Advertisement

ಕರ್ನಾಟಕ ಗಡಿಯಲ್ಲಿ ತೀವ್ರ ತಪಾಸಣೆ 

12:48 PM Apr 11, 2018 | Team Udayavani |

ಈಶ್ವರಮಂಗಲ: ರಾಜ್ಯ ವಿಧಾನಸಭೆಗೆ ಮೇ 12ರಂದು ಚುನಾವಣೆ ನಡೆಯಲಿದ್ದು, ಕರ್ನಾಟಕ – ಕೇರಳ ಗಡಿಭಾಗಗಳಾದ ಈಶ್ವರಮಂಗಲ, ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಚುನಾವಣಾಧಿಕಾರಿಗಳು ವಾಹನ ತಪಾಸಣೆ ಬಿಗಿಗೊಳಿಸಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಿದ್ದಾರೆ.

Advertisement

ಮೂರು ಪಾಳಿ
ಚುನಾವಣೆ ದಿನಾಂಕ ಘೋಷಣೆ ಜತೆಗೇ ನೀತಿ ಸಂಹಿತೆ ಜಾರಿಯಾಗಿದ್ದು, ಅಂತಾರಾಜ್ಯ ಸಂಪರ್ಕ ಹೊಂದಿರುವ ಲೋಕೋಪಯೋಗಿ ರಸ್ತೆಯಲ್ಲಿ ಚೆಕ್‌ ಪೋಸ್ಟ್‌ ನಿರ್ಮಾಣ ಮಾಡಿ, ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ನಿತ್ಯ ಮೂರು ಪಾಳಿಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ವಾಹನದ ನೋಂದಣಿ ಸಂಖ್ಯೆ, ಚಾಲಕನ ದೂರವಾಣಿ ಸಂಖ್ಯೆ ಬರೆದುಕೊಳ್ಳುತ್ತಿದ್ದಾರೆ. ಗಡಿ ಭಾಗದಿಂದ ಅಕ್ರಮ ಹಣ, ಮದ್ಯ ಸಾಗಾಟದ ಕುರಿತು ನಿಗಾ ಇರಿಸಲಾಗಿದೆ. ಅನುಮಾನಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ತನಕ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ.

ಪಾಣಾಜೆ ಗ್ರಾಮದ ಆರ್ಲಪದವು ಹಾಗೂ ನೆಟ್ಟಣಿಗೆಮುಟ್ನೂರು ಗ್ರಾಮದ ಈಶ್ವರಮಂಗಲ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿವೆ. ಈಶ್ವರಮಂಗಲದಲ್ಲಿ ಪೊಲೀಸ್‌ ಹೊರಠಾಣೆಯೂ ಇದೆ. ಪೊಲೀಸ್‌ ಸಿಬಂದಿ ಎರಡು ಪಾಳಿಗಳಲ್ಲಿ ಚುನಾವಣಾಧಿಕಾರಿಗಳೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸುಣ್ಣ-ಬೆಣ್ಣೆ
ಗಡಿಭಾಗದಲ್ಲಿ ಎರಡು ಕಡೆ ಚುನಾವಣೆ ಹಿನ್ನೆಲೆಯಲ್ಲಿ ಬಿಗು ತಪಾಸಣೆ ಕ್ರಮ ಕೈಗೊಂಡಿದ್ದರೂ ಕೆಲವು ರಸ್ತೆಗಳು ನೇರ ಕೇರಳ ರಾಜ್ಯದ ಗಡಿಯನ್ನು ಸಂಪರ್ಕಿಸುತ್ತಿವೆ. ಇವುಗಳ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೂಂದು ಕಣ್ಣಿಗೆ ಬೆಣ್ಣೆ ಹಾಕಿದ ಪರಿಸ್ಥಿತಿ ನಿರ್ಮಿಸಿದ್ದಾರೆ ಎಂದು ಜನರು ದೂರಿದ್ದಾರೆ.

