Advertisement

ರಾಜಧಾನಿಯಲ್ಲಿ ಏಳು ಲಕ್ಷ ನಕಲಿ ಮತದಾರರು?

12:09 PM Apr 13, 2018 | |

ಬೆಂಗಳೂರು: “ಬೆಂಗಳೂರಿನ ಮತದಾರರು ಬರೀ ಆರೋಪ ಮಾಡುತ್ತಾರೆ. ತಮ್ಮ ಹಕ್ಕು ಚಲಾಯಿಸುವ ಸಂದರ್ಭ ಬಂದಾಗ ಅದರಿಂದ ದೂರ ಇರುತ್ತಾರೆ’ ಎಂಬ ಆಪಾದನೆ ಇದೆ. ಆದರೆ, ವಾಸ್ತವವಾಗಿ ಗ್ರಾಮೀಣ ಪ್ರದೇಶಗಳಿಗಿಂತ ನಗರದಲ್ಲಿ ಅತಿ ಹೆಚ್ಚು ನಕಲಿ ಮತದಾರರಿದ್ದು, ಮತದಾರರ ಲೆಕ್ಕಾಚಾರದಲ್ಲೇ ಲೋಪವಿದೆ!

Advertisement

ಹೌದು, ರಾಜ್ಯ ಚುನಾವಣಾ ಆಯೋಗ ಈಚೆಗೆ ಬಿಡುಗಡೆ ಮಾಡಿದ ಅಂತಿಮ ಮತದಾರರ ಪಟ್ಟಿಯಲ್ಲಿ ನಗರದಲ್ಲಿ ಹೆಚ್ಚು ಅನುಮಾನಾಸ್ಪದ ನಕಲಿ ಮತದಾರರು ಇರುವುದು ಪತ್ತೆಯಾಗಿದೆ. ಚುನಾವಣಾ ಪ್ರಕ್ರಿಯೆಗಳ ವಿಶ್ಲೇಷಕ ವಿಂಗ್‌ ಕಮಾಂಡರ್‌ ಪಿ.ಜಿ. ಭಟ್‌ ಇದನ್ನು ಪತ್ತೆಹಚ್ಚಿದ್ದಾರೆ. ಈ ಮೂಲಕ ನಗರದಲ್ಲಿ ಮತದಾನ ಪ್ರಮಾಣ ಕಡಿಮೆ ಆಗುತ್ತಿದೆ ಎಂಬ ಆರೋಪವನ್ನೇ ತಿರುವು-ಮುರುವುಗೊಳಿಸಿದ್ದಾರೆ. 

ಕಿತ್ತೂರು, ಬಸವ ಕಲ್ಯಾಣ, ಗಂಗಾವತಿ, ಹುಬ್ಬಳ್ಳಿ-ಧಾರವಾಡ ಕೇಂದ್ರ, ದಾವಣಗೆರೆ ಉತ್ತರ ಮತ್ತು ದಕ್ಷಿಣ, ಕಗ್ವಾಡ, ಭದ್ರಾವತಿ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳನ್ನು ಮತ್ತು ನಗರದಲ್ಲಿ ಕೆ.ಆರ್‌. ಪುರ, ಸರ್ವಜ್ಞನಗರ, ಶಿವಾಜಿನಗರ, ಶಾಂತಿನಗರ, ಸಿ.ವಿ. ರಾಮನ್‌ನಗರ, ಬಸವನಗುಡಿ, ಬಿಟಿಎಂ ಲೇಔಟ್‌, ಹೆಬ್ಟಾಳ, ಪುಲಕೇಶಿನಗರದ ಮತದಾರರ ವಿವರವನ್ನು ಕ್ರೋಡೀಕರಿಸಿ, ವಿಶ್ಲೇಷಣೆ ಮಾಡಲಾಗಿದೆ. ನಗರದಿಂದ ಹೊರಗಿನ ವಿಧಾನಸಭಾ ಕ್ಷೇತ್ರಗಳಲ್ಲಿ ನಕಲಿ ಮತದಾರರ ಪ್ರಮಾಣ ಕಡಿಮೆ ಇದ್ದರೆ, ನಗರ ವ್ಯಾಪ್ತಿಯಲ್ಲಿನ ಕ್ಷೇತ್ರಗಳಲ್ಲಿ ಏರಿಕೆ ಕ್ರಮದಲ್ಲಿ ಸಾಗುವುದು ಕಂಡುಬರುತ್ತದೆ. 

