Advertisement

ಹದಿನೇಳು ದೂರು ಸಲ್ಲಿಕೆ, ಹಲವು ಸಮಸ್ಯೆಗಳ ಪ್ರಸ್ತಾವ

11:32 PM Sep 13, 2019 | mahesh |

ಸುಳ್ಯ: ಕೋಟ್ಯಂತರ ರೂ. ವೆಚ್ಚದ ಒಳಚರಂಡಿ ಯೋಜನೆ ವೈಫಲ್ಯವನ್ನು ತತ್‌ಕ್ಷಣ ಸರಿಪಡಿಸಿ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಬೇಕು. ಈ ಬಗ್ಗೆ ಆದ ಬೆಳವಣಿಗೆಗಳ ಕಾಲ-ಕಾಲಕ್ಕೆ ದೂರುದಾರರಿಗೆ ಮಾಹಿತಿ ಮತ್ತು ಲೋಕಾಯುಕ್ತ ಸಂಸ್ಥೆಗೆ ವರದಿ ಸಲ್ಲಿಸುವಂತೆ ನ.ಪಂ. ಮುಖ್ಯಾಧಿಕಾರಿ, ಎಂಜಿನಿಯರ್‌ಗೆ ಲೋಕಾಯುಕ್ತ ಡಿವೈಎಸ್‌ಪಿ ವಿಜಯಪ್ರಸಾದ್‌ ಸೂಚನೆ ನೀಡಿದ್ದಾರೆ.

Advertisement

ಕರ್ನಾಟಕ ಲೋಕಾಯುಕ್ತ ಮಂಗಳೂರು ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಸಾರ್ವಜನಿಕ ದೂರು ಸ್ವೀಕಾರ ಸಭೆಯಲ್ಲಿ ಶಾರಿಕ್‌ ಅವರಿಂದ ದೂರು ಸ್ವೀಕರಿಸಿ ಪರಿಶೀಲಿಸಿದರು. ಉತ್ತರಿಸಿದ ನ.ಪಂ. ಎಂಜಿನಿಯರ್‌ ಶಿವಕುಮಾರ್‌, ಶಾಸಕರು ಈ ಬಗ್ಗೆ ದೂರು ನೀಡಿದ ಮೇರೆಗೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಒಳಚರಂಡಿಯಲ್ಲಿ ಮಳೆ, ಒರತೆ ನೀರು ಹೋಗುವ ಕಾರಣ ಕನೆಕ್ಷನ್‌ ಕೊಟ್ಟಿಲ್ಲ. ಪ್ರಾಯೋಗಿಕವಾಗಿ 30 ಸಂಪರ್ಕ ನೀಡಿದ್ದೇವೆ. ಆಗ ಸಮಸ್ಯೆ ತಲೆದೋರಿದ ಕಾರಣ ಸಂಪರ್ಕ ಕಡಿತಗೊಳಿಸಲಾಯಿತು. ದುರಸ್ತಿ ಮಾಡುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಿದ್ದು ಮೂರು ತಿಂಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಕ್ರೀಡಾಂಗಣ ಅಧಿಕ ಶುಲ್ಕ: ವರದಿ ಸಲ್ಲಿಸಿ
ಸಾರ್ವಜನಿಕ ಉದ್ದೇಶಕ್ಕಾಗಿ ಕುರುಂಜಿಗುಡ್ಡೆಯಲ್ಲಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣವನ್ನು ಲೀಸ್‌ ಮೂಲಕ ಖಾಸಗಿ ಸಂಸ್ಥೆಗೆ ನಿರ್ವಹಣೆಗೆ ನೀಡಿದ್ದು, ಅವರು ಅಧಿಕ ಶುಲ್ಕ ವಿಧಿಸುವ ಕಾರಣ ಬಡವರಿಗೆ ಅನಾನುಕೂಲವಾಗಿದೆ ಎಂದು ಶಾರಿಕ್‌ ಡಿ.ಎಂ. ದೂರು ಸಲ್ಲಿಸಿದರು. 50 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಬೇಕಿದ್ದರೂ ಅದರ ವೆಚ್ಚ 75 ಲಕ್ಷ ರೂ. ದಾಟಿತ್ತು. ಗುತ್ತಿಗೆ ಸಂಸ್ಥೆಯ ನಿರ್ಲಕ್ಷéದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.

