ಪಠಾಣ್‌ಕೋಟ್, ಪಂಜಾಬ್ : ಕಠುವಾ ರೇಪ್ ಆ್ಯಂಡ್ ಮರ್ಡರ್ ಕೇಸಿನ ಎಂಟು ಆರೋಪಿಗಳ ಪೈಕಿ ಏಳು ಮಂದಿಯನ್ನು ಇಂದು ಇಲ್ಲಿನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಬಿಗಿ ಭದ್ರತೆಯಲ್ಲಿ ಹಾಜರುಪಡಿಸಲಾಯಿತು.
ಈ ವರ್ಷ ಜನವರಿಯಲ್ಲಿ ಜಮ್ಮು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಅಲೆಮಾರಿ ಮುಸ್ಲಿಂ ಜನಾಂಗದ 8ರ ಹರೆಯದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜಮ್ಮು ಕಾಶ್ಮೀರದಿಂದ ಪಠಾಣ್‌ಕೋಟ್ ಗೆ ವರ್ಗಾಯಿಸಿತ್ತು.
ಎಂಟು ಮಂದಿ ಆರೋಪಿಗಳ ಪೈಕಿ ಏಳು ಮಂದಿಯನ್ನು ಹಳೇ ಪಠಾಣ್‌ಕೋಟ್ – ದಿಲ್ಲಿ ಹೆದ್ದಾರಿಯಲ್ಲಿನ ಸೆಶನ್ಸ್ ನ್ಯಾಯಾಲಯ ಸಂಕೀರ್ಣಕ್ಕೆ ಬಸ್ಸಿನಲ್ಲಿ ಬಿಗಿ ಭದ್ರತೆಯೊಂದಿಗೆ ಕರೆ ತರಲಾಯಿತು. ಇವರನ್ನು ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ತೇಜ್‌ವಿಂದರ್ ಸಿಂಗ್ ಅವರ ಮುಂದೆ ಹಾಜರುಪಡಿಸಲಾಗುವುದು.
ಈ ಪ್ರಕರಣದ ಎಂಟನೇ ಆರೋಪಿಯು ಅಪ್ರಾಪ್ತ ವಯಸ್ಸಿನವನಾಗಿದ್ದು ಆತ ಕಠುವಾದಲ್ಲಿನ ಬಾಲಾಪರಾಧ ಕೋರ್ಟಿನಲ್ಲಿ ವಿಚಾರಣೆ ಎದುರಿಸಲಿದ್ದಾನೆ.
ಕಠುವಾ ರೇಪ್ ಆ್ಯಂಡ್ ಮರ್ಡರ್ ಕೇಸಿನ ವಿಚಾರಣೆಯನ್ನು ಗೌಪ್ಯತೆಯೊಂದಿಗೆ ನಡೆಸಬೇಕೆಂದು ಕಳೆದ ಮೇ 7ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.