Advertisement

ದುಬಾೖಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು

01:11 PM Apr 15, 2020 | Hari Prasad |

ಬೆಂಗಳೂರು: ದುಬಾೖ ಸಹಿತ ಅರಬ್‌ ಸಂಯುಕ್ತ ಒಕ್ಕೂಟದ (ಯುಎಇ) ದೇಶಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಕನ್ನಡಿಗರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರು ಅಲ್ಲಿರಲಾಗದೆ, ಇಲ್ಲಿಗೆ ಬರಲು ಅವಕಾಶವಿಲ್ಲದೆ ಅತಂತ್ರರಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Advertisement

ಕೇಂದ್ರ ಸರಕಾರ ಅಧಿಕೃತ ಲಾಕ್‌ಡೌನ್‌ ಘೋಷಣೆ ಮಾಡುವ ಮೊದಲೇ ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಿದ್ದರಿಂದ ಕೊಲ್ಲಿ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕೆಳಮಧ್ಯಮ ವರ್ಗದ ಉದ್ಯೋಗಿಗಳು, ಕಟ್ಟಡ ಕಾರ್ಮಿಕರು, ಇತರ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.

ಇದಲ್ಲದೆ ಸಂಬಂಧಿಕರನ್ನು ನೋಡಲು ಹೋದವರು, 3 ತಿಂಗಳ ವಿಸಿಟಿಂಗ್‌ ವೀಸಾದಲ್ಲಿ ತೆರಳಿದವರು, ಅರ್ಧವಾರ್ಷಿಕ ಉದ್ಯೋಗಿಗಳು ಮತ್ತು ಕೋವಿಡ್ 19 ವೈರಸ್ ಕಾರಣಕ್ಕಾಗಿ ನೂರಾರು ಕಂಪೆನಿಗಳಿಂದ ಕೆಲಸ ಕಳೆದುಕೊಂಡಿರುವವರು ಇದ್ದಾರೆ.

ವಿಶೇಷ ವಿಮಾನ ಸೌಲಭ್ಯ ಕಲ್ಪಿಸಿದರೆ ಕೊರೊನಾ ಪಾಸಿಟಿವ್‌ ಅಲ್ಲದವರನ್ನು ಮಾತ್ರ ವಾಪಸ್‌ ಕಳುಹಿಸುವ ಖರ್ಚು ವೆಚ್ಚಗಳನ್ನು ಭರಿಸಲು ಅಲ್ಲಿನ ಕನ್ನಡ ಪರ ಸಂಘಟನೆಗಳು, ಕನ್ನಡಿಗ ಉದ್ಯಮಿಗಳು ಸಿದ್ಧರಿದ್ದಾರೆ. ಜತೆಗೆ ಭಾರತಕ್ಕೆ ತೆರಳಿದ ಬಳಿಕ ಕ್ವಾರಂಟೈನ್‌ ವ್ಯವಸ್ಥೆಯ ಖರ್ಚನ್ನೂ ಭರಿಸಲೂ ಸಿದ್ಧರಿದ್ದಾರೆ ಎಂದು ಯುಎಇ ಕನ್ನಡಿಗರ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಕೇಂದ್ರ ಸರಕಾರದೊಂದಿಗೆ ಚರ್ಚಿಸಿ ಅಗತ್ಯವಿದ್ದರೆ ವೀಸಾ ಅವಧಿ ಮುಗಿದವರು ಮತ್ತು ತುರ್ತಾಗಿ ವಾಪಸ್‌ ಬರಲು ಇಚ್ಛಿಸುವವರನ್ನು ಅಲ್ಲಿಯೇ ತಪಾಸಣೆ ನಡೆಸಿ, ನೆಗೆಟಿವ್‌ ವರದಿ ಬಂದವರನ್ನು ರಾಜ್ಯಕ್ಕೆ ಕರೆತಂದು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡುವ ವ್ಯವಸ್ಥೆ ಮಾಡಿದರೆ ಅನುಕೂಲ ಎಂದು ಯುಎಇ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಆದರೆ ದುಬಾೖಯಲ್ಲಿ ಕೋವಿಡ್ 19 ವೈರಸ್ ಸೋಂಕು ಹರಡುವಿಕೆ ವೇಗವಾಗಿದೆ. ಪ್ರತಿದಿನ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ಕಾರ್ಮಿಕರು ಒಂದೇ ರೂಮಿನಲ್ಲಿ 10-15 ಜನ ವಾಸವಾಗಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿಲ್ಲ. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯಲಾಗದ ಪರಿಸ್ಥಿತಿ ಇರುವುದರಿಂದ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. ಲಾಕ್‌ಡೌನ್‌ ಇರುವುದರಿಂದ ಅಗತ್ಯ ವಸ್ತು ಸಿಗದೆ ಯಾರಿಗೂ ಹೇಳಲಾಗದ ಸ್ಥಿತಿಯಲ್ಲಿ ಅನೇಕರು ಕಾಲ ಕಳೆಯುವಂತಾಗಿದೆ.