ಈ ಬಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಅವರ ಪ್ರಶ್ನೆಗೆ ಉತ್ತರಿಸಿದ ನ.ಪಂ. ಅಧಿಕಾರಿಗಳು, ಒಳಾಂಗಣ ಕ್ರೀಡಾಂಗಣಕ್ಕೆ 1 ಕೋಟಿ ರೂ. ಅನುದಾನದ ಅಗತ್ಯ ಇತ್ತು. ಮೊದಲ ಹಂತದಲ್ಲಿ 50 ಲಕ್ಷ ರೂ. ಅನುದಾನ ಲಭ್ಯವಾದ ಕಾರಣ ಕೆಲಸ ಆರಂಭಿಸಲಾಯಿತು. ಅನಂತರ ಎರಡು ಹಂತಗಳಲ್ಲಿ ಕೆಲಸ ಪೂರ್ಣಗೊಳಿಸಲಾಯಿತು. ಕ್ರೀಡಾಂಗಣ ನಿರ್ವಹಣೆಯನ್ನು ಅಸೋಶಿಯಷನ್‌ಗೆ ವಹಿಸಲಾಗಿದೆ. ಸದಸ್ಯತ್ವ ಶುಲ್ಕ ಸಂಗ್ರಹ ಅವರ ಖಾಸಗಿ ವಿಚಾರ. ಅದಕ್ಕೂ, ನ.ಪಂ.ಗೂ ಸಂಬಂಧ ಇಲ್ಲ. ಕ್ರೀಡಾಂಗಣ ಪ್ರವೇಶಾತಿಗೆ ಕಡಿಮೆ ದರ ವಿಧಿಸಲು ನ.ಪಂ. ಸಭೆಯಲ್ಲಿ ಸೂಚಿಸಲಾಗಿದೆ ಎಂದರು. ಬಡವರಿಗೆ ಶುಲ್ಕ ಭರಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಡಿವೈಎಸ್‌ಪಿ ಸೂಚಿಸಿದರು.

ಪುತ್ಥಳಿ ನಿರ್ಮಾಣ: ದೂರು ಸಲ್ಲಿಕೆ
ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಪುತ್ಥಳಿ ಸ್ಥಾಪನೆಗೆ, ನೀರಿನ ಸಂಪರ್ಕಕ್ಕೆ, ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ಪಡೆಯದಿದ್ದರೆ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಏನು ಕ್ರಮ ಕೈಗೊಂಡಿದ್ದೀರಿ ಎಂಬ ಶಾರೀಕ್‌ ಡಿ.ಎಂ.ದೂರಿನ ಬಗ್ಗೆ ಲೋಕಾಯುಕ್ತ ಪೊಲೀಸರ ಪ್ರಶ್ನೆಗೆ ಮುಖ್ಯಾಧಿಕಾರಿ ಉತ್ತರಿಸಿ, ನಾವು ಎನ್‌ಒಸಿ ಮಾತ್ರ ನೀಡಿದ್ದೇವೆ. ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಈ ಸ್ಥಳ ಎನ್‌ಎಚ್‌ ವ್ಯಾಪ್ತಿಗೆ ಸೇರಿದೆ ಎಂದರು. ಅನುಮತಿ ರಹಿತ ಪುತ್ಥಳಿಗೆ ನೀರಿನ ಸಂಪರ್ಕ ಒದಗಿಸುವ ಬಗ್ಗೆಯೂ ಡಿವೈಎಸ್‌ಪಿ ಪ್ರಶ್ನಿಸಿದರು. ವಿದ್ಯುತ್‌ ಸಂಪರ್ಕ ನೀಡಿರುವ ಬಗ್ಗೆ ಮೆಸ್ಕಾಂ ಅಧಿಕಾರಿ, ವಿದ್ಯುತ್‌ ಕನೆಕ್ಷನ್‌ ಕೊಟ್ಟಿಲ್ಲ. ಸೋಲಾರ್‌ ಬಳಸಿರಬಹುದು ಎಂದರು. ಈ ಬಗ್ಗೆ ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಸಮಗ್ರ ವರದಿ ಸಲ್ಲಿಸುವಂತೆ, ವಿಚಾರಣೆ ಸಂದರ್ಭ ಪೂರಕ ದಾಖಲೆ ನೀಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.

