ದುಬೈ: ಕಳೆದ ಕೆಲವು ದಿನಗಳ ಹಿಂದೆ ಧಾರಾಕಾರ ಮಳೆಗೆ ದುಬೈ ತತ್ತರಿಸಿ ಹೋಗಿದ್ದ ಬೆನ್ನಲ್ಲೇ ಭಾರೀ ಮಳೆ, ಗಾಳಿಗೆ ಯುಎಇ ನಲುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ
ಭಾರೀ ಗಾಳಿ, ಮಳೆಯ ಹಿನ್ನೆಲೆಯಲ್ಲಿ ಹಲವಾರು ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದುಪಡಿಸಲಾಗಿದೆ. ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಯುಎಇನ ರಾಷ್ಟ್ರೀಯ ತುರ್ತು ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಕ್ರಮ ಕೈಗೊಂಡಿರುವುದಾಗಿ ವರದಿ ವಿವರಿಸಿದೆ.
ಏಪ್ರಿಲ್ 14-15ರಂದು ಅರೇಬಿಯನ್ ಪೆನಿನ್ಸುಲಾ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ 1949ರ ಬಳಿಕ ದುಬೈನಲ್ಲಿ ದಾಖಲೆಯ ಮಳೆ ಸುರಿದಿತ್ತು. ಇದರಿಂದ ಕೋಟ್ಯಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟವಾಗಿತ್ತು.
ಗುರುವಾರ(ಮೇ 02) ಯುಎಇನಲ್ಲಿ ಹವಾಮಾನ ಮತ್ತು ಮಳೆಯ ಪರಿಣಾಮ ದುಬೈ ಮೂಲದ ಎಮಿರೇಟ್ಸ್ ವಿಮಾನ ಸಂಸ್ಥೆಗಳು ಹಲವಾರು ವಿಮಾನ ಸಂಚಾರ ಸ್ಥಗಿತಗೊಳಿಸಿರುವುದಾಗಿ ಘೋಷಿಸಿತ್ತು.
ಮೇ 2ರಂದು ದುಬೈ ವಿಮಾನ ನಿಲ್ದಾನದಿಂದ ಹೊರಡುವ ಮತ್ತು ಆಗಮಿಸುವ ವಿಮಾನ ಸಂಚಾರದಲ್ಲಿ ವಿಳಂಬವಾಗಲಿದ್ದು, ಇದಕ್ಕಾಗಿ ಪ್ರಯಾಣಿಕರು ಸಹಕರಿಸಬೇಕು ಎಂದು ಎಮಿರೇಟ್ಸ್ ಬಿಡುಗಡೆ ಮಾಡಿದ ಪ್ರಕಟನೆಯಲ್ಲಿ ತಿಳಿಸಿದೆ.
ಜನರು ಮುಂಜಾಗ್ರತೆಯಿಂದ ಇರುವಂತೆ ಯುಎಇ ಮನವಿ ಮಾಡಿದ್ದು, ರಕ್ಷಣೆಯ ಮಾರ್ಗಸೂಚಿಯನ್ನು ಅನುಸರಿಸುವಂತೆ ತಿಳಿಸಿದೆ. ಜನರು ಪರ್ವತ, ಮರಳುಗಾಡು ಮತ್ತು ಕರಾವಳಿ ಪ್ರದೇಶದತ್ತ ತೆರಳದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.