ಗಡಿಭಾಗದಲ್ಲಿ ನಿರ್ಮಾಣಗೊಂಡಿದ್ದ ಚೆಕ್‌ ಪೋಸ್ಟ್‌ಗಳಿಂದ ಯಾವುದೇ ಅಕ್ರಮಗಳನ್ನು ತಡೆಯಲು ಸಾಧ್ಯವಿಲ್ಲ. ಚೆಕ್‌ಪೋಸ್ಟ್‌ಗಳನ್ನು ಜಿಲ್ಲಾ ಪ್ರಧಾನ ರಸ್ತೆಗಳಲ್ಲಿ ನಿರ್ವಹಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್‌ ರಸ್ತೆಗಳ ಮೂಲಕ ಕೇರಳ ಸಂಪರ್ಕವಿದೆ. ಅಭ್ಯರ್ಥಿಗಳು ಈ ರಸ್ತೆಗಳ ಪ್ರಯೋಜನ ಪಡೆದು, ಅಕ್ರಮಗಳನ್ನು ನಡೆಸುವ ಸಾಧ್ಯತೆ ಜಾಸ್ತಿ ಇದೆ. ಈ ನಿಟ್ಟಿನಲ್ಲಿ ಗಡಿ ಪ್ರದೇಶದ ಎಲ್ಲ ರಸ್ತೆಗಳ ಮೇಲೂ ಚುನಾವಣಾಧಿಕಾರಿಗಳು ನಿಗಾ ಇರಿಸಿ, ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆ ನಡೆಸುವತ್ತ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

ಕೇರಳದ ಭಾಗದಿಂದ ಸುಳ್ಯಪದವು ಮೂಲಕ ಪಡುಮಲೆ, ನೆಟ್ಟಣಿಗೆಯಿಂದ ಬಂಟಾಜೆ ರಕ್ಷಿತ್ಯಾರಣ್ಯದ ಮೂಲಕ ಆರ್ಲಪದವು, ವಾಣಿನಗರದಿಂದ ಕೊಂದಲಕಾನ -ವಡ್ಯ ಮೂಲಕ ಪುತ್ತೂರು ತಾಲೂಕು ಕೇಂದ್ರವನ್ನು ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಈ ರಸ್ತೆಯಲ್ಲಿ ಯಾವುದೇ ಚೆಕ್‌ ಪೋಸ್ಟಗಳು ಇಲ್ಲ. ಈ ಭಾಗಗಳಲ್ಲಿ ಚೆಕ್‌ ಪೋಸ್ಟಗಳು ನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚೆಕ್‌ಪೋಸ್ಟ್‌ ಹೆಚ್ಚಿಸಿ
ಗಡಿಭಾಗದಲ್ಲಿರುವ ಎಲ್ಲ ರಸ್ತೆಗಳ ಬಗ್ಗೆ ಚುನಾವಣಾಧಿಕಾರಿಗಳು ಗಮನಹರಿಸಿ ಚೆಕ್‌ಪೋಸ್ಟ್‌ಗಳ ಸಂಖ್ಯೆಯನ್ನು ಜಾಸ್ತಿ ಮಾಡಬೇಕು. ತಂತ್ರಜ್ಞಾನವನ್ನು ಆಳವಡಿಸಿಕೊಂಡು ಗಡಿಪ್ರದೇಶದಲ್ಲಿ ಚುನಾವಣೆ ಪೂರ್ವದಲ್ಲಿ ಅಕ್ರಮಗಳು ನಡೆಯದಂತೆ ಚುನಾವಣಾಧಿಕಾರಿಗಳು ಗಮನಹರಿಸಬೇಕು. ಮತದಾರರಲ್ಲಿ ಜಾಗೃತಿ ಮೂಡಿಸಬೇಕು.
– ದಿನೇಶ್‌ ರೈ ಕುತ್ಯಾಳ,
ಸಾಮಾಜಿಕ ಕಾರ್ಯಕರ್ತ

ಮಾಧವ ನಾಯಕ್‌. ಕೆ

Advertisement

Udayavani is now on Telegram. Click here to join our channel and stay updated with the latest news.

Next