ನಕಲಿ ಪ್ರಕಾರಗಳು: ನಕಲಿ ಮತದಾರರನ್ನು ಒಂದೇ ಗುರುತಿನ ಚೀಟಿಯ ಸಂಖ್ಯೆಯಲ್ಲಿ ಬೇರೆ ಬೇರೆ ಹೆಸರುಗಳಿರುವುದು. ಬೂತ್‌ ಸಂಖ್ಯೆ ಮತ್ತು ಹೆಸರು ಒಂದೇ ಇದ್ದರೂ, ಮನೆ ಸಂಖ್ಯೆ ಮಾತ್ರ ಬದಲು ಆಗಿರುವುದು. ವ್ಯಕ್ತಿಯ ಹೆಸರು ಮತ್ತು ಆತನ ಸಂಬಂಧಿಕರ ಹೆಸರು, ಮನೆ ಸಂಖ್ಯೆ ಇರುವ ಎರಡಕ್ಕಿಂತ ಹೆಚ್ಚು ಬಾರಿ ದಾಖಲು ಮಾಡಿರುವುದು, ಒಂದು ಕಡೆ ಹೆಸರು ತೆಗೆದುಹಾಕದೆ, ಮತ್ತೂಂದೆಡೆ ಸೇರ್ಪಡೆಗೊಂಡಿರುವುದು ಸೇರಿದಂತೆ ಐದು ಪ್ರಕಾರಗಳನ್ನಾಗಿ ವಿಂಗಡಿಸಲಾಗಿದೆ.

ಈ ಮಾನದಂಡದ ಪ್ರಕಾರ ಉತ್ತರ ಕರ್ನಾಟಕದ ಕಾಗವಾಡ, ಕಿತ್ತೂರು, ಬಸವ ಕಲ್ಯಾಣ, ಗಂಗಾವತಿ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಮಧ್ಯ ಕರ್ನಾಟಕದ ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಭದ್ರಾವತಿ, ಶಿಕಾರಿಪುರ ಹಾಗೂ ನಗರದ 9 ಕ್ಷೇತ್ರಗಳು ಸೇರಿ 18 ಕ್ಷೇತ್ರಗಳಲ್ಲಿ ಸುಮಾರು 12.14 ಲಕ್ಷ ನಕಲಿ ಮತದಾರರಿದ್ದಾರೆ. ಈ ಪೈಕಿ ನಗರದಲ್ಲಿ 6.91 ಲಕ್ಷ ಹಾಗೂ ಗ್ರಾಮಾಂತರದಲ್ಲಿ 5.22 ಲಕ್ಷ ಅನುಮಾನಾಸ್ಪದ ನಕಲಿ ಮತದಾರರ ಗುರುತಿನ ಚೀಟಿಗಳು ಎಂದು ಅಂದಾಜಿಸಲಾಗಿದೆ.

Advertisement

ಇದರಲ್ಲಿ ಮೊದಲೆರಡು ಪ್ರಕಾರಗಳಲ್ಲಿರುವವರ ಮಾಹಿತಿ ಶೇ. 99.99ರಷ್ಟು ನಿಖರವಾಗಿದ್ದು, 38,870 ಮತದಾರರು ನಕಲಿ ಎಂದು ತಿಳಿದುಬಂದಿದೆ ಎಂದು ಪಿ.ಜಿ. ಭಟ್‌ ತಿಳಿಸುತ್ತಾರೆ. ಒಂದೇ ಗುರುತಿನ ಚೀಟಿಯ ಸಂಖ್ಯೆಯಲ್ಲಿ ಬೇರೆ ಬೇರೆ ಹೆಸರುಗಳಿರುವವರ ಮತದಾರರು ನಗರದ 9 ಕ್ಷೇತ್ರಗಳಲ್ಲಿ 9,700 ಇದ್ದರೆ, ಉಳಿದ 9 ಕ್ಷೇತ್ರಗಳಲ್ಲಿ 3,220 ಮತದಾರರು ಇದ್ದಾರೆ. ಅದೇ ರೀತಿ, ಬೂತ್‌ ಸಂಖ್ಯೆ ಮತ್ತು ಹೆಸರು ಒಂದೇ ಇದ್ದರೂ, ಮನೆ ಸಂಖ್ಯೆ ಮಾತ್ರ ಬದಲು ಆಗಿರುವವರು ನಗರದಲ್ಲಿ 16,666 ಇದ್ದರೆ, ಬೆಂಗಳೂರು ಹೊರತುಪಡಿಸಿ ಉಳಿದೆಡೆ 9,284 ನಕಲಿ ಇವೆ ಎಂದು ಮಾಹಿತಿ ನೀಡಿದರು.  