Advertisement

ಹಕ್ಕುಪತ್ರಕ್ಕೆ ಅರ್ಜಿ: ತಿರಸ್ಕಾರ
1998-99ರಿಂದ ಹಕ್ಕುಪತ್ರಕ್ಕೆ ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದ್ದರೂ ತಿರಸ್ಕೃತಗೊಂಡಿವೆ. ಆದರೆ ಅದೇ ಪರಿಸರದಲ್ಲಿ ಕೆಲವರಿಗೆ ಮಂಜೂರಾತಿ ಆಗಿದೆ ಎಂದು ಏನೆಕಲ್ಲು ಗ್ರಾಮದ ಮಾಣಿಬೈಲು ನಿವಾಸಿ, ಅಂಗವಿಕಲ ತಿರುಮಲೇಶ್ವರ ಅಹವಾಲು ಸಲ್ಲಿಸಿದರು. ಪರಿಶೀಲನೆ ಸಂದರ್ಭ ಪ್ರಸ್ತಾವಿತ ಜಾಗ ದೇವರಹಳ್ಳಿ ಶಾಲಾ ಸ್ವಾದೀನದಲ್ಲಿ ಇದ್ದು, ಈ ಕಡತ ಸಹಾಯಕ ಆಯುಕ್ತರ ಹಂತದಲ್ಲಿದೆ ಎಂದು ತಹಶೀಲ್ದಾರ್‌ ಉತ್ತರಿಸಿದರು. ಈ ವಿಚಾರವಾಗಿ ತಾ.ಪಂ. ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಗಮನಕ್ಕೆ ತಂದರು. ಶಾಲೆಗೆ ಲಭ್ಯವಾಗಬೇಕಾದ ಜಾಗ ಸರ್ವೆ ಮಾಡಿಸಿ ಉಳಿದ ಜಾಗವನ್ನು ಸ್ವಾಧೀನ ಹೊಂದಿರುವ ಕುಟುಂಬಗಳಿಗೆ ಒದಗಿಸುವ ಬಗ್ಗೆ ಕಡತ ಅಂತಿಮ ಹಂತದಲ್ಲಿದ್ದು ಶೀಘ್ರವಾಗಿ ಸಮಸ್ಯೆ ಬಗೆಹರಿಯಲಿದೆ ಎಂದು ಬಿಇಒ ಮಹಾದೇವ ಮತ್ತು ತಹಶೀಲ್ದಾರ್‌ ಕುಂಞಿ ಅಹ್ಮದ್‌ ಹೇಳಿದರು.

