಪೂರ್ಣಗೊಂಡಿದ್ದು, ಒಂದು ದಿನದ ಹಿಂದಷ್ಟೇ ವರದಿ ಸಲ್ಲಿಕೆಯಾಗಿದೆ. ಇದೇ ಸೆ.4ರಂದು ರಾಜ್ಯದಲ್ಲಿನ ಬರ ತಾಲೂಕುಗಳ ಘೋಷಣೆ ಮಾಡಲಾಗುವುದು. ಇದಾದ ನಂತರದ ಒಂದು ವಾರದಲ್ಲಿ ಬೆಳೆಹಾನಿಯ ನಿಖರ ಮಾಹಿತಿಯೂ ಗೊತ್ತಾಗಲಿದೆ’ ಎಂದು ಹೇಳಿದರು.

ರಾಜ್ಯದ ಬಹುತೇಕ ಕಡೆ ಶೇ.70ರಿಂದ 80ರಷ್ಟು ಬಿತ್ತನೆಯಾಗಿದೆ. ಹಾವೇರಿಯಲ್ಲಿ ಶೇ.85ರಷ್ಟು ಬಿತ್ತನೆ ಮಾಡಲಾಗಿದೆ. ಆದರೆ, ಸತತ ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಹೀಗೆ ಹಾನಿಗೊಳಗಾದ ಬೆಳೆಯ ಪ್ರಮಾಣ ಎಷ್ಟು ಎಂದು ತಕ್ಷಣಕ್ಕೆ ಹೇಳಲಾಗದು. ಸಮೀಕ್ಷೆ ಜತೆಗೆ ಮತ್ತಿತರ ಪ್ರಕ್ರಿಯೆಗಳ ನಂತರ ಅದು ಗೊತ್ತಾಗಲಿದೆ. ಈ ಮಧ್ಯೆ ಸೆ.4ರಂದು ಸಚಿವ ಸಂಪುಟದ ಉಪಸಮಿತಿ ಸಭೆ ಇದ್ದು, ಅಂದೇ ಬರ ತಾಲೂಕುಗಳ ಘೋಷಿಸಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯ ಮತ್ತು ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಬರ ಘೋಷಣೆಯಾಗುವುದರಿಂದ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳದ ರೈತರಿಗೂ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ ಎಂದ ಅವರು, ಪ್ರಸಕ್ತ ಸಾಲಿಗೆ 16.23 ಲಕ್ಷ ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಂಡಿದ್ದು, 15.31 ಲಕ್ಷ ಹೆಕ್ಟೇರ್‌ ಬೆಳೆವಿಮೆ ವ್ಯಾಪ್ತಿಗೆ ಒಳಪಟ್ಟಿದೆ. 2022-23ನೇ ಸಾಲಿನಲ್ಲಿ 12.64 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡು, 1,114.17 ಕೋಟಿ ರೂ. ಪರಿಹಾರ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಜಲಾಶಯಗಳ ಹೂಳು; ಯೋಜನೆಗೆ ಚಿಂತನೆ
ಕಾವೇರಿ ಸೇರಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿರುವ ಹೂಳು ತೆಗೆಯುವ ಅವಶ್ಯಕತೆ ಇದೆ. ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರತಿ ಸಲ ಈ ಸಂಬಂಧದ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ಮಳೆ ಬರುತ್ತದೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಅವಕಾಶ ಸಿಕ್ಕರೆ ಹೂಳು ತೆಗೆಯಲು ಯೋಜನೆ ರೂಪಿಸುವ ಆಲೋಚನೆ ಸರ್ಕಾರದ ಮುಂದಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

ತಿಂಗಳಲ್ಲಿ ಬೆಲೆ ಆಯೋಗ ಅಸ್ತಿತ್ವಕ್ಕೆ
ರಾಜ್ಯ ಕೃಷಿ ಬೆಲೆ ಆಯೋಗ ರಚಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ತಿಂಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಆಯೋಗ ರಚನೆಯಾದರೆ, ಮಾರುಕಟ್ಟೆ ಬೆಲೆ ಏರಿಳಿತದ ಮುನ್ಸೂಚನೆ, ಬೆಳೆಗಳ ರಚನೆ, ರೈತರಿಗೆ ಸಕಾಲದಲ್ಲಿ ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಘೋಷಣೆ ಮಾಡಬೇಕು ಎನ್ನುವುದು ಸೇರಿ ಹಲವು ರೀತಿಯ ಕ್ರಮಗಳಿಗೆ ಅನುಕೂಲ ಆಗಲಿದೆ. ಈ ಸಂಬಂಧಿಸಿದ ಪ್ರಕ್ರಿಯೆಗಳು ನಡೆದಿದ್ದು, ತಿಂಗಳಲ್ಲಿ ರಚನೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಲಾಂತರಿ ಸಾಸಿವೆ; ಪ್ರಯೋಗ ಮಾಡಲ್ಲ
ಕುಲಾಂತರಿ ಸಾಸಿವೆ ಪ್ರಯೋಗದ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕುಲಾಂತರಿ ಸಾಸಿವೆ ವಿಚಾರದಲ್ಲಿ ವಿಜ್ಞಾನಿಗಳಿಂದ ನಕಾರಾತ್ಮಕ ವರದಿಗಳು ಬಂದಿವೆ. ಈ ಪ್ರಯೋಗದಿಂದ ಹಾನಿಯಾಗುವಂತಹ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯೋಗ ಮಾಡುವ ಆಲೋಚನೆಯೂ ಇಲ್ಲ; ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗಳೂ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next