ನವದೆಹಲಿ:ವಾಯುಮಾಲಿನ್ಯಕ್ಕೆ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಶನಿವಾರ(ನವೆಂಬರ್ 13) ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ವಾಯುಗುಣ ತೀರಾ ಹದಗೆಟ್ಟ ಪರಿಣಾಮ ಎರಡು ದಿನಗಳ ಕಾಲ ರಾಷ್ಟ್ರಧಾನಿ ದೆಹಲಿಯನ್ನು ಲಾಕ್ ಡೌನ್ ಮಾಡುವಂತೆ ಸಲಹೆ ನೀಡಿದೆ.
ಇದನ್ನೂ ಓದಿ:ಕಾಂಗ್ರೆಸ್ ಖಾಲಿ ಡಬ್ಬದ ಹಾಗೆ ಶಬ್ಧ ಮಾಡುತ್ತಿದೆ: ಕೆ.ಎಸ್.ಈಶ್ವರಪ್ಪ
ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ 17 ವರ್ಷದ ವಿದ್ಯಾರ್ಥಿನಿ ಆದಿತ್ಯ ದುಬೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು. ಸುಪ್ರೀಂಕೋರ್ಟ್ ನ ಸಿಜೆಐ ಎನ್ ವಿ ರಮಣ ನೇತೃತ್ವದ ವಿಶೇಷ ಪೀಠದ ಜಸ್ಟೀಸ್ ಡಿವೈ ಚಂದ್ರಚೂಡ್ ಮತ್ತು ಜಸ್ಟೀಸ್ ಸೂರ್ಯಕಾಂತ್ ಅವರು ಇಂದು ಅರ್ಜಿಯ ವಿಚಾರಣೆ ನಡೆಸಿದರು.
ದೆಹಲಿಯ ವಾಯು ಗುಣಮಟ್ಟ ತೀರಾ ಹದಗೆಟ್ಟಿದೆ ಎಂದು ಸಿಜೆಐ ರಮಣ್ ತಿಳಿಸಿದ್ದು, ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದನ್ನು ನಾವು ಗಮನಿಸಿದ್ದೇವೆ. ನಾವು ಮನೆಯೊಳಗಿದ್ದರೂ ಮಾಸ್ಕ್ ಧರಿಸುವಂತಾಗಿದೆ ಎಂದು ಹೇಳಿದರು.ವಾಯು ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಕೃಷಿ ತ್ಯಾಜ್ಯವನ್ನು ಸುಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಯಂತ್ರಗಳನ್ನು ವಿತರಿಸಬೇಕೆಂದು ಸುಪ್ರೀಂಕೋರ್ಟ್ ತಿಳಿಸಿದೆ. ದೆಹಲಿಯಲ್ಲಿನ ವಾಯು ಗುಣಮಟ್ಟ ಸುಧಾರಿಸಲು ತಕ್ಷಣವೇ ಕೆಲವು ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸಲಹೆ ನೀಡಿದೆ. ಅಲ್ಲದೇ ಎರಡು ದಿನಗಳ ಕಾಲ ಲಾಕ್ ಡೌನ್ ಮಾಡುವ ಕುರಿತು ಚಿಂತನೆ ನಡೆಸಿ ಎಂದು ಸಿಜೆಐ ರಮಣ ಸಲಹೆ ನೀಡಿದ್ದಾರೆ.