ಅಂಗನವಾಡಿ ಮೇಲೆ ವಿದ್ಯುತ್‌ ತಂತಿ
ಹಾಲೆಮಜಲು ಅಂಗನವಾಡಿ ಕೇಂದ್ರದ ಮೇಲೆ ವಿದ್ಯುತ್‌ ಲೈನ್‌ ಹಾದು ಹೋಗಿರುವ ಬಗ್ಗೆ ರಾಜೇಶ್‌ ಕುಕ್ಕುಜೆ ದೂರು ನೀಡಿದರು. ಲೋಕಾಯುಕ್ತ ಸಿಬಂದಿ ಭೇಟಿ ಸಂದರ್ಭ ಪರಿಶೀಲನೆ ನಡೆಸಿದ ವೇಳೆ ಈ ಸಮಸ್ಯೆ ಗಮನಿಸಿದ್ದೇವೆ. ಈ ಬಗ್ಗೆ ಏನು ಕ್ರಮ ಕೈಗೊಂಡ್ಡಿದ್ದೀರಿ ಎಂದು ಡಿವೈಎಸ್‌ಪಿ ಅವರು ಸಿಡಿಪಿಒ ಅವರನ್ನು ಪ್ರಶ್ನಿಸಿದರು. ಸುಳ್ಯ ಮೆಸ್ಕಾಂ ಅಧಿಕಾರಿ ಬಳಿಯೂ ವಿಚಾರಿಸಿದ ಅವರು, ಸುಬ್ರಹ್ಮಣ್ಯ ಸಬ್‌ಡಿವಿಜನ್‌ ವ್ಯಾಪ್ತಿಯ ಮೆಸ್ಕಾಂ ಅಧಿಕಾರಿ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಂತೆ ಸೂಚನೆ ನೀಡಿದರು.

ಹಲವು ಅಹವಾಲು ಸಲ್ಲಿಕೆ
ತೆರಿಗೆ ಹೆಚ್ಚಳದ ಕುರಿತಂತೆ ರಿಚರ್ಡ್‌ ದೂರು ಸಲ್ಲಿಸಿ, ನಾನು ಇಲ್ಲದ ಸಂದರ್ಭದಲ್ಲಿ ಕಟ್ಟಡದ ಸರ್ವೆ ನಡೆಸಿ ಅಧಿಕ ತೆರಿಗೆ ವಿಧಿಸಲಾಗಿದೆ ಎಂದರು. ದೂರುದಾರರ ಸಮಕ್ಷಮ ಸೆ. 19ರಂದು ಮರು ಸರ್ವೆ ನಡೆಸುವಂತೆ ಡಿವೈಎಸ್‌ಪಿ ತಿಳಿಸಿ, ವರದಿ ನೀಡುವಂತೆ ನ.ಪಂ.ಗೆ ಸೂಚಿಸಿದರು.ಡಿಸಿ ಮನ್ನಾ ಭೂಮಿ ದಲಿತರಿಗೆ ಮೀಸಲಿರಿಸುವ ಕುರಿತು ಕ್ರಮ ಕೈಗೊಳ್ಳಲು ಅಚ್ಯುತ ಮಲ್ಕಜೆ ಅಹವಾಲು ಸಲ್ಲಿಸಿದರು. ಗುತ್ತಿಗಾರು ಅರಣ್ಯ ಭಾಗದಲ್ಲಿ ಕಾಡು ಪ್ರಾಣಿ ಬೇಟೆ ನಡೆಯುತ್ತಿರುವ ಬಗ್ಗೆಯು ಶಾರಿಕ್‌ ಗಮನಕ್ಕೆ ತಂದರು.

ತೊಡಿಕಾನದ ಸುಮಿತ್ರ ನಾಯ್ಕ ಅವರ ಪತ್ನಿ ರುಕ್ಮಿಣಿ ಅವರಿಗೆ 94ಸಿ ಅಡಿ ಹಕ್ಕುಪತ್ರ ನೀಡುವಂತೆ ಲೋಕಾಯುಕ್ತರ ಗಮನಕ್ಕೆ ತಂದ ಪರಿಣಾಮ ಸುಳ್ಯ ತಹಶೀಲ್ದಾರ್‌ ಎರಡೇ ದಿನಗಳಲ್ಲಿ ಹಕ್ಕುಪತ್ರ ಒದಗಿಸಿದ್ದು, ಫಲಾನುಭವಿ ಸಭೆಗೆ ಬಂದು ಇಬ್ಬರು ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು.