ನೂರಕ್ಕೆ ನೂರು ನಿಖರವಲ್ಲ; ಸ್ಪಷ್ಟನೆ: ಚುನಾವಣಾ ಆಯೋಗ ಪ್ರಕಟಿಸಿದ ಮತದಾರರ ಪಟ್ಟಿ ಪಿಡಿಎಫ್ನಲ್ಲಿದೆ. ಅದನ್ನು ಟೆಕ್ಸ್ಟ್ ಪಿಡಿಎಫ್ಗೆ ಪರಿವರ್ತಿಸಲಾಯಿತು. ನಂತರ ಎಕ್ಸ್‌ಎಲ್‌ ಮಾದರಿಗೆ ಹಾಕಲಾಯಿತು. ಪ್ರತಿ ಹೆಸರಿಗೆ ಒಂದು ಕೋಡ್‌ ನೀಡಲಾಯಿತು. ಅದನ್ನು ಇದಕ್ಕೆಂದೇ ವಿನ್ಯಾಸಗೊಳಿಸಿದ ಸಾಫ್ಟ್ವೇರ್‌ನಲ್ಲಿ ಪೇಸ್ಟ್‌ ಮಾಡಲಾಯಿತು. ನಂತರ ಮತದಾರರ ಗುರುತಿನ ಚೀಟಿ ಸಂಖ್ಯೆ, ಬೂತ್‌ ಸಂಖ್ಯೆ, ಮನೆ ಸಂಖ್ಯೆ, ವಿಳಾಸ, ಹೆಸರು ಮತ್ತು ಸಂಬಂಧಿಕರ ಹೆಸರನ್ನು ವಿಶ್ಲೇಷಸಲಾಯಿತು.

ಇದರಲ್ಲಿ ಗ್ರಾಮೀಣಾ ಭಾಗದಲ್ಲಿ ನಕಲಿ ಮತದಾರರ ಸಂಖ್ಯೆ ಕಡಿಮೆ ಇದ್ದರೆ, ನಗರದಲ್ಲಿ ಹೆಚ್ಚಾಗಿರುವುದು ತಿಳಿದುಬಂದಿತು. ನೂರಕ್ಕೆ ನೂರರಷ್ಟು ಇದೆಲ್ಲವೂ ನಿಖರ ಎಂದು ನಾನು ಹೇಳುವುದಿಲ್ಲ. ಫೋಟೋ ಸಹಿತ ವಿಶ್ಲೇಷಣೆ ಮಾಡಿದಾಗ, ಅದು ನಿಖರವಾಗುತ್ತದೆ. ಆದರೆ, ಫೋಟೋಗಳು ನಮಗೆ ಲಭ್ಯವಿಲ್ಲ. ಇದನ್ನು ಚುನಾವಣಾ ಆಯೋಗವೇ ಮಾಡಬಹುದು. ಕೇವಲ ಒಂದೆರಡು ತಾಸಿನ ಕೆಲಸ ಅಷ್ಟೇ ಎಂದೂ ಅವರು ಸ್ಪಷ್ಟಪಡಿಸುತ್ತಾರೆ.

ನಕಲಿ ಮತದಾರರ ವಿವರ
ಕ್ಷೇತ್ರ    ಒಟ್ಟು ಮತದಾರರು    ನಕಲಿ ಮತದಾರರು

-ಕೆ.ಆರ್‌.ಪುರ    4,36,939    1,27,692
-ಹೆಬ್ಟಾಳ    2,52,870    67,426
-ಪುಲಕೇಶಿನಗರ    2,32,001    77,105
-ಸರ್ವಜ್ಞನಗರ        3,34,541    100,990
-ಸಿ.ವಿ. ರಾಮನ್‌ ನಗರ    2,60,559    74,042
-ಶಿವಾಜಿನಗರ    1,91,530    50,808
-ಶಾಂತಿನಗರ    2,18,735    62,412
-ಬಸವನಗುಡಿ        2,38,614    62,062
-ಬಿಟಿಎಂ ಲೇಔಟ್‌    2,63,853    68,815

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next