ನಾಲ್ಕು ಲಕ್ಷ ಕನ್ನಡಿಗರು
ಯುಎಇಯಲ್ಲಿ ಸುಮಾರು 4 ಲಕ್ಷ ಕನ್ನಡಿಗರಿದ್ದಾರೆ. ದುಬಾೖ ಒಂದರಲ್ಲಿಯೇ ಸುಮಾರು 2 ಲಕ್ಷ ಕನ್ನಡಿಗರು ವಾಸವಾಗಿದ್ದಾರೆ. ಅವರಲ್ಲಿ ಬಹುತೇಕ ನೌಕರರು ಮತ್ತು ಕೂಲಿ ಕಾರ್ಮಿಕ ವರ್ಗದವರು. ಅಲ್ಲಿನ ಸರಕಾರ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ಕಟ್ಟಡ ನಿರ್ಮಾಣ ವಲಯವನ್ನು ಚಾಲನೆಯಲ್ಲಿ ಇರಿಸಿರುವುದರಿಂದ ಎಂಜಿನಿಯರ್‌ಗಳು ಮತ್ತು ಕಟ್ಟಡ ಕಾರ್ಮಿಕರು ಉದ್ಯೋಗದ ಅನಿವಾರ್ಯದಿಂದ ಸಾಮಾಜಿಕ ಅಂತರ ಕಾಯ್ದು ಕೆಲಸ ಮಾಡುವ ಸ್ಥಿತಿ ಇದೆ.

ದುಬಾೖ, ಯುಎಇ ಸೇರಿದಂತೆ ಇಲ್ಲಿನ ಪ್ರಭುತ್ವಗಳು ಸಹಕಾರ ಮುಂದುವರಿಸಿವೆ. ಆದರೆ ಉದ್ಯೋಗ ಕಳೆದುಕೊಂಡವರು, ಕಾರ್ಮಿಕರು, ಪ್ರವಾಸಿಗಳು ಸೇರಿದಂತೆ ಕರ್ನಾಟಕಕ್ಕೆ ಮರಳಲು ಉತ್ಸುಕರಾಗಿರುವವರನ್ನು ಮರಳಿ ಹುಟ್ಟೂರಿಗೆ ಕಳುಹಿಸಲು ಸರಕಾರಗಳ ಮಟ್ಟದಲ್ಲಿ ಮಾತುಕತೆಯಾಗಬೇಕು. ಕನ್ನಡಿಗರ ಸಂಘಟನೆಗಳು ಈ ಬಗ್ಗೆ ಸಂಪೂರ್ಣ ಸಹಕಾರ ನೀಡಲಿವೆ.
– ಸರ್ವೋತ್ತಮ ಶೆಟ್ಟಿ, ಯುಎಇ ಕನ್ನಡಿಗರ ಸಂಘಟನೆ ಅಧ್ಯಕ್ಷ

ಕಷ್ಟದಲ್ಲಿರುವ ಯಾರನ್ನೇ ಕಂಡರೂ ಅವರಿಗೆ ಸಾಧ್ಯವಾದಷ್ಟು ಆಹಾರ ನೀಡುತ್ತಿದ್ದೇವೆ. ಆದರೆ ಎಲ್ಲವೂ ನಮ್ಮಿಂದ ಮಾಡಲು ಸಾಧ್ಯವಾಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ನಮ್ಮ ನೆರವಿಗೆ ಬರಬೇಕು. ಸ್ಥಳೀಯ ಕನ್ನಡಿಗ ಉದ್ಯಮಿಗಳೂ ಸಹಾಯ-ಸಹಕಾರ ನೀಡಿದರೆ ಅನುಕೂಲವಾಗುತ್ತದೆ.
– ಹಿದಾಯತ್‌ ಅಡ್ಡೂರ್‌, ದುಬಾೖ ಕನ್ನಡಿಗ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next