ವೇದಿಕೆಯಲ್ಲಿ ಡಿವೈಎಸ್‌ಪಿ ಕಲಾವತಿ, ಇನ್‌ಸ್ಪೆಕ್ಟರ್‌ ಭಾರತಿ ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ, ಸರ್ಕಲ್‌ ಇನ್‌ಸ್ಪೆಕ್ಟರ್‌ ಸತೀಶ್‌ಕುಮಾರ್‌, ಎಸ್‌ಐ ಹರೀಶ್‌, ಸುಳ್ಯ ವಲಯಾರಣ್ಯಾಧಿಕಾರಿ ಎನ್‌. ಮಂಜುನಾಥ್‌, ಸುಬ್ರಹ್ಮಣ್ಯ ವಲಯಾರಣ್ಯಾಧಿಕಾರಿ ತ್ಯಾಗರಾಜ್‌, ಸಮಾಜ ಕಲ್ಯಾಣಧಿಕಾರಿ ಲಕ್ಷ್ಮೀದೇವಿ, ತೋಟಗಾರಿಕೆ ಇಲಾಖಾಧಿಕಾರಿ ಸುಹನಾ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮಕರಣಿಕೆ ಕವನಾ ಪ್ರಾರ್ಥಿಸಿ, ಗ್ರಾಮಕರಣಿಕ ತಿಪ್ಪೇಶಪ್ಪ ಕಾರ್ಯಕ್ರಮ ನಿರೂಪಿಸಿದರು.

ದೇವಚಳ್ಳ ಶಾಲೆ ಕಾಮಗಾರಿ: ಎರಡು ದೂರು ದಾಖಲು
ದೇವಚಳ್ಳ ಹಿ.ಪ್ರಾ. ಶಾಲಾ ಆಟದ ಮೈದಾನ ವಿಸ್ತರಣೆ ನರೇಗಾ ಯೋಜನೆಯಡಿ ಮಾನವ ಶ್ರಮದಡಿ ಆಗಬೇಕಿತ್ತು. ಆದರೆ ಇದನ್ನು ಜೆಸಿಬಿ ಯಂತ್ರದಲ್ಲಿ ಮಾಡಲಾಗಿದೆ. 80,000 ರೂ. ವೆಚ್ಚದ ಕಾಮಗಾರಿಗೆ 1.80 ಲಕ್ಷ ರೂ. ಬಿಲ್‌ ಮಾಡಲಾಗಿದೆ ಎಂದು ಹರಿಪ್ರಸಾದ್‌ ಚಳ್ಳ ದೂರು ನೀಡಿದರು. ಮೂರು ದಿನದೊಳಗೆ ಸ್ಥಳ ತನಿಖೆ ಮಾಡಿ ವರದಿ ಸಲ್ಲಿಸುವುದಾಗಿ ತಾ.ಪಂ. ಇಒ ಭವಾನಿಶಂಕರ್‌ ಅವರು ಡಿವೈಎಸ್‌ಪಿಗೆ ಉತ್ತರಿಸಿದರು. ಶಾಲಾ ಆವರಣದ ಮರವೊಂದನ್ನು ಕಡಿಸಿದ್ದರೂ ಅದರ ಹಣ ಎಸ್‌ಡಿಎಂಸಿಗೆ ಬಂದಿಲ್ಲ ಎಂದು ಹರಿಪ್ರಸಾದ್‌ ಚಳ್ಳ ದೂರು ನೀಡಿದರು. ಬಿಇಒ ಉತ್ತರಿಸಿ, ನಿಯಮ ಪ್ರಕಾರ ಶಾಲೆಯ ಸೊತ್ತುಗಳು ಮಾರಾಟವಾದರೆ ಹಣ ಎಸ್‌ಡಿಎಂಸಿಗೆ ಬರಬೇಕು. ಈ ಕುರಿತು ನನಗೂ ದೂರು ಬಂದಿದೆ. ವಿಚಾರಿಸಿದಾಗ ಗ್ರಾ.ಪಂ. ಸದಸ್ಯರೊಬ್ಬರು ಅರಣ್ಯ ಇಲಾಖೆಯ ಅನುಮತಿ ಪಡೆದು ಈ ಕೆಲಸ ಮಾಡಿರುವ ಮಾಹಿತಿ ದೊರೆತಿದೆ. ವಿಚಾರಣೆ ವೇಳೆ ಮರ ಇದ್ದ ಜಾಗದ ಕುರಿತಂತೆಯೂ ವ್ಯಾಜ್ಯ ಇದ್ದು, ಶಾಲಾ ಜಾಗ ಅಥವಾ ಖಾಸಗಿ ಜಾಗ ಎನ್ನುವುದು ದೃಢಪಟ್ಟಿಲ್ಲ ಎಂದು ಬಿಇಒ ಹೇಳಿದರು. ಕೂಡಲೇ ಸರ್ವೆ ಮಾಡಿಸಿ ವರದಿ ನೀಡುವಂತೆ ಸೂಚಿಸಿದ ಡಿವೈಎಸ್‌ಪಿ ವಿಜಯಪ್ರಸಾದ್‌, ದೇವಚಳ್ಳ ಶಾಲೆಯ ಕುರಿತಾದ ಎರಡು ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದರು.

ತ್ಯಾಜ್ಯ ವಿಲೇ: ಜಾಗದ ಕೊರತೆ
ನ.ಪಂ. ಆವರಣದಲ್ಲಿ ತ್ಯಾಜ್ಯ ಡಂಪಿಂಗ್‌ ಮಾಡಿದ ಪರಿಣಾಮ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ ಎಂದು ಡಿ.ಎಂ. ಶಾರೀಕ್‌ ದೂರಿನಲ್ಲಿ ಪ್ರಸ್ತಾವಿಸಿದರು. ತ್ಯಾಜ್ಯ ವಿಲೇವಾರಿಗೆ ಜಾಗ ಕೊರತೆ ಇದೆ ಎಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು. ನಗರದಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಒಂದಿಂಚು ಜಾಗವನ್ನು ಕಾದಿರಿಸಿಲ್ಲದಿರುವುದೇ ಈ ಸಮಸ್ಯೆಗೆ ಕಾರಣ. ತ್ಯಾಜ್ಯ ಸುಡುವ ವ್ಯವಸ್ಥೆಗೆ ಒಪ್ಪಿಗೆ ದೊರೆಯುತ್ತಿಲ್ಲ ಎಂದು ನ.ಪಂ. ಆಡಳಿತಾಧಿಕಾರಿ, ತಹಶೀಲ್ದಾರ್‌ ಕುಂಞಿ ಅಹ್ಮದ್‌ ಹೇಳಿದರು. ಅದಾಗ್ಯೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಯುತ್ತಿದೆ ಎಂದರು.

ಹಿರಿಯಡ್ಕ ಸೇತುವೆ ಅಪೂರ್ಣ
ಬಾಳುಗೋಡು ಸನಿಹದ ಹಿರಿಯಡ್ಕ ಹೊಳೆಗೆ ಸೇತುವೆ ಅಪೂರ್ಣ ಹಂತದಲ್ಲಿರುವ ಬಗ್ಗೆ ಶಾರೀಕ್‌ ದೂರು ನೀಡಿದರು. ಸಹಾಯಕ ಎಂಜಿನಿಯರ್‌ ಮಾತನಾಡಿ, ಇದು ಕೆಆರ್‌ಡಿಸಿಎಲ್‌ ಅನುದಾನದಲ್ಲಿ ಆಗಿರುವ ಕಾಮಗಾರಿ. ಇದು ಪೂರ್ಣಗೊಳ್ಳಬೇಕಿದ್ದರೆ ಇನ್ನೂ 35 ಲಕ್ಷ ರೂ. ಬೇಕು. ಒಂದು ವರ್ಷದ ಹಿಂದೆ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಈ ಬಗ್ಗೆ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಡಿವೈಎಸ್‌ಪಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next